More

    ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೂ ಸೋಲುಣಿಸಿದ ಪಾಕಿಸ್ತಾನ; ಭಾರತದ ಮೇಲೇನು ಪರಿಣಾಮ?

    ಶಾರ್ಜಾ: ಅನುಭವಿ ಶೋಯಿಬ್ ಮಲಿಕ್ (26*ರನ್, 20 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಆಸಿಫ್​ ಅಲಿ (27*ರನ್, 12 ಎಸೆತ, 1 ಬೌಂಡರಿ, 3 ಸಿಕ್ಸರ್) ನಡುವಿನ ಅಜೇಯ ಜತೆಯಾಟದ ನೆರವಿನಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರ ಘಟ್ಟದಲ್ಲಿ ಸತತ 2ನೇ ಜಯ ದಾಖಲಿಸಿದೆ. ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಪಾಕ್ ತಂಡ 5 ವಿಕೆಟ್ ಗಳಿಂದ ಜಯಿಸಿತು. ಇದರೊಂದಿಗೆ ಗ್ರೂಪ್-2ರಲ್ಲಿ ಬಾಬರ್ ಅಜಮ್ ಬಳಗದ ಸೆಮಿಫೈನಲ್ ಆಸೆ ವೃದ್ಧಿಸಿದ್ದರೆ, ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಇನ್ನೊಂದು ಸೆಮಿಫೈನಲಿಸ್ಟ್ ಸ್ಥಾನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಿವೀಸ್​ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆದ್ದರೆ ಉಪಾಂತ್ಯ ಸ್ಥಾನ ಬಹುತೇಕ ಖಚಿತವಾಗಲಿದೆ. ಯಾಕೆಂದರೆ ಮುಂದಿನ ಪಂದ್ಯಗಳಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಡ್​, ನಮೀಬಿಯದಂಥ ದುರ್ಬಲ ತಂಡಗಳು ಎದುರಾಗಲಿವೆ. ಒಂದು ವೇಳೆ ಸೋತರೆ, ಭಾರತ ತಂಡ ಕೊನೇ 3 ಪಂದ್ಯಗಳಲ್ಲಿ ಗೆದ್ದರೂ ಉಪಾಂತ್ಯಕ್ಕೇರುವುದು ಕಷ್ಟಕರವಾಗಲಿದೆ. ಆಗ ಇತರ ಪಂದ್ಯಗಳ ಫಲಿತಾಂಶವನ್ನೂ ಅವಲಂಬಿಸಬೇಕಾಗುತ್ತದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿವೀಸ್, ವೇಗಿ ಹ್ಯಾರಿಸ್ ರವೂಫ್​ (22ಕ್ಕೆ 4) ಮಾರಕ ದಾಳಿಗೆ ನಲುಗಿ 8 ವಿಕೆಟ್‌ಗೆ 134 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಪಾಕ್ ತಂಡ ಮಲಿಕ್-ಆಸಿಫ್​ 23 ಎಸೆತಗಳಲ್ಲಿ 48 ರನ್ ಸೇರಿಸಿದ ಫಲವಾಗಿ 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 135 ರನ್ ಗಳಿಸಿ ಜಯಿಸಿತು. ಟೂರ್ನಿಗೆ ಮುನ್ನ ಪಾಕ್ ಪ್ರವಾಸ ಕೈಗೊಂಡು ಕೊನೇಕ್ಷಣದಲ್ಲಿ ಭದ್ರತಾ ಕಾರಣ ನೀಡಿ ಸರಣಿಯಿಂದ ಹೊರನಡೆದಿದ್ದ ಕಿವೀಸ್ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಬಾಬರ್ ಅಜಮ್ ಬಳಗ ಯಶಸ್ವಿಯಾಯಿತು.

    ಕಿವೀಸ್‌ಗೆ ರವೂಫ್​ ಕಡಿವಾಣ
    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ತಂಡಕ್ಕೆ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ (17) ಮತ್ತು ಡೆರಿಲ್ ಮಿಚೆಲ್ (27) ಎಚ್ಚರಿಕೆಯ ಆರಂಭ ಒದಗಿಸಿದರು. 6ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದ ಹ್ಯಾರಿಸ್ ರವೂಫ್​ ಬಳಿಕ ಕಿವೀಸ್ ತಂಡ ಚೇತರಿಸಿಕೊಳ್ಳಲು ಅವಕಾಶ ಬಿಟ್ಟುಕೊಡಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ (25) ಮತ್ತು ಡೆವೊನ್ ಕಾನ್‌ವೇ (27) ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರೂ, ಅವರಿಗೆ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಆಲ್ರೌಂಡರ್ ಜೇಮ್ಸ್ ನೀಶಾಮ್ (1) ರನ್‌ಗತಿ ಏರಿಸಲು ವಿಲರಾದರು. ಸ್ಲಾಗ್ ಓವರ್‌ಗಳಲ್ಲಿ ಗ್ಲೆನ್ ಫಿಲಿಪ್ಸ್ (13) ಮತ್ತು ಟಿಮ್ ಸೀರ್ಟ್ (8) ಕೂಡ ಹೆಚ್ಚಿನ ಕೊಡುಗೆ ನೀಡಲಿಲ್ಲ. ಇದರಿಂದಾಗಿ ಕಿವೀಸ್ ಕೊನೇ 5 ಓವರ್‌ಗಳಲ್ಲಿ 34 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು 4 ವಿಕೆಟ್ ಕಳೆದುಕೊಂಡಿತು.

    300: ಟಿಮ್ ಸೌಥಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ಓವರ್ ಎಸೆದ ಮೊದಲ ವೇಗಿ ಎನಿಸಿದರು. ಲಸಿತ್ ಮಾಲಿಂಗ (299.5 ಓವರ್) ಸಾಧನೆಯನ್ನು ಅವರು ಹಿಂದಿಕ್ಕಿದರು.

    ಸೋಲು ಮರೆತು ಭಾರತ-ನ್ಯೂಜಿಲೆಂಡ್​ ಪಂದ್ಯಕ್ಕೆ ಹುರಿದುಂಬಿಸಿದ ಅಭಿಮಾನಿಗಳು; #ಮತ್ತೆಘರ್ಜಿಸಿ ಎಂದು ಹಾರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts