More

    ಹಾನಿಯ ನೋವಲ್ಲೇ ಹಿಂಗಾರು ಬಿತ್ತನೆ

    ಬೆಳಗಾವಿ: ಕರೊನಾ ಸೋಂಕಿನ ಕಾಟ ಹಾಗೂ ಅತಿವೃಷ್ಟಿಯಿಂದ ಆದಾಯವಿಲ್ಲದೆ ಸಮಸ್ಯೆಗೆ ಸಿಲುಕಿರುವ ರೈತರು, ಅನುಭವಿಸಿದ ನೋವಿನಲ್ಲೇ ಮತ್ತೆ ಹಿಂಗಾರು ಹಂಗಾಮು ಬಿತ್ತನೆಯಲ್ಲಿ ತೊಡಗಿದ್ದಾರೆ.

    ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ, ಶೇಂಗಾ, ಹೆಸರು, ಸಜ್ಜಿ, ಉದ್ದು, ಸೂರ್ಯಕಾಂತಿ, ಹತ್ತಿ, ಭತ್ತ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿ ರೈತರು ಆರ್ಥಿಕ ಸಮಸ್ಯೆಗೆ ಸಿಲುಕಿದ್ದರು. ಸದ್ಯ ಮಳೆ ಅಬ್ಬರ ತಗ್ಗಿದ ಕಾರಣ ರೈತರು ಜೋಳ, ಕಡಲೆ, ಗೋಧಿ ಇನ್ನಿತರ ಬೆಳೆಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ. 30ರಷ್ಟು ಬಿತ್ತನೆ ಪೂರ್ಣಗೊಂಡಿದೆ.

    ಬಿತ್ತನೆ ಗುರಿ: ಹಿಂಗಾರು ಹಂಗಾಮು ಪೂರ್ವದಲ್ಲಿಯೇ ಮಳೆ ಪ್ರಾರಂಭವಾಗಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಇಲಾಖೆಯು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ನಾಟಿ ಸೇರಿದಂತೆ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಆಶ್ರಿತ ಪ್ರದೇಶ ಇರುವುದರಿಂದ 68,435 ಕ್ವಿಂಟಾಲ್ ಬಿತ್ತನೆ ಬೀಜ, 42 ಸಾವಿರ ಟನ್ ರಸಗೊಬ್ಬರ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಆದರೆ, ಅಕ್ಟೋಬರ್ 3ನೇ ವಾರದವರೆಗೆ ನಿರಂತರ ಮಳೆ ಸುರಿದ ಕಾರಣದಿಂದ ರೈತರು ಬಿತ್ತನೆಗೆ ಹಿಂದೇಟು ಹಾಕಿದ್ದರು.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ 11 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕೃಷಿಗಾಗಿ ಮತ್ತೆ ಸಾಲದ ಮೊರೆ: ಅತಿವೃಷ್ಟಿಯಿಂದಾಗಿ ಮುಂಗಾರು ಹಂಗಾಮಿನ ಬೆಳೆ ನಾಶವಾಗಿದ್ದರಿಂದ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಹಿಂಗಾರು ಹಂಗಾಮಿನ ಬಿತ್ತನೆಗೆ ಮತ್ತೆ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಸದ್ಯ ಕುಟುಂಬ ನಿರ್ವಹಣೆ ಮಾಡುವುದೇ ಸವಾಲಾಗಿದೆ. ಸರ್ಕಾರ ಉಚಿತವಾಗಿ ಬೀಜ, ಗೊಬ್ಬರ ನೀಡಲಿಲ್ಲ. ಜತೆಗೆ, ಕಾರ್ಮಿಕರ ಕೂಲಿ 180 ರಿಂದ 300 ರೂ.ಗೆ ಏರಿಕೆಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಾದರೆ ಕನಿಷ್ಠ 12 ರಿಂದ 17 ಸಾವಿರ ರೂ.ವರೆಗೆ ಖರ್ಚಾಗುತ್ತದೆ. ಧಾರಾಕಾರ ಮಳೆಯಿಂದ ಜಮೀನುಗಳಲ್ಲಿ ಕಸ ತುಂಬಿದ್ದು, ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರಾದ ಹನುಮಂತ ಪಾಟೀಲ, ಮಾರುತಿ ಕೆಳಗಡೆ.

    ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಇಲ್ಲಿಯವರೆಗೆ 36,987ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಕೆಲ ಕಡೆ ಭೂಮಿಯಲ್ಲಿ ಅಧಿಕ ಪ್ರಮಾಣದಲ್ಲಿ ತೇವಾಂಶ ಇರುವುದರಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುವುದು.
    | ಶಿವನಗೌಡ ಪಾಟೀಲ ಜಂಟಿ ನಿರ್ದೇಶಕ, ಕೃಷಿ ಇಲಾಖೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts