More

    ಗಣೇಶೊತ್ಸವ: ನಿಬಂಧನೆಮುಕ್ತ ಆಚರಣೆಗೆ ಸಮ್ಮತಿ

    ಕೀರ್ತಿಕುಮಾರ್ ಎಚ್.ಸಿ. ಹರಿಹರ: ಕಳೆದ ಎರಡು ವರ್ಷಗಳಿಂದ ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ಗಣೇಶೊತ್ಸವ ಆಚರಿಸಲು ಸಂಘಟಕರಲ್ಲಿ ಉತ್ಸಾಹ ಕಂಡುಬಂದಿದ್ದು, ತಾಲೂಕಿನಲ್ಲಿ ಗೌರಿ- ಗಣೇಶ ಸ್ವಾಗತಕ್ಕೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

    ಸ್ವಾತಂತ್ರ್ಯ ಹೋರಾಟದ ವೇಳೆ ಸಂಘಟನೆಗಾಗಿ ಗಣೇಶೋತ್ಸವವನ್ನು ಬಳಸಿಕೊಳ್ಳಲಾಗಿತ್ತು. ಇಂದು ಗಲ್ಲಿ ಗಲ್ಲಿಗಳಲ್ಲಿ ಯುವ ನಾಯಕರನ್ನು ಸೃಷ್ಟಿಸುವಂತಹ ವೇದಿಕೆಯಾಗಿದೆ.

    ಸರ್ಕಾರ ಈ ಬಾರಿ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದು ಸಂಘಟಕರ ಉತ್ಸಾಹ ಇಮ್ಮಡಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಸಕಲ ಸಿದ್ಧತೆ ಮಾಡಿಕೊಂಡು ಅಂತಿಮ ತಯಾರಿ ನಡೆಸುತ್ತಿದ್ದಾರೆ.

    ನಗರದ ದೇವಸ್ಥಾನ ರಸ್ತೆಯ ರೇಣುಕ ಮಂದಿರ ಮತ್ತಿತರ ಕಡೆ ವಿವಿಧ ರೂಪದ ಗಣೇಶನ ಮೂರ್ತಿಗಳು ನೋಡುಗರನ್ನು ಸೆಳೆಯುತ್ತಿವೆ. ಗಲ್ಲಿ ಗಲ್ಲಿಗಳಲ್ಲಿ ಒಂದರಿಂದ ಮೂವತ್ತು ದಿನಗಳವರೆಗೂ ಗಣಪತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ.

    ಅರವತ್ತನೇ ವರ್ಷ: ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಂಘ ಈ ಬಾರಿ 60 ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಮುಸ್ಲಿಂ ಮುಖಂಡರಿಂದ ಅನ್ನಸಂತರ್ಪಣೆ: ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘ ಪ್ರತಿಷ್ಠಾಪಿಸುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ಮುಸ್ಲಿಂ ಮುಖಂಡರಿಂದ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಮೂರನೇ ವರ್ಷ: ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದು ಮಹಾಗಣಪತಿಯ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ಆಚರಣೆ ಮಾಡುತ್ತಿದ್ದು ಈ ಬಾರಿ ವಿಶೇಷ ಆಚರಣೆಗೆ ತಯಾರಿ ಮಾಡಿಕೊಂಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಈ ಬಾರಿ 60 ನೇ ವರ್ಷದ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ನಗರದಲ್ಲಿ ಏಕತಾ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಆದ್ಯತೆ ನೀಡಬೇಕಿದೆ.
    ಎನ್.ಎಚ್. ಶ್ರೀನಿವಾಸ್ ಅಧ್ಯಕ್ಷ, ಸಾರ್ವಜನಿಕ ವಿನಾಯಕ ಸಂಘ, ಹರಿಹರ.

    ಈ ಬಾರಿ ಸರ್ಕಾರ ನಿಬಂಧನೆಮುಕ್ತ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದಾರೆ. ಈ ಬಾರಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳನ್ನು ಮಾಡಿದ್ದೇವೆ.
    ಸಂದಿಮನೆ ದಾಕ್ಷಾಯಣಮ್ಮ ಮೂರ್ತಿ ತಯಾರಕರು, ಹರಿಹರ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts