More

    ಇರುಳಲ್ಲಿ ನಡೆಯುತ್ತಿದೆ ಅಕ್ರಮ ಮರಳು ಗಣಿಗಾರಿಕೆ

    ಕೀರ್ತಿಕುಮಾರ್ ಹರಿಹರ
    ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಜಾಣಕುರುಡು ಮೆರೆಯುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆ ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಗರದ ತುಂಗಭದ್ರೆ ಕೆಲ ದಿನ ಒಡಲು ತುಂಬಿಕೊಂಡು ಹರಿದಳು. ಇದರಿಂದ ಸಹಜವಾಗೇ ನದಿಯಲ್ಲಿ ಅಧಿಕವಾಗಿ ಮರಳು ಸಂಗ್ರಹವಾಗಿದೆ. ನೀರಿನ ಹರಿವು ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಅಕ್ರಮ ಮರಳು ಸಾಗಣೆದಾರರು, ರಾತ್ರೋರಾತ್ರಿ ನದಿಯ ಒಡಲು ಬಗೆಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ನದಿಗೆ ಇಳಿದು ಬೋಟ್, ತೆಪ್ಪಗಳ ಸಹಾಯದಿಂದ ಮರಳು ತೆಗೆದು ಸಾಗಿಸುತ್ತಿದ್ದಾರೆ. ಇದರಿಂದ ಪ್ರಕೃತಿ ಸಂಪತ್ತು ಲೂಟಿಯ ಜತೆಗೆ ಸರ್ಕಾರ ಆದಾಯಕ್ಕೂ ಕೊಕ್ಕೆ ಬಿದ್ದಿದೆ.

    ಹರಿಹರದಿಂದ ದಾವಣಗೆರೆ ಜಿಲ್ಲೆಗೆ ಸರಾಗವಾಗಿ ಅಕ್ರಮ ಮರಳು ರಫ್ತಾಗುತ್ತಿದೆ. ಇದಕ್ಕೆ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಅಕ್ರಮ ದಂಧೆ ಎಲ್ಲೆಲ್ಲಿ?: ಹರಿಹರದ ಕೈಲಾಸ ನಗರ, ಮೆಟ್ಟಿಲುಹೊಳೆ ರಸ್ತೆ, ಹೊಸ ಭರಂಪುರ, ಎಲ್ಲಮ್ಮ ದೇವಸ್ಥಾನ ರಸ್ತೆ, ಹಳೆ ಹರ್ಲಾಪುರ, ನಾರಾಯಣ ಆಶ್ರಮದ ಹಿಂಭಾಗ, ಗುತ್ತೂರು, ಸಾರಥಿ, ಚಿಕ್ಕಬಿದರಿಯಲ್ಲಿ ಬೋಟ್‌ಗಳ ಮೂಲಕ ಅಕ್ರಮವಾಗಿ ಮರಳು ಸಾಗಿಸಿದರೆ, ಮಂದಾಪುರ-ಕರ್ಲಹಳ್ಳಿಯ ಜಮೀನುಗಳಲ್ಲಿ ಮರಳನ್ನು ಫಿಲ್ಟರ್ ಮಾಡಲಾಗುತ್ತಿದೆ. ಬ್ಯಾಲದಹಳ್ಳಿ ಹಳ್ಳದಲ್ಲಿ ತೆಪ್ಪಗಳ ಮೂಲಕ ಮರಳು ತೆಗೆಯಲಾಗುತ್ತಿದೆ. ನದಿಯಲ್ಲಿ ಬೋಟ್ ಮತ್ತು ಜೆಸಿಬಿ, ಹಿಟಾಚಿ ಸಹಾಯದಿಂದ ಮರಳನ್ನು ಎತ್ತಿ ದೊಡ್ಡ ದೊಡ್ಡ ಕಂದಕಗಳನ್ನು ನಿರ್ಮಿಸಲಾಗುತ್ತಿದೆ.

    ಜನಪ್ರತಿನಿಧಿಗಳ ಕೃಪಾಕಟಾಕ್ಷ: ಅಕ್ರಮ ಸ್ಟಾಕ್ ಯಾರ್ಡ್ ಮಾಡಿಕೊಂಡು ದಂಧೆಕೋರರು ಹಗಲು-ರಾತ್ರಿ ಮರಳು ಲೂಟಿ ಮಾಡುತ್ತಿದ್ದಾರೆ. ಇದರಲ್ಲಿ ಮೂರೂ ಪಕ್ಷಗಳ ಬೆಂಬಲಿಗರು ಸರ್ವರಿಗೂ ಸಮಪಾಲು ಸರ್ವರಿಗೂ ಸಹಬಾಳು ಎಂಬಂತೆ ಅಧಿಕಾರಿಗಳೊಡನೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ ಜಿಲ್ಲಾ ಮಟ್ಟದ ಪೊಲೀಸ್ ಉನ್ನತ ಅಧಿಕಾರಿಗಳ ಕೃಪೆಯೂ ಇದೆ ಎಂದು ಜನರು ಹೇಳುತ್ತಿದ್ದಾರೆ.

    ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು: ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಆದೇಶ ನೀಡಿದೆ. ಇದನ್ನು ಪಾಲಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇನ್ನಿತರ ಇಲಾಖೆ ಅಧಿಕಾರಿಗಳು ಆಮಿಷಗಳಿಗೆ ಜೋತು ಬಿದ್ದು, ಎಲ್ಲ ಗೊತ್ತಿದ್ದು ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಅಕ್ರಮವಾಗಿ ಮರಳು ಸಂಗ್ರಹಿಸಿದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ, ಮರಳನ್ನು ಸೀಜ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತದೆ.
    > ಕೆ.ಬಿ.ರಾಮಚಂದ್ರಪ್ಪ, ಹರಿಹರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts