More

    ಸಾರಿಗೆ, ಸರ್ಕಾರದ ಹಗ್ಗಜಗ್ಗಾಟಕ್ಕೆ ಜನ ಹೈರಾಣ, ಸೋಮವಾರವೂ ಬಸವಳಿದ ಪ್ರಯಾಣಿಕರು, ಖಾಸಗಿ ಬಸ್‌ಗಳಲ್ಲಿ ಪ್ರಯಾಣ

    ಬೆಂಗಳೂರು ಗ್ರಾಮಾಂತರ: ಸೋಮವಾರವೂ ಬೆಳಗಿನಿಂದ ಸಂಜೆವರೆಗೆ ನಡೆದ ಸಾರಿಗೆ ಸಿಬ್ಬಂದಿ ಹಾಗೂ ಸರ್ಕಾರದ ಹಗ್ಗಾ ಜಗ್ಗಾಟದಿಂದಾಗಿ ಜಿಲ್ಲೆಯಲ್ಲಿ ಪ್ರಯಾಣಿಕರೂ ತೀವ್ರ ತೊಂದರೆ ಎದುರಿಸಿದರು.

    ಎರಡನೇ ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಜನ ರಸ್ತೆಗಿಳಿದಿರಲಿಲ್ಲ. ಆದರೆ ಸೋಮವಾರ ಕಚೇರಿ ಕೆಲಸ ಕಾರ್ಯಗಳಿಗೆ ಹೊರಟ ನೌಕರರು ಬಸ್‌ಗಳ ಸಂಚಾರವಿಲ್ಲದೆ ತೀವ್ರ ಸಂಕಷ್ಟ ಎದುರಿಸಿದ್ದು ಕಂಡುಬಂತು.

    ಖಾಸಗಿ ಬಸ್‌ಗಳ ಮೊರೆ: ಸಾರಿಗೆ ಬಸ್‌ಗಳ ಸಂಚಾರವಿಲ್ಲದೆ ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಯಿತು. ಬಸ್ ಸಂಚಾರ ಆರಂಭವಾಗುವ ಭರವಸೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಹಲವರು ಬಸ್ ಇಲ್ಲದೆ ಹೈರಾಣಾದರು. ಸಂಜೆ ವೇಳೆ ಮುಷ್ಕರ ಹಿಂಪಡೆದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

    ಬಸ್ ಬಂತು ಬಸ್: ಬೆಳಗ್ಗೆಯಿಂದಲೇ ನಡೆಯುತ್ತಿದ್ದ ನಾಟಕೀಯ ಬೆಳವಣಿಗೆ ಜಿಲ್ಲೆಯ ಜನರನ್ನು ಗೊಂದಲಕ್ಕೀಡು ಮಾಡಿತ್ತು. ಇನ್ನೇನು ಬಸ್‌ಗಳ ಸಂಚಾರ ಅರಂಭವಾಗಲಿದೆ ಎಂಬ ಸುದ್ದಿ ಹರಡಿದ್ದರಿಂದ ಮನೆಯಿಂದ ಹೊರಬಂದ ಜನ ಬಸ್‌ಗಳ ಸಂಚಾರವಿಲ್ಲದೆ ಶಪಿಸುತ್ತಾ ಮನೆಗೆ ಹಿಂತಿರುಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಮತ್ತೆ ಕೆಲವು ಕಡೆಗಳಲ್ಲಿ ಒಂದೊಂದೇ ಬಸ್‌ಗಳು ಕಾಣಿಸಿಕೊಂಡಿದ್ದರಿಂದ ಬಸ್ ಸಂಚಾರ ಆರಂಭವಾದ ಖುಷಿಯಲ್ಲಿ ಸಾರ್ವಜನಿಕರು ಬಸ್‌ನತ್ತ ದೌಡಾಯಿಸಿ ಬಸ್ ಹತ್ತಲು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು. ದೊಡ್ಡಬಳ್ಳಾಪುರದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಾಲ್ಕೈದು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಂಡುಬಂತು. ಬಸ್ ಡಿಪೋಗಳ ಬಳಿ ಪ್ರತಿಭಟನೆಗೆ ಮುಂದಾದ ನೌಕರರನ್ನು ಬ್ಯಾರಿಕೇಡ್ ಅಳವಡಿಸಿ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ನೌಕರರ ನಡುವೆ ವಾಗ್ವಾದಕ್ಕೂ ಕಾರಣವಾಯಿತು. ಬಳಿಕ ಪ್ರತಿಭಟನಾಕಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ಕಡೆ ಮುಖ ಮಾಡಿದರು.

    ದೊಡ್ಡಬಳ್ಳಾಪುರದಲ್ಲಿ ಮುಷ್ಕರ: ಮೂರು ದಿನಗಳಿಂದ ದೊಡ್ಡಬಳ್ಳಾಪುರದ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಸಾರಿಗೆ ಸಿಬ್ಬಂದಿ ಮುಷ್ಕರ ಸೋಮವಾರ ಸಂಜೆವರೆಗೆ ಮುಂದುವರಿಯಿತು. ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಶಾಸಕ ಟಿ.ವೆಂಕಟರಮಣಯ್ಯ, ಪ್ರತಿಭಟನಾ ಸ್ಥಳಕ್ಕೆ ತೆರಳಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ಹೊಸಕೋಟೆಯಲ್ಲಿ ಖಾಸಗಿ ಬಸ್: ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಖಾಸಗಿ ಬಸ್‌ಗಳು ರಸ್ತೆಗಿಳಿದಿದ್ದರಿಂದ ಸಾರ್ವಜನಿಕರಿಗೆ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಮುಂಜಾನೆ 6 ಗಂಟೆ ವೇಳೆಗಾಗಲೇ ಹಲವು ಖಾಸಗಿ ಬಸ್‌ಗಳು ಹಾಜರಾಗಿದ್ದರಿಂದ ಕೆಲಸ ಕಾರ್ಯಗಳಿಗೆ ತೆರಳುವ ಪ್ರಯಾಣಿಕರು ಖಾಸಗಿ ಬಸ್‌ಗಳ ಮೂಲಕ ಪ್ರಯಾಣ ಬೆಳೆಸಿದರು.

    ಸಮಸ್ಯೆ ಬಗೆಹರಿದು ಸಾರಿಗೆ ಬಸ್‌ಗಳು ರಸ್ತೆಗಿಳಿಯುತ್ತವೆ ಎಂಬ ನಿರೀಕ್ಷೆಯಲ್ಲಿ ನಿಲ್ದಾಣಕ್ಕೆ ಬಂದಿದ್ದೆ. ಆದರೆ ಬಸ್‌ಗಳಿಗೆ ಕಾದು ಸಾಕಾಗಿ ಕಡೆಗೆ ಖಾಸಗಿ ಬಸ್ ಮೂಲಕವೇ ಬೆಂಗಳೂರಿನ ಕಚೇರಿಗೆ ಹೋಗಬೇಕಾಯಿತು. ಬಸ್ ಪಾಸ್ ಇದ್ದರೂ ಕಾಸು ಕೊಟ್ಟು ಹೋಗುವ ಪರಿಸ್ಥಿತಿ ಇತ್ತು. ಇದಕ್ಕೆ ಯಾರು ಹೊಣೆ.
    ಅಶ್ವತ್ಥಾಮ, ನೆಲಮಂಗಲ ಖಾಸಗಿ ಕಂಪನಿ ಉದ್ಯೋಗಿ

    ಮಗಳು ಆಸ್ಪತ್ರೆಯಲ್ಲಿದ್ದಾಳೆ. ರಕ್ತದ ಅವಶ್ಯಕತೆ ಇದೆ ತನ್ನಿ ಎಂದು ವೈದ್ಯರು ತಿಳಿಸಿದ್ದಾರೆ. ರಕ್ತ ತರಲು ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಬಸ್‌ಗಳೇ ಇಲ್ಲ, ಖಾಸಗಿ ಬಸ್ ಹಿಡಿದು ಅಲ್ಲಿಂದ ಆಟೋ ಮೂಲಕ ರಕ್ತನಿಧಿ ಸಂಪರ್ಕಿಸಿ ರಕ್ತ ಪಡೆದು ಬರುವಷ್ಟರಲ್ಲಿ ಸಾಕು ಸಾಕಾಯಿತು.
    ಸಂಗೀತಾ, ಹೊಸಕೋಟೆ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts