More

    ಉಡುಪಿ ಯುವಕ ಹಾರ್ವರ್ಡ್ ‘ಮೇಸ್ಟು’

    ಕುಂದಾಪುರ: ಕಡು ಬಡತನವಿದ್ದರೂ, ಹೆತ್ತವರ ಒತ್ತಾಸೆಯಿಂದ ಉಡುಪಿಯ ಯುವಕನೊಬ್ಬ ಹಾರ್ವರ್ಡ್ ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗೌರವಕ್ಕೆ ಪಾತ್ರನಾಗಿದ್ದಾರೆ.
    ಪ್ರತಿಷ್ಠಿತ ಮುಂಬೈ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನ ಅಂತಿಮ ವರ್ಷದ ಪಿಎಚ್‌ಡಿ ವಿದ್ಯಾರ್ಥಿ ಹಾಗೂ ಸಂಶೋಧನಾ ವಿದ್ಯಾರ್ಥಿ ರಮೇಶ್ ನಾಯ್ಕ ಈ ಅವಕಾಶವಂತ. ಔರಂಗಾಬಾದ್‌ನ ವಾಟರ್ ಪಾಲಿಸಿ ಸೆಂಟರ್‌ನಲ್ಲಿ ವಿಸಿಟಿಂಗ್ ಫೆಲೋ ಆಗಿಯೂ ಕಾರ್ಯನಿರ್ವಹಿಸುತ್ತಿರುವ ರಮೇಶ್ ಪಿಎಚ್‌ಡಿ ಪಡೆಯುತ್ತಿರುವ ಕುಡುಬಿ ಸಮಾಜ ಪ್ರಥಮ ಯುವಕ.
    ಬರಗಾಲದ ಕೃಷಿ ಸ್ಥಿತಿ ಸ್ಥಾಪಕತ್ವ ಕುರಿತು ನಾನು ಸಂಶೋಧನೆ ಮಾಡುತ್ತಿದ್ದೇನೆ. ಹಾರ್ವರ್ಡ್ ಯುನಿವರ್ಸಿಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ವಾರದಲ್ಲಿ ಒಂದು ದಿನ 8 ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ. ನನಗೆ ಸಿಕ್ಕ ಭೋಧನಾ ವಿಷಯ ಯೂತ್ ಆ್ಯಂಡ್ ಹೋಮ್‌ಲೆಸ್‌ನೆಸ್. ಹಾರ್ವರ್ಡ್ ವಿವಿ ನನಗೆ ಪ್ರಿನ್ಸಿಪಲ್ ಇನ್‌ವೆಸ್ಟಿಗೇಟರ್ ಎಂಬ ಪದನಾಮ ನೀಡಿದೆ. ಮುಂದೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಪಡೆದು ಅಧ್ಯಯನ ಮುಂದುವರಿಸುವ ಮಾಡುವ ಗುರಿ ಇದೆ ಎನ್ನುತ್ತಾರೆ ರಮೇಶ್.
    ರಮೇಶ್ ಪ್ರಾಥಮಿಕ ಶಿಕ್ಷಣ ಪಡೆದದ್ದು ಸ್ವಂತ ಊರು ತಂತ್ರಾಡಿ ಸುತ್ತಮತ್ತಲಿನ ಶಾಲೆಗಳಲ್ಲಿ. ಬ್ರಹ್ಮಾವರ ಡಾ.ಎ.ವಿ.ಬಾಳಿಗಾ ಕಾಲೇಜಲ್ಲಿ ಬಿ.ಎಸ್.ಡಬ್ಲುೃ ಪದವಿ. ನೀನು ಎಷ್ಟು ಬೇಕಾದರೂ ಕಲಿ ಎನ್ನುವ ಹೆತ್ತವರ ಮಾತಿನಂತೆ ರಮೇಶ್ ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುತ್ತಾರೆ. ತಂದೆ ಮಂದಾರ್ತಿ ಪುಟ್ಟಯ್ಯ ನಾಯ್ಕ, ತಾಯಿ ಗಿರಿಜಾರ ಮಾತು ರಮೇಶ್ ಶೈಕ್ಷಣಿಕ ಬದುಕನ್ನೇ ಬದಲಾಯಿಸುತ್ತದೆ.
    ಮೈಸೂರಿನ ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್‌ನಲ್ಲಿ ಮಾಸ್ಟರ್ ಇನ್ ಡೆವಲಪ್ಮೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದಾಗ, ಧಾರವಾಡದ ಸ್ಕೋಪ್ ಸಂಸ್ಥೆಯಲ್ಲಿ ನೀರು ಮತ್ತು ನೈರ್ಮಲ್ಯ ಫೆಲೋಶಿಪ್‌ನ ಅವಕಾಶ ಲಭಿಸುತ್ತದೆ. ಆರು ತಿಂಗಳು ದೇಶದೆಲ್ಲೆಡೆ ತರಬೇತಿ ಪಡೆದು, ಧಾರವಾಡ ಜಿಲ್ಲೆ ಹಾರೋಬೆಳವಡಿ ಗ್ರಾಮದಲ್ಲಿ ಸಮುದಾಯದ ಜನರೊಂದಿಗೆ ನೀರು ಮತ್ತು ನೈರ್ಮಲ್ಯ, ಬಾವಿಗಳ ಮರುನಿರ್ಮಾಣ, ಸ್ವಚ್ಛತೆ ಬಗ್ಗೆ ಕೆಲಸ ಮಾಡುತ್ತಾರೆ. 2016-17ರಲ್ಲಿ ಮಾಸ್ಟರ್ ಆಫ್ ಫಿಲೋಸಫಿ ಮುಗಿಸಿ, 2017ರಲ್ಲಿ ಪಿಎಚ್‌ಡಿ ಮಾಡಲು ಮುಂದಾಗುತ್ತಾರೆ.
    2018ರಲ್ಲಿ 17 ದೇಶಗಳು ಪಾಲ್ಗೊಂಡ ಥಾಯ್ಲೆಂಡ್ ಸಮ್ಮರ್ ಸ್ಕೂಲ್ ವಿಚಾರ ಸಂಕಿರಣದಲ್ಲಿ ಭಾರತದಿಂದ ಆಯ್ಕೆಯಾದ ಇಬ್ಬರಲ್ಲಿ ರಮೇಶ್ ಒಬ್ಬರು. ಅಲ್ಲಿನ ಕೃಷಿ, ಪರಿಸರ, ಹಾಗೂ ಸಮುದಾಯದ ಜನರೊಂದಿಗೆ ವಿಚಾರ ವಿನಿಮಯಕ್ಕೆ ಅವಕಾಶವಾಯಿತು. 2019ರಲ್ಲಿ ಸ್ವೀಡನ್, ಇಂಡೋನೇಶಿಯಾ ಮತ್ತು ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲೂ ಪ್ರಬಂಧ ಮಂಡಿಸಿದ್ದರು.

    ಕೂಲಿ ಕೆಲಸ ಮಾಡಿ ಆಸರೆ: ಇಷ್ಟೆಲ್ಲ ಸಾಧಿಸಿದ ರಮೇಶ್ ಕುಟುಂಬ ನಿರ್ವಹಣೆಗೆ ನಂಬಿಕೊಂಡಿದ್ದು ಕೃಷಿ ಕೂಲಿಯನ್ನು. ತಂದೆ, ತಾಯಿ, ಸಹೋದರ ಸಹಿತ ಎಲ್ಲರೂ ಕೂಲಿ ಕೆಲಸ ಮಾಡುವವರು. ‘ಮೂರು ಜನ ಮಕ್ಕಳು ಕಲಿಯಲಿಲ್ಲ, ನೀನಾದರೂ ಕಲಿ. ಎಷ್ಟು ಸಾಧ್ಯವೋ, ಅಷ್ಟು ಓದು, ನಾನಿದ್ದೇನೆ’ ಎಂದು ತಾಯಿ ಹೇಳಿದ್ದೇ ರಮೇಶ್ ಕಲಿಕೆ ದಾಹ ಹೆಚ್ಚಿಸಿದ್ದು. ಅದರಂತೆ ಹೆತ್ತವರು ಕೂಲಿ ಕೆಲಸ ಮಾಡಿ ಆಸರೆಯಾಗಿ ನಿಂತರು. ಇದು ರಮೇಶ್ ಪ್ರತಿ ಮಾತಿನಲ್ಲೂ ವ್ಯಕ್ತವಾಗುತ್ತದೆ.

    ವಿಶ್ವ ಕೊಂಕಣಿ ಕೇಂದ್ರ 2ನೇ ಮನೆ: ನನ್ನ ಸಾಧನೆ ಹಿಂದೆ ಇರುವ ವಿಶ್ವ ಕೊಂಕಣಿ ಕೇಂದ್ರ ನನಗೆ ಎರಡನೇ ಮನೆ ಇದ್ದಂತೆ. ಕಳೆದ 10 ವರ್ಷಗಳಿಂದ ನನಗೆ ಶೈಕ್ಷಣಿಕ ವಿಚಾರದಲ್ಲಿ ಮಾರ್ಗದರ್ಶನ, ಆರ್ಥಿಕ ನೆರವು ನೀಡುತ್ತಿದೆ. ಮುಂಬೈ ಟಾಟ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮಾಡಲು ಕಾರಣವೂ ಇದೇ ಕೇಂದ್ರ. ಮೋಹನದಾಸ್ ಪೈ ನನಗೆ ಸ್ಫೂರ್ತಿ.

    ಅತ್ಯಂತ ಹಿಂದುಳಿದ ಸಮುದಾಯ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲಭಾಗಗಳಲ್ಲಿ ವಾಸವಾಗಿರುವ ಕುಡುಬಿ ಜನರು ಅತ್ಯಂತ ಹಿಂದುಳಿದ ಸಮಾಜಕ್ಕೆ ಸೇರಿದವರು. ಅವರು ಅರ್ಥಿಕವಾಗಿ, ಶೈಕ್ಷಣಿಕವಾಗಿ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ. ಒಟ್ಟು ಜನಸಂಖ್ಯೆಯೂ ಬರೀ 36 ಸಾವಿರ (ದ.ಕ. 20 ಸಾವಿರ, ಉಡುಪಿ 16 ಸಾವಿರ). ಶೈಕ್ಷಣಿಕ ಪ್ರಗತಿ ಶೇ.60, ಬಡತನ ರೇಖೆಗಿಂತ ಕೆಳಗೆ ಶೇ.75 ಇದ್ದಾರೆ. ಶೇ.80ರಷ್ಟು ಜನ ಕೂಲಿ ನಂಬಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಅರ್ಧಕ್ಕೆ ಶಾಲೆ ಬಿಟ್ಟವರೇ ಹೆಚ್ಚು. ಹೆಣ್ಣು ಮಕ್ಕಳು ಶಿಕ್ಷಣ ಮೊಟಕಗೊಳಿಸಿ, ಗೇರು ಬೀಜ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ. ರಾಜಕೀಯವಾಗಿ ತಾಲೂಕು ಪಂಚಾಯಿತಿ ಸದಸ್ಯತ್ವದಿಂದ ಮೇಲೆಕ್ಕೇರಿಲ್ಲ.

    ನನ್ನ ಸಾಧನೆಯ ಹಿಂದೆ ಸಮಾಜದ ಕೊಡುಗೆ ಇದ್ದು, ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ. ಶಿಕ್ಷಣ, ವಿದ್ಯಾರ್ಥಿವೇತನಗಳು, ಸರ್ಕಾರಿ ಸೌಲಭ್ಯ, ಹೊರಪ್ರಪಂಚದ ಜ್ಞಾನ ಸಹಿತ ಎಲ್ಲ ಜಾಗೃತಿ ಅರಿವು ಮೂಡಿಸಬೇಕಿದೆ. ಕುಡುಬಿ ಸಮಾಜವನ್ನು ಬೆಳಕಿನೆಡೆಗೆ ತರುವ ಪ್ರಯತ್ನ ಮಾಡುತ್ತೇನೆ.
    | ರಮೇಶ್ ನಾಯ್ಕ, ಪಿಎಚ್‌ಡಿ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts