More

    ಹೊಸ ಮಾರ್ಗ ಹಾಕಿಕೊಟ್ಟ ಧೀಮಂತ ನಾಯಕ ಹಾರನಹಳ್ಳಿ ರಾಮಸ್ವಾಮಿ

    ಬೆಂಗಳೂರು: ಹಾರನಹಳ್ಳಿ ರಾಮಸ್ವಾಮಿ ಅವರು ರಾಜಕೀಯವಾಗಿ ಭಿನ್ನದಾರಿಯಲ್ಲಿದ್ದರೂ ಅಜಾತ ಶತ್ರುಗಳಂತೆ ಎಲ್ಲರೊಡನೆ ಒಂದಾಗಿ ಬಾಳಿ ಹೊಸ ಮಾರ್ಗವನ್ನು ಹಾಕಿಕೊಟ್ಟ ಧೀಮಂತ ನಾಯಕ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ.

    ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಭಾರತೀಯ ವಿದ್ಯಾಭವನ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಜಂಟಿಯಾಗಿ ಭಾನುವಾರ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹಾರನಹಳ್ಳಿ ರಾಮಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸ’ಕಾರ್ಯಕ್ರಮದಲ್ಲಿ ಮಾತನಾಡಿದರು.

    ರಾಜಕಾರಣಿಗಳಿಗೆ ಕೇಳುವ ಕಿವಿ ಯಾವಾಗಲೂ ತೆರೆದಿರಬೇಕು. ಸಮಾಜದ ಕಷ್ಟ ಸುಖಗಳ ಬಗ್ಗೆ ಕಣ್ಣು ತರೆದು ನೋಡಿ ಒಳಗಣ್ಣಿನಿಂದ ತಮ್ಮ ನಿಲುವು ರೂಪಿಸಿಕೊಳ್ಳಬೇಕೆಂದು ತೋರಿಸಿಕೊಟ್ಟವರು ರಾಮಸ್ವಾಮಿ. ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಬಳಿಕ ಇವರು ಹಲವು ಪತ್ರಿಕೆಗಳಿಗೆ ಹೊಸ ಸಂವಿದಾನಶೀಲತೆ ತಂದುಕೊಟ್ಟವರು. ರಾಜಕಾರಣಿಯಾಗಿ, ಶಾಸಕರಾಗಿ ಹಾಗೂ ಸಚಿವರಾಗಿ ಉತ್ತಮ ಕಾರ್ಯ ಮಾಡಿದವರು. ಹಾರನಹಳ್ಳಿ ರಾಮಸ್ವಾಮಿ ಅಂದರೆ ಥಟನೆ ನೆನಪು ಆಗುವುದು ಲೋಕ ಶಿಕ್ಷಣ ಟ್ರಸ್ಟ್. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾರ್ವಜನಿಕರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಇವರ ಸಾಧನೆ, ಚಿಂತನೆ ಹಾಗೂ ಕಳಂಕರಹಿತ ವ್ಯಕ್ತಿತ್ವವೂ ಮುಂದಿನ ತಲೆಮಾರುಗಳಿಗೆ ಪ್ರಭಾವ ಬೀರಲಿದೆ ಎಂದರು.

    ಎಂಎಲ್ಸಿ ಯು.ಬಿ.ವೆಂಕಟೇಶ್, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೋ ಪಿ.ಕೃಷ್ಣ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಮತ್ತಿತರರಿದ್ದರು.

    ರಾಜಗುರುನಂತೆ ಮಾರ್ಗದರ್ಶಕ
    ಸಚಿವ ಎಚ್.ಕೆ.ಪಾಟೀಲ್ ಅವರ ತಂದೆ ಕೆ.ಎಚ್.ಪಾಟೀಲ್ ಸಹ ಹಾರನಹಳ್ಳಿ ರಾಮಸ್ವಾಮಿ ಪ್ರಭಾವಕ್ಕೆ ಒಳಗಾಗಿದ್ದರು. ಮೊಟ್ಟ ಮೊದಲ ಬಾರಿಗೆ 2006ರಲ್ಲಿ ಬಿಜೆಪಿ, ಜೆಡಿಎಸ್ ಜತೆ ಸೇರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದಾಗ ನಮಗೆಲ್ಲಾ ರಾಜಗುರುನಂತೆ ಹಾರನಹಳ್ಳಿ ರಾಮಸ್ವಾಮಿ ಮಾರ್ಗದರ್ಶಕರಾಗಿದ್ದರು. ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಅಗತ್ಯ ಇರುವ ಕಡೆ ಕಾನೂನುನ್ನು ತಿದ್ದುಪಡಿ ತಂದವರು ಎಂದು ಬಿಎಸ್‌ವೈ ಹೇಳಿದರು. ಅಖಂಡ ಕರ್ನಾಟಕದ ಸ್ಥಾಪನೆ ಇವರ ಕಲ್ಪನೆ ಆಗಿತ್ತು. ಕರ್ನಾಟಕ ಏಕೀಕರಣದ ಪರಿಕಲ್ಪನೆ ಹೊತ್ತು ಇದಕ್ಕೆ ರಾಜ್ಯಾದ್ಯಂತ ಮಾನ್ಯತೆ ಸಿಗುವಂತೆ ಹೋರಾಟದ ಕಿಚ್ಚು ಹಬ್ಬಿಸಿದವರು ರಾಮಸ್ವಾಮಿ. ಶಾಸನರಚನೆ ಮಹತ್ವಗಳಿಗೆ ಹೊಸ ರೂಪ ತಂದುಕೊಟ್ಟರು. ಬರಹಗಾರರಾಗಿ, ಸಂಸದೀಯ ಪಟುಯಾಗಿ, ಮಾಧ್ಯಮ ಸಂಸ್ಥೆಯ ಮಾರ್ಗದರ್ಶಕರಾಗಿ ಹಾಗೂ ಸರ್ಕಾರದ ನೀತಿ ನಿರೂಪಿಸಲು ಅನುಭವದ ಧಾರೆಯಾಗಿದವರು. ಇಂಥ ಉಪನ್ಯಾಸಗಳು ಬರೀ ಬೆಂಗಳೂರಿನಲ್ಲಿ ನಡೆಯದೆ ರಾಜ್ಯಾದ್ಯಂತ ಜರುಗಬೇಕು. ಆಗ ಮಾತ್ರ ರಾಮಸ್ವಾಮಿ ಕಂಡ ಅಖಂಡ ಕರ್ನಾಟಕ ಪರಿಕಲ್ಪನೆ ನಿಜಕ್ಕೂ ಸಾರ್ಥಕವಾಗಲಿದೆ ಎಂದು ಮಾಜಿ ಸಿಎಂ ಹೇಳಿದರು.

    ಇದನ್ನೂ ಓದಿ: ಅಕ್ಕಿ ಬದಲು ಹಣ ಫಲಾನುಭವಿ ಖಾತೆಗೆ

    ಗಾಂಧಿ ವಿಚಾರಧಾರೆ ಅಳವಡಿಸಿಕೊಳ್ಳಿ
    ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಅನಗತ್ಯ ಟೀಕೆ, ಟಿಪ್ಪಣಿ ಹಾಗೂ ಬಾಯಿಚಪಲಕ್ಕಾಗಿ ಮಾತಾಡಬಾರದು. ಗಾಂಧಿ ಅವರ ವಿಚಾರಧಾರೆಗಳು, ಶಾಂತಿ, ಅಹಿಂಸೆ, ಪ್ರೀತಿ ಹಾಗೂ ಭ್ರಾತೃತ್ವವು ಇವತ್ತಿನ ದಿನಮಾನಗಳಿಗೆ ಅತ್ಯಂತ ಅವಶ್ಯಕತೆಯಿದೆ. ಭೂತನ್ ರಾಷ್ಟ್ರವನ್ನು ನೋಡಿದಾಗ ನಮ್ಮ ರಾಷ್ಟ್ರದಲ್ಲಿ ಸಮಾಧಾನ, ತೃಪ್ತಿ ಮತ್ತು ಸಂತೋಷದ ಕೊರತೆ ಎದ್ದು ಕಾಡುತ್ತಿದೆ. ನಮ್ಮ ಸಮುದಾಯದಲ್ಲಿ ಹೆಚ್ಚು ಸಮಾಧಾನ ಮೂಡುವ ವಾತಾವರಣ ಬರಬೇಕಿದೆ. ಹೀಗಾಗಿ, ಗಾಂಧಿ ಅವರ ವಿಚಾರಧಾರೆಗಳನ್ನು ಜನರು ಅಳವಡಿಸಿಕೊಳ್ಳಬೇಕು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts