More

    15 ಪೈಸೆ ಲೀ.ದರದಲ್ಲಿ ಶುದ್ಧ ಕುಡಿವ ನೀರು

    ಹರಿಹರ: ಜನಸಾಮಾನ್ಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಶುದ್ಧ ಕುಡಿಯುವ ನೀರನ್ನು ಒಂದು ಲೀ.ಗೆ 15 ಪೈಸೆ ದರದಲ್ಲಿ ವಿತರಣೆ ಮಾಡಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾವಣಗೆರೆ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಹೇಳಿದರು.

    ನಗರದ ತೆಗ್ಗಿನಕೇರಿಯಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಮಿಸಲಾಗುತ್ತಿರುವ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಆರ್ಸೆನಿಕ್, ಫ್ಲೋರೈಡ್ ಅಂಶ ಇರುವ ಅಶುದ್ಧ ನೀರಿನ ಸೇವನೆಯಿಂದ ಕಿಡ್ನಿ ಸ್ಟೋನ್, ಚರ್ಮ ಕಾಯಿಲೆ, ಮೂಳೆ ಸವೆತ, ಕಾಲು ಗಂಟು ಕಾಯಿಲೆ ಬರುತ್ತಿರುವುದನ್ನು ಗಮನಿಸಿ ವೀರೇಂದ್ರ ಹೆಗ್ಗಡೆಯವರು ಸಂಸ್ಥೆ ಸಹಯೋಗದಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಯೋಜನೆ ಆರಂಭಿಸಿದರು.

    ರಾಜ್ಯದಲ್ಲಿ ಸಂಸ್ಥೆಯಿಂದ ಈವರೆಗೆ 419 ಘಟಕ ಸ್ಥಾಪಿಸಿ ಸಾರ್ವಜನಿಕರಿಗೆ ಶುದ್ಧ ನೀರನ್ನು ದೊರಕಿಸಲಾಗುತ್ತಿದೆ. ಶುದ್ಧ ನೀರು ಸೇವನೆಯಿಂದ ಶೇ.80ರಷ್ಟು ಕಾಯಿಲೆ ಮುಕ್ತವಾಗಿರಲು ಸಾಧ್ಯವಿದೆ. ಒಂದು ಲೀ.ಗೆ 15 ಪೈಸೆ ದರದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

    ಸಂಸ್ಥೆ ಹರಿಹರ ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ಮನೆಯಲ್ಲೇ ನೀರನ್ನು ಶುದ್ಧೀಕರಿಸುವ ಘಟಕ ಹೊಂದುವ ಆರ್ಥಿಕ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಇದನ್ನು ಮನಗಂಡು ಸಂಸ್ಥೆ ನಗರಸಭೆ ಸಹಕಾರದೊಂದಿಗೆ ಈ ನೀರಿನ ಘಟಕ ಸ್ಥಾಪಿಸುತ್ತಿದೆ. ಕಾಮಗಾರಿಯನ್ನು ಶೀಘ್ರ ಪೂರೈಸಿ ನೀರು ವಿತರಣೆ ಆರಂಭಿಸಲಾಗುವುದು ಎಂದು ಹೇಳಿದರು.

    ಹರಿಹರ ಬಿ ವಲಯ ಮೇಲ್ವಿಚಾರಕ ವಿ.ಜಿ.ರಾಧಾಕೃಷ್ಣ ಭಟ್, ಶುದ್ಧಗಂಗಾ ವಿಭಾಗದ ಮೇಲ್ವಿಚಾರಕ ಬಸವರಾಜ್, ಪ್ರತಿನಿಧಿಗಳಾದ ಸಿದ್ದಮ್ಮ, ಶಹನಾಜ್, ಒಕ್ಕೂಟದ ಕಲಾವತಿ, ಶೋಭಾ, ಮಂಗಳ, ಸೇವಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts