More

    ಹಾಜಬ್ಬ ನೈಜ ಶಿಕ್ಷಣ ತಜ್ಞ: ಸಚಿವ ಸುರೇಶ್ ಕುಮಾರ್

    ಉಳ್ಳಾಲ: ಸಿನಿಮಾ ತಾರೆಯರು ಪರದೆಯ ಮೇಲೆ ಮಾತ್ರ ಹೀರೋಗಳು. ಹರೇಕಳ ಹಾಜಬ್ಬ ರಿಯಲ್ ಹೀರೋ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
    ಹರೇಕಳದ ನ್ಯೂಪಡ್ಪುವಿನ ಹರೇಕಳ ಹಾಜಬ್ಬ ಅವರ ಶಾಲೆಗೆ ಶನಿವಾರ ಭೇಟಿ ನೀಡಿದ ಅವರು, ನನ್ನ ಆರು ತಿಂಗಳ ಅವಧಿಯಲ್ಲಿ ಅನೇಕ ಸಂತರು, ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಹರೇಕಳ ಹಾಜಬ್ಬ ಭೇಟಿ ಮಹತ್ವದ್ದು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವ್ಯವಹಾರ ಮಾಡಿಕೊಂಡಿರುವವರನ್ನು ಶಿಕ್ಷಣ ತಜ್ಞ ಎನ್ನುತ್ತೇವೆ. ಆದರೆ ನೈಜ ಶಿಕ್ಷಣ ತಜ್ಞ ಎನಿಸಿರುವ ಅಕ್ಷರ ಸಂತನಿಗೆ ರಾಜ್ಯದ ಜನರ ಪರವಾಗಿ ನಮಸ್ಕಾರ ಹೇಳಲು ಬಂದಿದ್ದೇನೆ ಎಂದರು.

    ಪದ್ಮಶ್ರೀ ಪ್ರಶಸ್ತಿ ಅನೇಕರಿಗೆ ಸಿಕ್ಕಿದೆ, ಆದರೆ ಚಹಾ ಮಾರಿದವರು ಕಿತ್ತಳೆ ಹಣ್ಣು ಮಾರಿದವರಿಗೆ ನೀಡಿರುವುದು ವಿಶೇಷ. ಮಾಧ್ಯಮದವರು ಗುರುತಿಸದಿದ್ದರೆ ಎಲೆಮರೆ ಕಾಯಿಯಂತೆ ಉಳಿಯುತ್ತಿದ್ದರು. ಕಿತ್ತಳೆ ಮಾರಿ ಶಾಲೆ ಕಟ್ಟಿಸಿದ ಇವರಿಗೆ ಸಮಾಜವೇ ತಲೆ ತಗ್ಗಿಸಬೇಕು. ನನ್ನದು ನನಗೆ, ನಿನ್ನದೂ ನನಗೆ ಎಂದು ಬಯಸುವವರ ನಡುವೆ ನನ್ನದು ನಿನಗೆ, ನಿನ್ನದೂ ನಿನಗೆ ಎನ್ನುವ ಭಾವನೆ ಹಾಜಬ್ಬರದ್ದು ಎಂದರು.

    ಮಕ್ಕಳಿಗೆ ಪರೀಕ್ಷೆ ಪಾಠ!: ಹತ್ತಿರದಲ್ಲೇ ಇದ್ದ ಹಾಜಬ್ಬ ಅವರತ್ತ ಕೈತೋರಿಸಿದ ಸಚಿವರು, ಇವರ ಬಗ್ಗೆ ನಿಮಗೇನು ಅನಿಸುತ್ತದೆ ಎಂದು ಕೇಳಿದರು. ಖುಷಿಯಾಗುತ್ತೆ, ಹೆಮ್ಮೆಯಾಗುತ್ತೆ ಎಂದು ಮಕ್ಕಳು ಉತ್ತರಿಸಿದರು. ಹತ್ತನೇ ತರಗತಿ ಮಕ್ಕಳು ಶಾಲೆಯ ರಾಯಭಾರಿಗಳು. ನಿಮ್ಮ ಫಲಿತಾಂಶ ಆಧರಿಸಿ ಹೆಚ್ಚು ಮಕ್ಕಳು ಶಾಲೆಗೆ ಸೇರುತ್ತಾರೆ. ಪರೀಕ್ಷೆ ಬಗ್ಗೆ ಭಯ ಬೇಡ. ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದು ನಿಮಗಾಗಿ ಕಠಿಣ ಪರಿಶ್ರಮ ಪಡುತ್ತಿರುವ ಹಾಜಬ್ಬರ ಕನಸು ನನಸುಗೊಳಿಸಿ. ಅವರ ಮನಸ್ಸಿಗೆ ತೃಪ್ತಿ ನೀಡಿ ಎಂದು ಕಿವಿಮಾತು ಹೇಳಿದರು.
    ಶಾಸಕ ಯು.ಟಿ.ಖಾದರ್, ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಪ್ರೌಢಶಾಲೆ ಗೌರವಾಧ್ಯಕ್ಷ ಮಹಮ್ಮದ್ ಮುಸ್ತಫಾ ಮಲಾರ್, ಹರೇಕಳ ಗ್ರಾಪಂ ಅಧ್ಯಕ್ಷೆ ಅನಿತಾ ಡಿಸೋಜ, ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಲ್ಲೇಸ್ವಾಮಿ, ವಾಲ್ಟರ್ ಡಿಮೆಲ್ಲೊ, ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಎಸ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬದ್ರುದ್ದೀನ್ ಫರೀದ್ ನಗರ, ಬಶೀರ್ ಉಂಬುದ್, ಎಂ.ಪಿ.ಮಜೀದ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಸಾದ್ ರೈ ಕಲ್ಲಿಮಾರ್, ಮುಖ್ಯ ಶಿಕ್ಷಕಿ ರೂಪ ಮತ್ತಿತರರಿದ್ದರು.

    ಮನವಿಗೆ ಸ್ಪಂದಿಸುವೆ: ಶಾಲೆಗೆ ಆವರಣ ಗೋಡೆ, ಶಿಥಿಲಗೊಂಡಿರುವ ಕಟ್ಟಡ ದುರಸ್ತಿ, ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಎನ್ನುವ ಬೇಡಿಕೆಗಳ ಪಟ್ಟಿಯನ್ನು ಹಾಜಬ್ಬ ಸಲ್ಲಿಸಿದರು. ಗಂಭೀರವಾಗಿ ಪರಿಗಣಿಸಿ ಈಡೇರಿಸುವ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

    ಆತ್ಮೀಯತೆ ಮೆರೆದ ಸಚಿವ: ಸಚಿವರು ಶಾಲಾ ಆವರಣ ಪ್ರವೇಶಿಸುತ್ತಲೇ ಹಾಜಬ್ಬ ಹೂಗುಚ್ಚ ನೀಡಲು ಮುಂದಾದರು. ಈ ಸಂದರ್ಭ ಸಚಿವರು, ಹಾಜಬ್ಬ ಅವರನ್ನು ಅಪ್ಪಿ ಹಿಡಿದು ಆತ್ಮೀಯತೆ ತೋರಿದರು. ಅಲ್ಲದೆ ಭುಜ ಹಿಡಿದುಕೊಂಡೇ ಶಾಲೆಯ ಕಚೇರಿ ಪ್ರವೇಶಿಸಿದರು. ಅವರ ಆತ್ಮೀಯತೆಗೆ ಮಕ್ಕಳು, ಶಿಕ್ಷಕರು ಹಾಗೂ ನೆರೆದವರು ಬೆರಗಾದರೆ, ಹಾಜಬ್ಬ ಖುಷಿ ತಾಳಲಾರದೆ ಕಣ್ಣೀರು ಹಾಕಿದರು.

    ಸರ್ಕಾರಿ ಶಾಲೆಗಳ ಸಬಲೀಕರಣ: ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಿ ಮಧ್ಯಮ, ಬಡ, ಕೂಲಿ ಕಾರ್ಮಿಕರ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವ ನೆಲೆಯಲ್ಲಿ ಶಾಲೆಗಳ ಗರಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕಾರ್ಯಕ್ರಮ ತರಲಾಗುತ್ತದೆ. ಮುಂದಿನ ವರ್ಷ 25 ಸಾವಿರ ಜನ ಶಿಕ್ಷಕರು ನಿವೃತ್ತರಾಗಲಿದ್ದು, ಆ ಬಗ್ಗೆಯೂ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುವುದು. ವಿಶೇಷ ಮಕ್ಕಳಿಗೆ ಪರೀಕ್ಷೆ ಬರೆಯಲು ಹೆಚ್ಚು ಸಮಯ ನೀಡುವ ಜತೆಗೆ ಬೆಡ್ ಸಹಿತ ಅಗತ್ಯ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

    ರಾಜ್ಯ ಶಿಕ್ಷಣ ಸಚಿವರೊಬ್ಬರು ಹಳ್ಳಿಯಲ್ಲಿರುವ ಶಾಲೆಗೆ ಬಂದಿದ್ದರೆ ಅದಕ್ಕೆ ಮಾಧ್ಯಮವೇ ಕಾರಣ. ನನ್ನಂತಹ ಸಾಮಾನ್ಯ ಮನುಷ್ಯನ ಹೆಗಲಿಗೆ ಕೈಹಾಕಿ ಸಚಿವರು ಮಾತನಾಡಿದ್ದಾರೆ. ಮಾಧ್ಯಮದವರು ನನ್ನನ್ನು ಏನು ಮಾಡಿದ್ದಾರೆಂದೇ ಗೊತ್ತಾಗುತ್ತಿಲ್ಲ. ಸಾಮಾನ್ಯ ವ್ಯಕ್ತಿಯನ್ನು ಇಷ್ಟು ಎತ್ತರಕ್ಕೇರಿಸಿದ್ದಾರೆ.
    – ಹರೇಕಳ ಹಾಜಬ್ಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts