More

  ಅಮೆರಿಕದ ರಿಚರ್ಡ್​ ಹ್ಯಾನ್ಸೆನ್​ಗೆ ‘ಸೂರ್ಯಮಿತ್ರ’ ಪ್ರಶಸ್ತಿ

  ಸೆಲ್ಕೋ ಸಂಸ್ಥೆಯ ಪ್ರತಿಷ್ಠಿತ ಪುರಸ್ಕಾರ | ಮೇ 27ರಂದು ಬೆಂಗಳೂರಿನಲ್ಲಿ ಪ್ರದಾನ

  ಉಡುಪಿ: ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್​ ಸೌಲಭ್ಯ ಹೆಚ್ಚಿಸಲು ಮೈಕ್ರೋ ಫೈನಾನ್ಸ್​ ಸಂಸ್ಥೆಗಳ ಮೂಲಕ ಆಧುನಿಕ ಫೋಟೋ ವೋಲ್ಟಾಯಿಕ್​ (ಪಿವಿ) ತಂತ್ರಜ್ಞಾನ ಬೆಸೆದು, ಪ್ರಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೆರಿಕದ ರಿಚರ್ಡ್​ ಹ್ಯಾನ್ಸೆನ್​ ಅವರಿಗೆ ಸೆಲ್ಕೋ ಸಂಸ್ಥೆಯು 2023ನೇ ಸಾಲಿನ ಪ್ರತಿಷ್ಠಿತ ‘ಸೂರ್ಯಮಿತ್ರ’ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.

  ಬೆಂಗಳೂರಿನ ವೈಯಾಲಿ ಕಾವಲ್​ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 27ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಗಮನ ಸೆಳೆದ ಜಾಗತಿಕ ತಂತ್ರಜ್ಞ

  ರಿಚರ್ಡ್​ ಹ್ಯಾನ್ಸೆನ್​ ಅವರು 1984ರಿಂದ ಮೊದಲ ಬಾರಿಗೆ ಉತ್ತರ ಅಮೆರಿಕದ ಡೊಮಿನಿಕನ್​ ರಿಪಬ್ಲಿಕ್​ನಲ್ಲಿ ಮೈಕ್ರೋಫೈನಾನ್ಸ್​ ಪರಿಹಾರಗಳೊಂದಿಗೆ ಪಿವಿ ತಂತ್ರಜ್ಞಾನ ಪರಿಚಯಿಸಲು ಲಾಭರಹಿತ ಕಾರ್ಯಕ್ರಮ ಆಯೋಜಿಸಿದರು. ನಂತರ 1989ರಲ್ಲಿ ಇದೇ ಮಾದರಿಯನ್ನು ಹೊಂಡುರಾಸ್​ನಲ್ಲಿ ಅಮೆರಿಕದ ಇಂಧನ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಪುನರಾವರ್ತಿಸಿದರು. ಈ ಕೆಲಸವು ಜಾಗತಿಕವಾಗಿ ಗಮನಾರ್ಹ ಬದಲಾವಣೆಗೆ ಕಾರಣವಾಯಿತು.

  ದೇಶ, ಸಂಸ್ಥೆಗಳಿಗೆ ಸಲಹಾ ಸೇವೆ

  ಅಮೆರಿಕದ ಯುನೈಟೆಡ್​ ಸ್ಟೇಟ್ಸ್​ ಏಜೆನ್ಸಿ ಫಾರ್​ ಇಂಟರ್​ನ್ಯಾಷನಲ್​ ಡೆವಲೆಪ್​ಮೆಂಟ್​ (ಯುಎಸ್​ಎಐಡಿ), ವಿಶ್ವ ಬ್ಯಾಂಕ್​ ಮತ್ತು ಇಂಟರ್​- ಅಮೆರಿಕನ್​ ಅಭಿವೃದ್ಧಿ ಬ್ಯಾಂಕ್​ ಸೇರಿದಂತೆ ಬಾಂಗ್ಲಾದೇಶ, ಬೊಲಿವಿಯಾ, ಡೊಮಿನಿಕನ್​ ರಿಪಬ್ಲಿಕ್​, ಇಥಿಯೋಪಿಯಾ, ಹೈಟಿ, ಭಾರತ, ನೇಪಾಳ, ನಿಕರಾಗುವಾ, ಫಿಲಿಪೈನ್ಸ್​ ದೇಶಗಳು ಮತ್ತು ಅನೇಕ ಪ್ರಮುಖ ಸಂಸ್ಥೆಗಳಿಗೆ ಸಲಹಾ ಸೇವೆ ಒದಗಿಸಿದ್ದಾರೆ.

  ಎನರ್ಜಿ ಅಕ್ಸೆಸ್​ ಫೌಂಡೇಷನ್​ನ ಕಾರ್ಯನಿರ್ವಾಹಕ ನಿರ್ದೇಶಕ ರಿಚರ್ಡ್​ ಹ್ಯಾನ್ಸೆನ್​ ಜಾಗತಿಕವಾಗಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುತ್ತಿದ್ದಾರೆ. ಸೋ ಲುಜ್​ ಇಂಕ್​ ಎಂಬ ಸಾಮಾಜಿಕ ಸಂಸ್ಯೆ ಸ್ಥಾಪಿಸಿ, ಪಿವಿ ಉತ್ಪನ್ನ ಮತ್ತು ಸಂಬಂಧಿತ ಮೈಕ್ರೋಫೈನಾನ್ಸ್​ ಪರಿಹಾರ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಮಹಾನ್​ ಸಾಧಕನಿಗೆ ಸೂರ್ಯಮಿತ್ರ ಪ್ರಶಸ್ತಿ ಕೊಡಲು ಹೆಮ್ಮೆಯೆನಿಸಿದೆ.

  ಮೋಹನ ಭಾಸ್ಕರ ಹೆಗಡೆ. ಸಿಇಒ, ಸೆಲ್ಕೋ ಇಂಡಿಯಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts