More

    ಜನತಾ ವಸತಿಗಳಿಗೆ ಬಾರದ ಅನುದಾನ

    ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ, ಗ್ರಾಪಂನ ಮೇಲಂತಸ್ತು ಕಟ್ಟಡ ಉದ್ಘಾಟನೆ

    ಚನ್ನರಾಯಪಟ್ಟಣ: ನಿರ್ಮಾಣಗೊಂಡಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಜನ ವಸತಿಗಳಿಗೆ ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
    ತಾಲೂಕಿನ ಹಿರೀಸಾವೆ ಹೋಬಳಿ ಜಿನ್ನೇನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಯೋಜನೆಯಡಿ 7.50 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಗ್ರಾಪಂನ ಮೇಲಂತಸ್ತು ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
    ವಸತಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ತಾಲೂಕಿನ ಸುಮಾರು 20 ಕೋಟಿ ರೂ. ಅನುದಾನ ಬಾಕಿ ಉಳಿದಿದೆ. ಈ ಬಗ್ಗೆ ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಮತ್ತೊಂದು ಸುತ್ತಿನ ಮಾತುಕತೆಯೊಂದಿಗೆ ಶೀಘ್ರವೇ ಮಂಜೂರು ಮಾಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
    ಕೃಷಿಹೊಂಡ ಹಾಗೂ ಬದು ನಿರ್ಮಾಣ ಸೇರಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಯೋಜನೆಗಳು ಲಭ್ಯವಿದ್ದು, ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢಗೊಳ್ಳಬೇಕು. 2 ಎಕರೆ ಕೃಷಿ ಜಮೀನಿನಲ್ಲಿ ಬದು ನಿರ್ಮಿಸಲು 26 ಸಾವಿರ ರೂ. ಹಾಗೂ 1 ಎಕರೆಗೆ 13 ಸಾವಿರ ರೂ. ಪ್ರೋತ್ಸಾಹಧನ ಸಿಗಲಿದೆ ಎಂದು ತಿಳಿಸಿದರು.
    ಕೊಬ್ಬರಿ ವಿಚಾರದಲ್ಲಿ ಮಧ್ಯವರ್ತಿಗಳಿಂದ ರೈತರಿಗೆ ತೊಂದರೆಯಾಗುತ್ತಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಫೇಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರ ತೆರೆಯುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಜತೆಗೆ ತೆಂಗು ಬೆಳೆಯನ್ನು ಪ್ರಧಾನಮಂತ್ರಿ ಯೋಜನೆಗೆ ಸೇರಿಸಲು ಒತ್ತಾಯಿಸಲಾಗಿದೆ ಎಂದರು.
    ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರನ್ನು ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ಎನ್.ಗಿರೀಶ್, ಸದಸ್ಯರಾದ ಎಂ.ಆರ್.ವಾಸು ಮತ್ತು ಅನಿತಾ ಕುಮಾರಸ್ವಾಮಿ, ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷೆ ಜಯಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts