More

    ಗೊಂದಲದ ಕಾನೂನುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿದ್ದು ಮೋದಿ

    ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆ, ಆರ್ಟಿಕಲ್ 370 ರದ್ದು, ತಲಾಖ್‌ನಂತಹ ಗೊಂದಲದಿಂದ ಕೂಡಿದ್ದ ಕಾನೂನುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಕಾನೂನು ಮತ್ತು ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಬಣ್ಣಿಸಿದರು.


    ಇಂದು ಭಾರತವನ್ನು ವಿಶ್ವವೇ ಕೊಂಡಾಡುತ್ತಿದೆ.ನರೇಂದ್ರ ಮೋದಿ ಅವರ ಆರು ವರ್ಷದ ಆಡಳಿತ ಭಾರತಕ್ಕೆ ಮೆರಗು ತಂದಿದೆ. ಕರೊನಾದಂತಹ ಸಂಕಷ್ಟದ ಸ್ಥಿತಿಯಲ್ಲಿ ರಾಷ್ಟ್ರದ ಜನರಿಗೆ ತೊಂದರೆಯಾಗದಂತೆ ಹಲವಾರು ಕ್ರಮಗಳ ಮೂಲಕ ರಕ್ಷಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಒಂದು ರಾಷ್ಟ್ರ ಒಂದೇ ರಾಷ್ಟ್ರಧ್ವಜ ಎಂಬಂತೆ ತಲಾಖ್ ವಿಚಾರದಲ್ಲಿಯೂ ಗಟ್ಟಿ ನಿರ್ಧಾರ ಕೈಗೊಂಡರು. ಒಂದು ಧರ್ಮದಲ್ಲಿ ಮಹಿಳೆ ವಿಚ್ಛೇದನ ಪಡೆಯಬೇಕಾದರೆ ವಿಪರೀತ ಕಾನೂನುಗಳನ್ನು ಅನುಸರಿಸಬೇಕಿತ್ತು. ಅದೆಲ್ಲದಕ್ಕೂ ನಮ್ಮ ಸರ್ಕಾರ ತಿಲಾಂಜಲಿ ಇಟ್ಟಿದೆ ಎಂದರು.


    ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ ಎಂದರೆ ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣ. ಇದರಿಂದಾಗಿ ಕಪ್ಪು ಹಣಕ್ಕೆ ಕಡಿವಾಣ ಹಾಕಿದಂತಾಯಿತು. ಈ ಅಮಾನ್ಯೀಕರಣದ ಬಗ್ಗೆ ಈ ಮೊದಲು ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು, ಆದರೆ ಕಾರ್ಯರೂಪಕ್ಕೆ ತರಲು ಆಗಿರಲಿಲ್ಲ ಎಂದರು.


    ಅದೇ ರೀತಿ ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಮಂಡನೆ ಮಾಡಿದಾಗಲೂ ಜನರಿಗೆ ಸರಿಯಾದ ಮಾಹಿತಿ ತಿಳಿಸದೆ ತಪ್ಪಾಗಿ ಅರ್ಥೈಸಿಕೊಂಡು ಅನೇಕರು ಗೊಂದಲ ಸೃಷ್ಟಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಶಾಸನಗಳನ್ನು ರಚಿಸಲಾಯಿತು. ವಿಶ್ವ ಮಟ್ಟದಲ್ಲಿ ಭಾರತ ಗೌರವದಿಂದ ತಲೆ ಎತ್ತುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.


    ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಕಾರ್ಯದರ್ಶಿ ವಿಜಯ ವಿಕ್ರಮ್, ಮುಖಂಡರಾದ ಎ.ಮಂಜು, ನವಿಲೆ ಅಣ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts