More

    ಸಮಸ್ಯೆ ಹೇಳಿಕೊಳ್ಳದ ಬಾಲಕಿಯರು: ಹನುಮಸಾಗರ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಅಧಿಕಾರಿಗಳ ಸಮಾಲೋಚನೆ

    ಹನುಮಸಾಗರ: ಪಟ್ಟಣದ ಆರ್‌ಎಂಎಸ್ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯ ನೀಡದೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಒಡನಾಡಿ ಸಂಸ್ಥೆಯಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ತಂಡ ಶುಕ್ರವಾರ ಹಾಸ್ಟೆಲ್ ಹಾಗೂ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿತು. ಈ ಸಮಯದಲ್ಲಿ ನೋಡಲ್ ಅಧಿಕಾರಿ ಹಾಗೂ ಬಿಇಒ ನಡುವೆ ವಾಗ್ವಾದ ನಡೆಯಿತು.

    ಘಟನೆ ವಿವರ: ಬೆಂಗಳೂರಿನಲ್ಲಿ ವಾಸವಿರುವ ಕುಷ್ಟಗಿ ತಾಲೂಕಿನ ನಿಲೋಗಲ್‌ನ ಅಕ್ಕಮಹಾದೇವಿ ಎಂಬುವರು ‘ನನ್ನ ಸಹೋದರಿ ಹನುಮಸಾಗರದ ಆರ್‌ಎಂಎಸ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ನೋಡಲ್ ಅಧಿಕಾರಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪಾಲಕರು ಕರೆ ಮಾಡಿದರೆ ಮಕ್ಕಳಿಗೆ ಕೊಡಲ್ಲ’ ಎಂದು ಪತ್ರದ ಮೂಲಕ ಡಿಡಿಪಿಐ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಬಿಇಒ ಹಾಗೂ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ಸಲ್ಲಿಸಿದ್ದರು.
    ಬಿಇಒ-ನೋಡಲ್ ಅಧಿಕಾರಿ ವಾಗ್ವಾದ
    ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಬಿಇಒ ಸುರೇಂದ್ರ ಕಾಂಬಳೆ ಹಾಗೂ ನಿಲಯದ ನೋಡಲ್ ಅಧಿಕಾರಿ ರಾಯಮ್ಮ ಉಕ್ಕಲಿ ನಡುವೆ ವಾಗ್ವಾದ ನಡೆಯಿತು. ನಿಮಗೆ ಉಸ್ತುವಾರಿ ನೋಡಿಕೊಳ್ಳಲು ಆಗದಿದ್ದರೆ ಹೇಳಿ, ಬೇರೆಯವರನ್ನು ನೇಮಿಸಲಾಗುತ್ತದೆ. ಆದರೆ, ನಿಮ್ಮ ಪತಿಯನ್ನು ನಿಲಯಕ್ಕೆ ಕಳುಹಿಸಬಾರದು ಎಂದರು. ಇದಕ್ಕೆ ರಾಯಮ್ಮ ಉಕ್ಕಲಿ ಉತ್ತರಿಸಿ, ಜವಾಬ್ದಾರಿ ನಿಭಾಯಿಸಲು ಆಗುತ್ತದೆ ಎಂದೇ ವಹಿಸಿಕೊಂಡಿದ್ದೇನೆ. ಒಂದೆರಡು ಸಲ ಪತಿ ನಿಲಯಕ್ಕೆ ಬಂದು ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ. ಅದನ್ನೇ ದೊಡ್ಡದಾಗಿ ಮಾಡಲಾಗುತ್ತಿದೆ. ವಿವಿಧ ದಾಖಲೆಗಳಿಗೆ ಸಹಿ ಮಾಡಿಸಲು ಕಚೇರಿಗೆ ಬಂದರೆ ನೀವಿರಲ್ಲ. ಮಹಿಳೆಯಾಗಿ ನೀವು ಬರುವವರೆಗೆ ಕಾಯಲು ಆಗುವುದಿಲ್ಲ ಎಂದು ಅಧಿಕಾರಿಗಳ ಸಮ್ಮುಖದಲ್ಲೇ ಬಿಇಒ ವಿರುದ್ಧ ಕೂಗಾಡಿದರು. ಈ ವೇಳೆ ತಹಸೀಲ್ದಾರ್ ಗುರುರಾಜ ಛಲವಾದಿ, ನನ್ನದು ಕೆಲಸವಿದೆ ಎಂದು ಹೊರಟು ಹೋದರು. ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಶಿಕ್ಷಕರು ವಾತವಾರಣ ತಿಳಿಗೊಳಿಸಿದರು.
    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ, ಬಿಆರ್‌ಸಿ ಆಪ್ತಸಮಾಲೋಚಕ ಜಗದೀಶ ಎಂ., ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಮ್ಮ ಹಂಡಿ, ಅಂಗನವಾಡಿ ಮೆಲ್ವೀಚಾರಕಿ ಮಂಜುಳಾ ಹಕ್ಕಿ, ಶಿಕ್ಷಣ ಸಂಯೋಜಕ ದಾವಲಸಾಬ್ ವಾಲಿಕಾರ, ಸಿಆರ್‌ಪಿ ಮಂಜುನಾಥ ಪೂಜಾರ, ಆರ್‌ಎಂಎಸ್ ವಸತಿ ನಿಲಯದ ಮೆಲ್ವೀಚಾರಕಿ ಭೀಮಾಂಬಿಕಾ ಗೊಡೆಕಾರ ಇತರರಿದ್ದರು.


    ಪತ್ರ ಬಂದ ಹಿನ್ನೆಲೆಯಲ್ಲಿ ದೂರು ನೀಡಿದ ಮಹಿಳೆ ಬಗ್ಗೆ ವಿಚಾರಿಸುತ್ತಿದ್ದಾರೆ. ಆದರೆ, ಈ ಹೆಸರಿನ ಯಾವುದೇ ಮಹಿಳೆ ಇಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಯಾವುದೇ ಸಮಸ್ಯೆ ಇರುವ ಬಗ್ಗೆ ಮಕ್ಕಳು ಹೇಳಿಲ್ಲ.
    ಗುರುರಾಜ ಛಲವಾದಿ
    ತಹಸೀಲ್ದಾರ್, ಕುಷ್ಟಗಿ

    ವಿದ್ಯಾರ್ಥಿಗಳು ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ. ನಿಲೋಗಲ್ ಸುತ್ತಲಿನ ವಿದ್ಯಾರ್ಥಿನಿಯರಾಗಲಿ, ಮಹಿಳೆಯ ಸಹೋದರಿಯಾಗಲಿ ನಿಲಯದಲ್ಲಿ ವಾಸವಿಲ್ಲ.
    ಸುರೇಂದ್ರ ಕಾಂಬಳೆ
    ಬಿಇಒ, ಕುಷ್ಟಗಿ

    ದೂರಿನ ಸತ್ಯಾಸತ್ಯತೆ ತಿಳಿಯಲು ಸ್ಥಳಕ್ಕೆ ಭೇಟಿ ನೀಡಿ ಕೆಲ ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ಮಾತನಾಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ತಿಳಿಸಿಲ್ಲ.
    ರೋಹಿಣಿ ಕೋಟಗಾರ
    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts