More

    VIDEO | ಇವರು ಐಪಿಎಲ್‌ನ ಆಮೀರ್ ಸೋಹೈಲ್-ವೆಂಕಟೇಶ್ ಪ್ರಸಾದ್!

    ಅಬುಧಾಬಿ: 1996ರ ವಿಶ್ವಕಪ್ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಆಮೀರ್ ಸೋಹೈಲ್ ಮತ್ತು ಭಾರತದ ವೇಗಿ ವೆಂಕಟೇಶ್ ಪ್ರಸಾದ್ ನಡುವಿನ ಏಟು-ತಿರುಗೇಟಿನ ಘಟನೆ ಯಾವ ಕ್ರಿಕೆಟ್ ಪ್ರೇಮಿಗೆ ನೆನಪಿಲ್ಲ ಹೇಳಿ? ವೆಂಕಟೇಶ್ ಪ್ರಸಾದ್ ಬೌಲಿಂಗ್‌ನಲ್ಲಿ ಆಮೀರ್ ಸೋಹೈಲ್ ಬೌಂಡರಿಯೊಂದನ್ನು ಬಾರಿಸಿ ಬ್ಯಾಟ್‌ನಿಂದಲೇ ಚೆಂಡಿನತ್ತ ತೋರಿಸಿ ಕೆಣಕಿದ್ದರು. ಅದಕ್ಕೆ ಪ್ರತಿಯಾಗಿ ಮರು ಎಸೆತದಲ್ಲೇ ಸೋಹೈಲ್‌ರನ್ನು ಬೌಲ್ಡ್ ಮಾಡಿದ್ದ ವೆಂಕಿ ಪೆವಿಲಿಯನ್‌ನತ್ತ ದಾರಿ ತೋರಿಸಿದ್ದರು. ಬುಧವಾರ ಐಪಿಎಲ್ 13ನೇ ಆವೃತ್ತಿಯಲ್ಲೂ ಇಂಥದ್ದೇ ಘಟನೆಯೊಂದು ನಡೆಯಿತು. ಇಲ್ಲಿ ಬ್ಯಾಟ್ಸ್‌ಮನ್ ಆಗಿದ್ದವರು ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಗಿದ್ದರೆ, ಬೌಲರ್ ಆಗಿದ್ದವರು ಆರ್‌ಸಿಬಿ ತಂಡದ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮಾರಿಸ್.

    ಮುಂಬೈ-ಆರ್‌ಸಿಬಿ ನಡುವಿನ ಪಂದ್ಯದಲ್ಲಿ 2ನೇ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಮಾರಿಸ್ ಓವರ್‌ನ 4ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಲಾಂಗ್‌ಆನ್‌ನತ್ತ ಸಿಕ್ಸರ್ ಸಿಡಿಸಿದ್ದರು. ಅದರ ಬೆನ್ನಲ್ಲೇ ಹಾರ್ದಿಕ್ ಚೆಂಡು ಹೋದ ದಾರಿಯತ್ತ ಕೈ ತೋರಿಸಿದ್ದರು. ಮರು ಎಸೆತದಲ್ಲಿ ಹಾರ್ದಿಕ್ ಎಕ್ಸ್‌ಟ್ರಾ ಕವರ್‌ನಲ್ಲಿ ಮೊಹಮದ್ ಸಿರಾಜ್ ಹಿಡಿದ ಉತ್ತಮ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ಅದರ ಬೆನ್ನಲ್ಲೇ ಮಾರಿಸ್, ಹಾರ್ದಿಕ್‌ಗೆ ನಗುತ್ತಲೇ ಏನನ್ನೋ ಹೇಳಿದ್ದರೆ, ಹಾರ್ದಿಕ್ ಕೂಡ ಸಿಟ್ಟಿನಿಂದ ಏನೋ ಹೇಳುತ್ತಲೇ ಡಗೌಟ್‌ನತ್ತ ಹೆಜ್ಜೆ ಹಾಕಿದ್ದರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇವರಿಬ್ಬರನ್ನು ಐಪಿಎಲ್‌ನ ‘ಆಮೀರ್ ಸೋಹೈಲ್ ಮತ್ತು ವೆಂಕಟೇಶ್ ಪ್ರಸಾದ್’ ಎಂದು ಬಣ್ಣಿಸಲಾಗುತ್ತಿದೆ.

    ಪಂದ್ಯದ ಬಳಿಕ ಐಪಿಎಲ್ ನೀತಿ ಸಂಹಿತೆಯ ಅನ್ವಯ, ಮಾತಿನ ಚಕಮಕಿ ನಡೆಸಿದ ಮಾರಿಸ್ ಮತ್ತು ಹಾರ್ದಿಕ್ ಇಬ್ಬರಿಗೂ ಛೀಮಾರಿ ಹಾಕಲಾಗಿದೆ. ಇಬ್ಬರೂ ಆಟಗಾರರು ನೀತಿ ಸಂಹಿತೆ ಉಲ್ಲಂಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ರೆಫ್ರಿ ಇಬ್ಬರಿಗೂ ಛೀಮಾರಿ ಹಾಕಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts