More

    ಒಂದೇ ದಿನ ಮೂವರು ಕ್ರಿಕೆಟಿಗರಿಗೆ ಜನ್ಮದಿನದ ಸಂಭ್ರಮ

    ಬೆಂಗಳೂರು: ಮೂವರು ಅಂತಾರಾಷ್ಟ್ರೀಯ ಕ್ರಿಕೆಟಿಗರು ಬುಧವಾರ ಒಂದೇ ದಿನ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅವರೆಂದರೆ ಭಾರತ ತಂಡದ ಕೋಚ್ ಆಗಿರುವ ಮಾಜಿ ಆಲ್ರೌಂಡರ್ ರವಿಶಾಸ್ತ್ರಿ, ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ ಮತ್ತು ‘ಮಿ. ಕ್ರಿಕೆಟ್’ ಖ್ಯಾತಿಯ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸೆ. ವೀಕ್ಷಕವಿವರಣೆಕಾರ ಆಗಿಯೂ ಪ್ರಸಿದ್ಧಿ ಪಡೆದಿದ್ದ ರವಿಶಾಸ್ತ್ರಿ 58, ಜಯವರ್ಧನೆ 43 ಮತ್ತು ಮೈಕೆಲ್ ಹಸ್ಸೆ 45ನೇ ಜನ್ಮದಿನದ ಸಂಭ್ರಮ ಆಚರಿಸಿದರು. ಈ ಮೂವರಿಗೂ ಐಸಿಸಿ ಶುಭಾಶಯ ಹೇಳಿದೆ.

    ಇದನ್ನೂ ಓದಿ: ಐಸಿಸಿ ಮಾರ್ಗಸೂಚಿಗೆ ಕ್ರಿಕೆಟಿಗರಿಂದ ಟೀಕೆ: ಕಾರ್ಯಸಾಧ್ಯವಲ್ಲ, ಮರುಪರಿಶೀಲಿಸಲು ಆಗ್ರಹ

    1981ರಿಂದ 1992ರ ನಡುವೆ ಭಾರತ ಪರ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯವಾಡಿದ್ದ ರವಿಶಾಸ್ತ್ರಿ, ಕ್ರಮವಾಗಿ 3,830 ಮತ್ತು 3,108 ರನ್ ಹಾಗೂ 151 ಮತ್ತು 129 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 1997ರಿಂದ 2016ರವರೆಗೆ ಲಂಕಾ ಪರ ಆಡಿದ್ದ ಜಯವರ್ಧನೆ, 149 ಟೆಸ್ಟ್ ಮತ್ತು 448 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 11,814 ಮತ್ತು 12,650 ರನ್ ಗಳಿಸಿದ್ದಾರೆ. 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಲಂಕಾ ತಂಡದ ಭಾಗವೂ ಆಗಿದ್ದ ಜಯವರ್ಧನೆ, 55 ಟಿ20 ಪಂದ್ಯಗಳಲ್ಲಿ 1,493 ರನ್ ಗಳಿಸಿದ್ದಾರೆ. ಮೂರೂ ಮಾದರಿಯಲ್ಲಿ ಶತಕ ಸಿಡಿಸಿರುವ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. 2004ರಿಂದ 2013ರವರೆಗೆ ಆಸೀಸ್ ಪರ ಆಡಿದ್ದ ಮೈಕೆಲ್ ಹಸ್ಸೆ, 79 ಟೆಸ್ಟ್ ಮತ್ತು 185 ಏಕದಿನ ಪಂದ್ಯಗಳಲ್ಲಿ 6,235 ಮತ್ತು 5,442 ರನ್ ಗಳಿಸಿದ್ದಾರೆ. 38 ಟಿ20 ಪಂದ್ಯಗಳನ್ನೂ ಆಡಿರುವ ಹಸ್ಸೆ 721 ರನ್ ಗಳಿಸಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!

    ರವಿಶಾಸ್ತ್ರಿ ಶುಭಾಶಯಗಳ ಮಹಾಪೂರ

    ಒಂದೇ ದಿನ ಮೂವರು ಕ್ರಿಕೆಟಿಗರಿಗೆ ಜನ್ಮದಿನದ ಸಂಭ್ರಮ
    ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ತಂಡದ ಹಾಲಿ-ಮಾಜಿ ಆಟಗಾರರಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ‘ಹೆಚ್ಚಿನವರು ಆತ್ಮವಿಶ್ವಾಸ ಹೊಂದಿರುತ್ತಾರೆ. ಆದರೆ ಕೆಲವರಷ್ಟೇ ಎದೆಗಾರಿಕೆಯನ್ನೂ ಹೊಂದಿರುತ್ತಾರೆ. ಹ್ಯಾಪಿ ಬರ್ತ್‌ಡೇ ರವಿ ಭಾಯ್, ಗಾಡ್ ಬ್ಲೆಸ್’ ಎಂದು ನಾಯಕ ವಿರಾಟ್ ಕೊಹ್ಲಿ ವಿಶೇಷ ರೀತಿಯಲ್ಲಿ ಶುಭಾಶಯ ಸಲ್ಲಿಸಿದ್ದಾರೆ. ತಂಡದ ಇತರ ಆಟಗಾರರಾದ ಅಜಿಂಕ್ಯ ರಹಾನೆ, ಶಿಖರ್ ಧವನ್, ಕೇದಾರ್ ಜಾಧವ್, ವೃದ್ಧಿಮಾನ್ ಸಾಹ, ಕುಲದೀಪ್ ಯಾದವ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್, ಮಾಜಿ ಆಟಗಾರ ಯುವರಾಜ್ ಸಿಂಗ್, ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ಮತ್ತಿತರರೂ ಶುಭಾಶಯ ಹೇಳಿದ್ದಾರೆ. ‘ನಿಮ್ಮ ಜತೆ ಭಾರತ ಮತ್ತು ಮುಂಬೈ ಪರ ಆಡಿರುವುದನ್ನು ಆನಂದಿಸಿರುವೆ’ ಎಂದು ಸಚಿನ್ ತೆಂಡುಲ್ಕರ್ ಕೂಡ ಶುಭಾಶಯ ತಿಳಿಸಿದ್ದಾರೆ. ಬಿಸಿಸಿಐನಿಂದಲೂ ಟ್ವಿಟರ್‌ನಲ್ಲಿ ರವಿಶಾಸ್ತ್ರಿಗೆ ಶುಭಾಶಯ ಸಲ್ಲಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts