More

    ಸಂಬಳ ಕೇಳಲು ಬಂದು ಸಿಕ್ಕಿಬಿದ್ದ ವಂಚಕನಿಗೆ ಜೀವನಾಧಾರವಾಗಿದ್ದ ಕೆಲಸವೂ ಹೋಯ್ತು!

    ಹಾಸನ: ಬ್ಯಾಂಕ್‌ಗೆ ಕಟ್ಟಬೇಕಿದ್ದ ಹಣವನ್ನು ಜೇಬಿಗಿಳಿಸಿ ನಾಪತ್ತೆಯಾಗಿದ್ದ ಭೂಪ ಸಂಬಳ ಕೇಳಲು ಬಂದು ಸಿಕ್ಕಿಬಿದ್ದಿರುವುದು ಮಾತ್ರವಲ್ಲದೆ ಕೆಲಸವನ್ನೂ ಕಳೆದುಕೊಂಡಿದ್ದಾನೆ.

    ನಗರದ ರಿಂಗ್ ರಸ್ತೆಯಲ್ಲಿರುವ ಕಾಸ್ಮೋಪಾಲಿಟಿನ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಶಶಿಧರ್ ಎಂಬಾತ ಸೋಮವಾರ ಸಿಕ್ಕಿಬಿದ್ದಿದ್ದು, ಪೊಲೀಸರು ನಡೆಸಿದ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ವಂಚಿಸಿದ್ದ 27 ಸಾವಿರ ರೂ. ವಸೂಲಿ ಮಾಡಲಾಗಿದ್ದು, ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

    ಪ್ರಕರಣ ಹಿನ್ನೆಲೆ: ಆರು ತಿಂಗಳ ಹಿಂದೆ ಅಸೋಸಿಯೇಷನ್ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದ ಶಶಿಧರ್‌ಗೆ ಮಾ.12ರಂದು ಬ್ಯಾಂಕಿಗೆ ಜಮೆ ಮಾಡಲೆಂದು ಕೊಟ್ಟಿದ್ದ 30,260 ರೂ.ಗಳಲ್ಲಿ 3,260 ರೂ. ಮಾತ್ರ ಕಟ್ಟಿ ಉಳಿದ 27 ಸಾವಿರ ರೂ. ಜೇಬಿಗೆ ಇಳಿಸಿದ್ದ. ಬ್ಯಾಂಕ್‌ನಲ್ಲಿಯೇ ಮತ್ತೊಂದು ಚಲನ್‌ನಲ್ಲಿ 30,260 ರೂ. ಪಾವತಿಸಿದ್ದೇನೆ ಎಂಬಂತೆ ಚಲನ್ ಫಾರಂ ಭರ್ತಿ ಮಾಡಿ ಬ್ಯಾಂಕ್ ಹೆಸರಿನ ನಕಲಿ ಸೀಲು ಹಾಗೂ ಸಹಿ ಮಾಡಿ ಬಾರ್ ಅಧಿಕಾರಿಗೆ ತಲುಪಿಸಿದ್ದನು.

    ಮಾ.24ರಿಂದ ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾದ ಪರಿಣಾಮ ಸಂಬಂಧಪಟ್ಟವರು ಆತ ಕೊಟ್ಟಿದ್ದ ಚಲನ್ ಪ್ರತಿ ಇಟ್ಟುಕೊಂಡು ಸುಮ್ಮನಾಗಿದ್ದರು. ಲಾಕ್‌ಡೌನ್ ಸಡಿಲಿಕೆ ಬಳಿಕ ಅಸೋಸಿಯೇಷನ್ ಬಾಗಿಲು ತೆರೆದಿದ್ದು, ಬ್ಯಾಂಕ್‌ಗೆ ಮಾ.12ರಂದು ಕೇವಲ 3,260 ರೂ. ಜಮೆ ಆಗಿರುವ ವಿಚಾರ ತಿಳಿದಿದೆ.

    ಅಸೋಸಿಯೇಷನ್ ವ್ಯವಸ್ಥಾಪಕ ಮೂರ್ತಿ ಕೂಡಲೇ ಬ್ಯಾಂಕ್‌ಗೆ ತೆರಳಿ ಮಾ.12ರ ಸಿಸಿ ಟಿವಿ ಕ್ಯಾಮರಾ ವಿಡಿಯೋ ಪರಿಶೀಲಿಸಿದ್ದಾರೆ. ಆಗ ಶಶಿಧರ್ ಪ್ರತ್ಯೇಕ ಚಲನ್ ಭರ್ತಿ ಮಾಡಿದ್ದು ತಿಳಿದುಬಂದಿದೆ.

    ತಪ್ಪೊಪ್ಪಿಗೆ: 27 ಸಾವಿರ ರೂ. ವಂಚಿಸಿ ಕಣ್ಮರೆಯಾಗಿದ್ದ ಶಶಿಧರ್ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಎರಡೂವರೆ ತಿಂಗಳ ಸಂಬಳ ನೀಡಿ ಎಂದು ಸೋಮವಾರ ಬಂದು ಸಿಕ್ಕಿಬಿದ್ದಿದ್ದಾನೆ. ಅಂದು ಮಾಡಿರುವ ಕರಾಮತ್ತನ್ನು ವಿವರಿಸಿದರೂ ತಪ್ಪೊಪ್ಪಿಕೊಳ್ಳದ ಕಾರಣ ಬಾರ್ ವ್ಯವಸ್ಥಾಪಕ ಬಡಾವಣೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದರು.

    ಪೊಲೀಸರು ಬರುತ್ತಿದ್ದಂತೆ ಪರಿಸ್ಥಿತಿ ಕೈ ಮೀರಿದ್ದನ್ನು ಅರಿತ ಶಶಿಧರ್ 27 ಸಾವಿರ ರೂ. ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಣವನ್ನು ವಾಪಸ್ ನೀಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts