More

    ಜಾನುವಾರು ಸಾಕಣೆಗೆ ರೈತರ ಹೆಣಗಾಟ

    ಹನುಮಸಾಗರ: ಮೇವು ಕೊರತೆಯಿಂದ ಸ್ಥಳೀಯ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯ ರೈತರಿಗೆ ಜಾನುವಾರುಗಳ ಸಾಕಣೆ ಸವಾಲಾಗಿ ಪರಿಣಮಿಸಿದೆ. ಕೆಲವರು ಸಾಲ ಮಾಡಿ ಮೇವು ಖರೀದಿಗೆ ಮುಂದಾದರೆ, ಇನ್ನೂ ಕೆಲವರು ದನಗಳ ಮಾರಾಟಕ್ಕೆ ಮುಂದಾಗಿದ್ದಾರೆ.

    ಈ ವರ್ಷ ಹಿಂಗಾರು ಹಾಗೂ ಮುಂಗಾರಿನಲ್ಲಿ ಉತ್ತಮವಾಗಿ ಬೆಳೆದ ಬೆಳೆಯನ್ನು ಇನ್ನೇನೂ ರಾಶಿ ಮಾಡಬೇಕೆಂದು ರೈತರು ಸಿದ್ಧತೆಯಲ್ಲಿದ್ದರು. ಆದರೆ, ನಿರಂತರವಾಗಿ ಸುರಿದ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು ಮೆಕ್ಕೆಜೋಳ, ಜೋಳ, ಸಜ್ಜೆ, ಮೇವು, ಅಲಸಂದಿ ಹಾಗೂ ಹೆಸರು ಹೊಟ್ಟು ಹಾಳಾಗಿ ಮೇವಿನ ಕೊರತೆ ಎದುರಾಗಿದೆ. ಅನುಕೂಲಸ್ಥ ರೈತರು ಬೇರೆ ಕಡೆಗಳಿಂದ ಮೇವು ತಂದು ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಬಡವರು ನಿರ್ವಹಣೆ ಕಷ್ಟವಾಗಿ ದನಗಳ ಮಾರಾಟಕ್ಕೆ ನಿರ್ಧರಿಸಿದ್ದಾರೆ.

    ಗಗನಕ್ಕೇರಿದ ಮೇವಿನ ಬೆಲೆ: ಮೇವಿನ ಸಮಸ್ಯೆ ಎದುರಿಸುತ್ತಿರುವ ರೈತರು ಹೇಗಾದರೂ ಮಾಡಿ ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಬೇಕೆಂದು ಟೊಂಕಕಟ್ಟಿ ನಿಂತಿದ್ದು, ಸಾಲ ಮಾಡಿ ಬೇರೆಡೆಯಿಂದ ಮೇವು ಖರೀದಿಸಲು ಮುಂದಾಗಿದ್ದಾರೆ. ಒಂದು ಟ್ರ್ಯಾಕ್ಟರ್ ಶೇಂಗಾ ಮೇವಿಗೆ 12-15 ಸಾವಿರ ರೂ., ಜೋಳ ಹಾಗೂ ಮೆಕ್ಕೆಜೋಳದ ಮೇವಿಗೆ 8-10 ಸಾವಿರ ರೂ. ನೀಡಬೇಕಾಗಿದೆ. ಟ್ರ್ಯಾಕ್ಟರ್ ಬಾಡಿಗೆ ಹೊರತುಪಡಿಸಿ ಇಷ್ಟೊಂದು ಹಣ ನೀಡಿ ಮೇವು ಖರೀದಿಸಲು ರೈತರು ಮುಂದಾದರೂ ಮೇವು ಸಿಗುವುದು ಕಷ್ಟವಾಗಿದೆ. ಕೂಡಲೇ ಸರ್ಕಾರ ನೆರವಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಮಾರಾಟಕ್ಕೆ ಮುಂದಾದ ರೈತ: ಚರ್ಮಗಂಟು ರೋಗದಿಂದ ದನಕರುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸಪಟ್ಟ ರೈತರಿಗೆ ಸದ್ಯ ಮೇವಿನ ಸಮಸ್ಯೆ ಎದುರಾಗಿದೆ. ಜಾನುವಾರು ಸಂತೆ ನಿಷೇಧದಿಂದ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದ್ದರಿಂದ ಕಡಿಮೆ ಬೆಲೆಗೆ ಎತ್ತುಗಳನ್ನು ಮಾರಲು ರೈತರು ಮುಂದಾಗುತ್ತಿದ್ದಾರೆ.

    ಮೇವಿನ ಕೊರತೆಯಿಂದ ಜಾನುವಾರುಗಳನ್ನು ಮಾರಾಟ ಮಾಡುತ್ತಿರುವ ರೈತರ ಸಹಾಯಕ್ಕೆ ಸರ್ಕಾರ ಧಾವಿಸಬೇಕು. ಹನುಮನಾಳ ಹಾಗೂ ಹನುಮಸಾಗರ ಹೋಬಳಿಯಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳನ್ನು ಕೂಡಲೇ ಸ್ಥಾಪಿಸಬೇಕು.
    | ಶರಣಪ್ಪ ಬಾಚಲಾಪುರ, ಹನುಮಸಾಗರ ರೈತ ಸಂಘದ ಅಧ್ಯಕ್ಷ

    ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತಾಪಂ ಇಒ ಜತೆ ಸಭೆ ನಡೆಸಿ ಚರ್ಚಿಸಲಾಗುವುದು. ಪರಿಶೀಲನೆ ಮಾಡಿ ಎಲ್ಲೆಲ್ಲಿ ಗೋಶಾಲೆ ತೆರಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
    | ಆರ್.ರಾಘವೇಂದ್ರರಾವ್, ತಹಸೀಲ್ದಾರ್, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts