More

    ಸೂಳೆಕೆರೆ ಹಳ್ಳ ದಾಟೋದು ಸಮುದ್ರ ಮಂಥನದಷ್ಟೇ ಕಷ್ಟ

    ಕೀರ್ತಿಕುಮಾರ್ ಹರಿಹರ: ತಾಲೂಕಿನ ಸೂಳೆಕೆರೆ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕಳಪೆ ಕಾಮಗಾರಿಯಿಂದಾಗಿ ವರ್ಷದಲ್ಲಿ ಎರಡು ಬಾರಿ ಕೊಚ್ಚಿ ಹೋಗಿ ಸಂಚಾರಕ್ಕೆ ಸಂಚಕಾರ ತಂದಿದೆ ಎಂದು ನಾಗರಿಕರು ದೂರಿದ್ದಾರೆ.

    ಸೂಳೆಕೆರೆ ಹಳ್ಳ ಸೇತುವೆ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ಸಂಪರ್ಕ ಸೇತುವಾಗಿದೆ. ಇದನ್ನು ರೈತರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಾರ್ವಜನಿಕರ ಒತ್ತಡಕ್ಕೆ ಮಣಿದ ಜನಪ್ರತಿನಿಧಿಗಳು, ಹಳ್ಳ ದಾಟಲು ಸಣ್ಣ ಸೇತುವೆ ನಿರ್ಮಿಸಿರುವುದು ಇತಿಹಾಸ. ಆದರೆ ಪ್ರತಿ ವರ್ಷ ಮಳೆಗಾಲದಲ್ಲಿ ಸೇತುವೆಗೆ ಹೊಂದಿಕೊಂಡ ರಸ್ತೆ ಕೊಚ್ಚಿ ಹೋಗುತ್ತಿರುವುದು ಸ್ಥಳೀಯರಿಗೆ ತಲೆನೋವಾಗಿದೆ.

    ರಾಮತೀರ್ಥ, ನಾಗೇನಹಳ್ಳಿ ಗ್ರಾಮಸ್ಥರು ಬೆಳ್ಳೂಡಿ ಹಾಗೂ ಹರಿಹರಕ್ಕೆ ಬರಲು, ರೈತರು ತಮ್ಮ ಜಮೀನುಗಳಿಗೆ ತೆರಳಲು ಈ ಸೇತುವೆ ಹತ್ತಿರದ ಮಾರ್ಗವಾಗಿದೆ. ಇಂದು ಸೇತುವೆಯ ರಸ್ತೆ ಕೊಚ್ಚಿ ಹೋಗಿದ್ದರಿಂದ ಸ್ಥಳೀಯರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ರಸ್ತೆ ಹಾಳಾಗಿ ಹದಿನೈದು ದಿನಗಳಾದರೂ ದುರಸ್ತಿಪಡಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ಹಳ್ಳ ರಭಸವಾಗಿ ಬಂದಾಗ ಸರಾಗವಾಗಿ ನೀರು ಹರಿದು ಹೋಗುವಂತೆ ಸೇತುವೆಗೆ ವಿಶಾಲ ಪೈಪ್‌ಗಳನ್ನು ನಿರ್ಮಿಸಬೇಕಿತ್ತು. ಆದರೆ ನಿರ್ಮಾಣ ಹಂತದಲ್ಲಿ ಗುತ್ತಿಗೆದಾರ ಹಾಗೂ ಅಭಿಯಂತರರು ಗ್ರಾಮಸ್ಥರ ಸಲಹೆಗೆ ಮನ್ನಣೆ ನೀಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲವೆಂಬುದು ಸ್ಥಳೀಯರ ವಾದವಾಗಿದೆ.

    ಕಳೆದ ವರ್ಷದ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ಸಾರ್ವಜನಿಕರ ಮನವಿ ಮೇರೆಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚಿಸಿದ್ದರು. ಆದರೆ ಅಕ್ಟೋಬರ್‌ನಲ್ಲಿ ರಸ್ತೆ ಕಾಮಗಾರಿ ಮುಗಿಸಿ ಕೊಟ್ಟಿದ್ದ ಗುತ್ತಿಗೆದಾರರ ರಸ್ತೆ ನಿರ್ಮಿಸಿ ನಿರ್ವಹಣೆ ಮರೆತರು. ಮುಖ್ಯವಾಗಿ ಅವರು ಹಣದಾಹಿ ಆಗಿದ್ದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಅಧಿಕಾರಿಗಳು ಗುತ್ತಿಗೆದಾರರಿಂದ ರಸ್ತೆ ದುರಸ್ತಿಪಡಿಸಿಯೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

    ಸೇತುವೆ ರಸ್ತೆ ಕೊಚ್ಚಿ ಹೋಗಿರುವುದರಿಂದ ದಿನನಿತ್ಯದ ತೋಟದ ಕೆಲಸಗಳಿಗೆ ನಿಂತಿವೆ. ಕಟಾವಿಗೆ ಬಂದ ಬೆಳೆಗಳನ್ನು ಮಾರುಕಟ್ಟೆಗೆ ತರಲು ಹರಸಾಹಸ ಪಡಬೇಕಾಗಿದೆ. ಅಧಿಕಾರಿಗಳು ಹಾಗೂ ಚುನಾಯಿತರು ಕೂಡಲೇ ಸಮಸ್ಯೆ ಬಗೆಹರಿಸಬೇಕು.
    > ಈಶ್ವರಗೌಡ ರೈತ

    ಸ್ಥಳೀಯರಿಗೆ ಹಾಗೂ ರೈತರಿಗೆ ಪ್ರತಿ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ಪರಿಹಾರಕ್ಕಾಗಿ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಕೆಲವೇ ದಿನಗಳಲ್ಲಿ ಉತ್ತಮ ರಸ್ತೆ ಮಾಡಲಾಗುವುದು.
    > ಶಿವಪ್ಪ ಬಿರಾದಾರ್ ಬೆಳ್ಳೂಡಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts