More

    ಚುಟುಕು ಸಾಹಿತ್ಯ ಜಾನಪದದ ತಾಯಿಬೇರು- ಚುಸಾಪ ಜಿಲ್ಲಾಧ್ಯಕ್ಷ ಎಲ್.ಹಾಲ್ಯನಾಯ್ಕ ಅಭಿಮತ

    ಹರಪನಹಳ್ಳಿ: ಚುಟುಕು ಸಾಹಿತ್ಯ ಜಾನಪದ ವೃಕ್ಷದ ತಾಯಿಬೇರು ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಲ್.ಹಾಲ್ಯನಾಯ್ಕ ಹೇಳಿದರು.

    ಪಟ್ಟಣದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ಶನಿವಾರ ಆಯೋಜಿಸಿದ್ದ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

    12 ಮತ್ತು 16ನೇ ಶತಮಾನದಲ್ಲಿ ಬಸವಣ್ಣ, ಸರ್ವಜ್ಞರಂತಹ ದಾರ್ಶನಿಕರು, ಸಾಹಿತ್ಯದ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಈಗಿನ ಸಮಾಜ ಓದು, ಬರಹದ ಬದಲು ಮೊಬೈಲ್ ಬಳಕೆಗೆ ಹೆಚ್ಚು ಆದ್ಯತೆ ನೀಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಕಸಾಪ ತಾಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಹರಪನಹಳ್ಳಿ ಗಂಡು ಮೆಟ್ಟಿದ ನಾಡು. ಕವಿಗಳು, ಜಾನಪದ ಪದದ ತವರು. ಬೀಚಿ, ಭೀಮವ್ವ, ಮುದೆನೂರು ಸಂಗಣ್ಣ, ಕುಂಬಾ ಸದಾಶಿವಪ್ಪನಂತಹ ಅನೇಕ ಸಾಹಿತಿಗಳನ್ನು ನೀಡಿದ ತಾಲೂಕು. ಇಂತಹ ನಾಡಿನ ಯುವಕರನ್ನು ಮೊಬೈಲ್‌ಗೀಳಿನಿಂದ ಹೊರದಂದು ಕನ್ನಡಾಭಿಮಾನ, ಸಾಹಿತ್ಯ ಕೃಷಿಯ ಅಭಿರುಚಿ ಬೆಳೆಸಲು ತಾಲೂಕು ಚುಸಾಪ ಮತ್ತು ಕಸಾಪ ಶ್ರಮಿಸುತ್ತಿವೆ ಎಂದರು.

    ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಜ್ಞಾನ ಹೆಚ್ಚಳ, ಎಲ್ಲರನ್ನೂ ನಗಿಸುವ, ಮನೋಭಾವ ಬದಲಿಸುವ ಶಕ್ತಿ ಚುಟುಕು ಸಾಹಿತ್ಯಕ್ಕೆ ಇದೆ ಎಂದರು.

    ಎಡಿಬಿ ಕಾಲೇಜು ಪ್ರಾಧ್ಯಾಪಕ ಡಾ.ಎ.ಎಂ.ರಾಜಶೇಖರಯ್ಯ ವಿಶೇಷ ಉಪನ್ಯಾಸ ನೀಡಿ, ಚುಟುಕು ಚೇಳು ಕಡಿದಂತೆ, ಚಿಕ್ಕದಾದರೂ ಮಾರ್ಮಿಕವಾಗಿರುತ್ತದೆ ಎಂದು ಚುಟುಕು ಸಾಹಿತ್ಯ ನಡೆದು ಬಂದ ದಾರಿ ಬಗ್ಗೆ ತಿಳಿಸಿದರು.

    ಚುಸಾಪ ಗೌರವಾಧ್ಯಕ್ಷ ಪೂಜಾರ ಷಣ್ಮುಖಪ್ಪ, ತಾಲೂಕು ಅಧ್ಯಕ್ಷ ಬಣಕಾರ ರಾಜಶೇಖರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ, ಜಿಲ್ಲಾ ಗೌರವ ಸಲಹೆಗಾರರಾದ ಸುಭದ್ರಮ್ಮ, ಚುಟುಕು ಸಾಹಿತ್ಯ ಹೆಮ್ಮರವಾಗಿ ಬೆಳೆಯಲು ಸರ್ವರ ಸಹಕಾರ ಅಗತ್ಯ ಎಂದರು.

    ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ಚನ್ನೇಶ ಬಡಿಗೇರಗೆ ಸನ್ಮಾನ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ಬಳಿಕ 18 ಹಿರಿಯ, ಯುವ ಕವಿಗಳಿಂದ ಚುಟುಕು ಸಾಹಿತ್ಯ ಕುರಿತ ಕವನಗಳ ವಾಚನ ನಡೆಯಿತು.

    ಕಸಾಪ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಕಾರ್ಯಕಾರಿ ಮಂಡಳಿ ಸದಸ್ಯೆ ಪದ್ಮಲತಾ, ಉಪಾಧ್ಯಕ್ಷ ತೆಲಿಗಿ ವೀರಭದ್ರಪ್ಪ, ಎಚ್.ದೇವರಾಜ, ಪ್ರಧಾನ ಕಾರ್ಯದರ್ಶಿ ಪಿ.ಕರಿಬಸಪ್ಪ, ಸಂಘಟನಾ ಕಾರ್ಯದರ್ಶಿ ಉದಯಕುಮಾರ ಬಡಿಗೇರ, ಸಹಕಾರ್ಯದರ್ಶಿ ಗೀತಾ ಕಬ್ಬಳ್ಳಿ, ನಾಗರಾಜ ಪಾಟೀಲ, ಖಜಾಂಚಿ ವಿಠೋಬ ಎಸ್.ಎಚ್., ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಜಿ. ಉದಯಶಂಕರ, ಎಚ್.ಶಾಂತ, ನಾಗರಾಜ ಬಿ., ಶೇಖರಗೌಡ ಪಾಟೀಲ್, ಎಚ್.ಕೊಟ್ರೇಶ, ಇಸ್ಮಾಯಿಲ್ ಎಲಿಗಾರ, ವಿ.ಬಿ.ಮಲ್ಲೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts