More

    ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

    ಹಾಸನ: ಕೋವಿಡ್-19 ಸೃಷ್ಟಿಸಿರುವ ಆತಂಕವನ್ನು ಲೆಕ್ಕಿಸದೆ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


    ಕಡಿಮೆ ಗೌರವಧನ ಪಡೆದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ ವರದಿಯಾಗಿದೆ. ಆರೋಗ್ಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಇಷ್ಟೆಲ್ಲ ಸವಾಲು ಎದುರಿಸಿ ಕೆಲಸ ಮಾಡಿದರೂ ಕಾರ್ಯಕರ್ತೆಯರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿದರು.


    ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್‌ಗಳನ್ನು ನೀಡದೆ ಸರ್ಕಾರ ಆತಂಕಕ್ಕೆ ದೂಡಿದೆ. ನಿರ್ಲಕ್ಷೃದ ಪರಿಣಾಮ ಬೆಳಗಾವಿಯಲ್ಲಿ ಇಬ್ಬರು ಮತ್ತು ಕುಣಿಗಲ್ ಮತ್ತು ನರಗುಂದ ತಾಲೂಕಿನ ಕಾರ್ಯಕರ್ತೆಯರು ಕರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಯಾವುದೇ ರೀತಿಯ ರಕ್ಷಣೆ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.


    ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷತಾ ಸಲಕರಣೆ ಕಲ್ಪಿಸಬೇಕು ಮತ್ತು ಗೌರವ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.


    ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಅರವಿಂದ್ ಇತರರಿದ್ದರು.


    ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ: ಬೇಲೂರಿನಿಂದ ಬಿಳಿಕೆರೆವರೆಗೆ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ 373ಕ್ಕೆ ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


    ಹಾಸನದಿಂದ ಹೊಳೆನರಸೀಪುರ ಮಾರ್ಗ ರಸ್ತೆಗಾಗಿ ಸಂಬಂಧಪಟ್ಟ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದೇ ರೀತಿಯ ದುಂಡಾವರ್ತನೆ ಮುಂದುವರಿದರೆ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.


    ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಕರೊನಾ ಸಂಕಷ್ಟ, ಬೆಲೆ ಕುಸಿತದಿಂದ ಆರ್ಥಿಕ ದಿವಾಳಿಯಾಗಿರುವ ರೈತರನ್ನು ರಸ್ತೆ ಹೆಸರಿನಲ್ಲಿ ಮತ್ತಷ್ಟು ಶೋಷಿಸಲಾಗುತ್ತಿದೆ ಎಂದರು.


    ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಮೆಹಬೂಬ್ ಪಾಷಾ, ಲತಾ, ರಾಜಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts