More

    ಮೈಲಿಗೆ ತೊಳೆವ ಮಡಿವಾಳ, ಸವಿತಾ ಸಮಾಜ

    ಹರಪನಹಳ್ಳಿ: ಅತ್ಯಂತ ಹಿಂದುಳಿದ ಮಡಿವಾಳ ಹಾಗೂ ಸವಿತಾ ಸಮಾಜಗಳು ಪ್ರತಿ ದಿನ ಎಲ್ಲರ ಮೈಲಿಗೆ ತೊಳೆಯುತ್ತವೆ ಎಂದು ಜಿಪಂ ಸದಸ್ಯೆ ಆರುಂಡಿ ಸುವರ್ಣ ನಾಗರಾಜ ಹೇಳಿದರು.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

    ಎಲ್ಲ ಅವಕಾಶಗಳಿಂದ ವಂಚಿತಗೊಂಡ ಚಿಕ್ಕ ಹಾಗೂ ಚೊಕ್ಕ ಸಮಾಜಗಳು ಸವಿತಾ ಮತ್ತು ಮಡಿವಾಳ ಸಮಾಜಗಳು. ಮಡಿವಾಳ ಮಾಚಿದೇವ ವೀರಭದ್ರೇಶ್ವರನ ಅವತಾರ. ಇವರು ಅನೇಕ ಉತ್ತಮ ವಚನಗಳನ್ನು ರಚಿಸಿದ್ದಾರೆ ಎಂದರು.

    ಮಡಿವಾಳ ಸಮಾಜದ ಮುಖಂಡ, ಪುರಸಭೆ ಸದಸ್ಯ ಎಚ್.ಎಂ.ಅಶೋಕ್‌ಹರಾಳ್ ಮಾತನಾಡಿ, ಕಾಯಕ ಸಮಾಜ ಕಾಯಕದಿಂದಲೇ ಬದುಕು ಕಟ್ಟಿಕೊಂಡಿವೆ. ಪುರಾತನ ಕಾಲದಿಂದಲೂ ಜನಸಾಮಾನ್ಯರ ಅತ್ಯವಶ್ಯಗಳನ್ನು ನೀಗಿಸುವ ಪರಿಶ್ರಮದಲ್ಲಿ ಜೀವನ ನಡೆಸುತ್ತಿದ್ದರೂ, ಮುಖ್ಯವಾಹಿನಿಯಲ್ಲಿ ಮಾನ್ಯತೆ ಸಿಗುತ್ತಿಲ್ಲ ಎನ್ನುವುದು ವಿಷಾದನೀಯ. ಇನ್ನು ಮುಂದಾದರೂ ಆಳುವ ಸರ್ಕಾರಗಳು ಸಣ್ಣ ಸಮುದಾಯಗಳನ್ನು ಗುರುತಿಸಿ, ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಿ ಎಂದರು.

    ತಹಸೀಲ್ದಾರ್ ಡಾ.ನಾಗವೇಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಯಂತಿಗಳು ಸಮುದಾಯಕ್ಕೆ ಸೀಮಿತವಾಗಬಾರದು. ಎಲ್ಲ ಮಹನೀಯರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಇವರೆಲ್ಲರ ಜೀವನ, ತತ್ವ ತಿಳಿದುಕೊಂಡು ಅಳವಡಿಸಿಕೊಳ್ಳಬೇಕು ಎಂದರು.

    ಸವಿತಾ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಮಾನಪಾಡು ಮಾತನಾಡಿ, ಈ ಎರಡೂ ಸಮಾಜದವರು ಅತ್ಯಂತ ಹಿಂದುಳಿದ ಸಮಾಜಗಳಾಗಿದ್ದು, ಎರಡೂ ಸಮಾಜಗಳ ನಿಗಮ ಮಂಡಳಿಗಳನ್ನು ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

    ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ, ಶಿಕ್ಷಕ ಎನ್.ನಾಗರಾಜ ಉಪನ್ಯಾಸ ನೀಡಿದರು. ಜಿಪಂ ಸದಸ್ಯ ಡಿ.ಸಿದ್ದಪ್ಪ, ಡಾ.ಭೀಮಣ್ಣ, ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಎಂ.ಅಂಜಿನಪ್ಪ, ಸವಿತಾ ಸಮಾಜದ ಮುಖಂಡರಾದ ವಿ.ಶೇಷಣ್ಣ, ಶಂಕರ, ಕವಿತಾ ಸುರೇಶ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts