More

    ಶ್ರದ್ಧಾಭಕ್ತಿಯಿಂದ ನಡೆದ ‘ಹರಿಸೇವೆ’

    ಕಲಾದಗಿ: ತುಳಸಿಗೇರಿ ಹನುಮಂತದೇವರ ಕಾರ್ತಿಕೋತ್ಸವದ ನಿಮಿತ್ತ ಗೋಪಾಳ ತುಂಬಿಸುವ ಹಾಗೂ ಭಕ್ತರಿಗೆ ವಿಶೇಷವಾದ ‘ಕಿಚಡಿ’ ಪ್ರಸಾದ ನೀಡುವ ‘ಹರಿಸೇವೆ’ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
    ಸಂಜೆ 5 ಗಂಟೆ ವೇಳೆಗೆ ದೇವಾಲಯದ ಪೂಜಾರರ, 9 ಜನ ದೇವಾಲಯ ಸೇವಕ ಮನೆತನದವರ ಸಮ್ಮುಖದಲ್ಲಿ ಸಂಪ್ರದಾಯದಂತೆ 12 ದೇವರಿಗೆ ಕಿಚಡಿ ನೇವೇದ್ಯೆ, ಮಹಾಮಂಗಳಾರತಿ, ಗೋವಿಂದನ ನಾಮಸ್ಮರಣೆಗಳು ನಡೆದವು. ನಂತರ ಸಾಲಿನಲ್ಲಿದ್ದ ಗೋಪಾಳ ತುಂಬಿಸಲಾಯಿತು. ಸಾಲುಹಿಡಿದು ಕುಳಿತ ಭಕ್ತರಿಗೆ ಪರಂಪರೆಯಂತೆ ಕುಂದರಗಿ ಗ್ರಾಮದ ಕುಂಬಾರ ಮನೆತನದ ತಿಪ್ಪಣ್ಣಕುಂಬಾರ ಮನೆತನದವರು ಮಾಡಿಕೊಂಡು ತಂದಿದ್ದ ಕಿಚಡಿ ಪ್ರಸಾದ ನೀಡಲಾಯಿತು.
    ‘ಕಿಚಡಿ’ ಪ್ರಸಾದದ ಮಹತ್ವ
    ‘ಕಿಚಡಿ’ಪ್ರಸಾದಕ್ಕೆ ಅದರದೇ ಆದ ಮಹತ್ವವಿದೆ. ಕಿಚಿಡಿ ಪ್ರಸಾದಕ್ಕೆಂದು ವಿವಿಧೆಡೆಯಿಂದ ಅನೇಕ ಭಕ್ತರು ಬರುತ್ತಾರೆ. ಈ ಪ್ರಸಾದವನ್ನು ಅಲ್ಲೊಂದಿಷ್ಟು ಸೇವಿಸಿ ಇನ್ನಷ್ಟನ್ನು ಮನೆಗೊಯ್ಯದು ಅದನ್ನು ತಮ್ಮ ಕೃಷಿಭೂಮಿಯಲ್ಲಿ ಎರಚುತ್ತಾರೆ. ಇದರಿಂದ ಭೂಮಿಯಲ್ಲಿ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಜನರದ್ದಾಗಿದೆ.
    ಇಂದು ಕಾರ್ತಿಕೋತ್ಸವ ಸಂಪನ್ನ:
    ಅಸಂಖ್ಯಾತ ಭಕ್ತರ ಆರಾಧ್ಯ ದೈವ ತುಳಸಿಗೇರಿ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವ ಜ.1ರಂದು ಗ್ರಾಮದಲ್ಲಿ ಪಲ್ಲಕ್ಕಿ ಮಹೋತ್ಸವದೊಂದಿಗೆ ಸಂಪನ್ನವಾಗಲಿದೆ.
    ಸೋಮವಾರ ಬೆಳಗ್ಗೆ 11 ಗಂಟೆಯಿಂದ ಗ್ರಾಮದ ಕೊತ್ತಲೇಶ್ವರ ಗುಡಿಯಿಂದ ದೇವರ ಕುದುರೆ ‘ತುಳಸಿಗೇರೆಪ್ಪನ’ ಮುಂಚೂಣಿಯಲ್ಲಿ ಆರಂಭವಾಗುವ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ‘ಮನೆಸ್ವಾಮಿ’ ದೇವಸ್ಥಾನದಲ್ಲಿ ಸಮಾಪನಗೊಳ್ಳುವುದರೊಂದಿಗೆ ಕಾರ್ತಿಕೋತ್ಸವ ಸಂಪನ್ನವಾಗಲಿದೆ.
    ಪಲ್ಲಕ್ಕಿಯತ್ತ ಬೆಂಡು ಬೆತ್ತಾಸ
    ಬಹುತೇಕ ಜಾತ್ರಾ ಮಹೋತ್ಸವಗಳಲ್ಲಿ ಭಕ್ತರು ತೇರು, ಪಲ್ಲಕ್ಕಿಯತ್ತ ಉತ್ತತ್ತಿ ತೂರುವುದು ಸಾಮಾನ್ಯ. ಆದರೆ, ಇಲ್ಲಿ ನಡೆಯುವ ಹನುಮಂತ ದೇವರ ಪಲ್ಲಕ್ಕಿ ಮಹೋತ್ಸವದಲ್ಲಿ ಮಾತ್ರ ಸೇರಿದ ಭಕ್ತಸಮೂಹ ಪಲ್ಲಕ್ಕಿಯತ್ತ ಬೆಂಡುಬೆತ್ತಾಸ ಹಾಗೂ ಕಲ್ಲುಸಕ್ಕರೆ ತೂರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts