More

    ನಗರದಲ್ಲಿ ಹನುಮ ಜಯಂತಿ ಸಂಭ್ರಮ

    ಮೈಸೂರು: ನಗರದ ವಿವಿಧೆಡೆ ಸೋಮವಾರ ಹನುಮ ಜಯಂತಿ ಆಚರಿಸಲಾಯಿತು.
    ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಗಣಪತಿ ಸಚ್ಚಿದಾನಂದ ಆಶ್ರಮ, ಗೋಕುಲಂ, ಕುವೆಂಪುನಗರ, ಹೆಬ್ಬಾಳ, ಬಸವೇಶ್ವರನಗರ, ರಾಮಾನುಜ ರಸ್ತೆ, ತ್ಯಾಗರಾಜ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಇರ್ವೀನ್ ರಸ್ತೆ, ಗನ್‌ಹೌಸ್ ಸೇರಿದಂತೆ ವಿವಿಧೆಡೆ ಇರುವ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಸೋಮವಾರ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಆಂಜನೇಯ ಮೂರ್ತಿಗೆ ಹೋಮ-ಹವನ, ವಿವಿಧ ಅಭಿಷೇಕ ನಡೆದವು. ವಿಶೇಷವಾಗಿ ಅಲಂಕಾರ ಮಾಡಿ ಮಹಾಮಂಗಳಾರತಿ ಬೆಳಗಲಾಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಆಂಜನೇಯನ ದರ್ಶನ ಪಡೆದರು.


    ಕುವೆಂಪುನಗರದಲ್ಲಿರುವ ಶ್ರೀ ಪ್ರಸನ್ನವೀರ ಆಂಜನೇಯಸ್ವಾಮಿ ದೇಗುಲದಲ್ಲಿ ಬೆಳಗ್ಗೆಯಿಂದಲೇ ನಾನಾ ಪೂಜಾ ಕಾರ್ಯಗಳು ನೆರವೇರಿದವು. ಅಗ್ರಹಾರದಲ್ಲಿರುವ ಚಿಕ್ಕಾಂಜನೇಯ ಸ್ವಾಮಿ ದೇಗುಲವನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ತ್ರಿಪುರ ಭೈರವಿ ಮಠದ ವತಿಯಿಂದ ಶಿವರಾಂಪೇಟೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ, ಹೋಮ, ಅಭಿಷೇಕ ನಡೆಯಿತು. ಹೆಬ್ಬಾಳದ ವಿದ್ಯಾಗಣಪತಿ ದೇವಸ್ಥಾನ, ಗನ್‌ಹೌಸ್ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಕೆಲವೆಡೆ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
    ಪಂಚಮುಖಿ ಆಂಜನೇಯ: ಇರ್ವೀನ್ ರಸ್ತೆಯ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರಾತಃಕಾಲ ಲೋಕಕಲ್ಯಾಣಾರ್ಥವಾಗಿ ಮಹಾಸಂಕಲ್ಪ ಪುಣ್ಯಾಹ ವಾಚನ, ರಕ್ಷಾ ಬಂಧನ, ಧ್ವಜಾರೋಹಣ, ಕಲಶ ಪ್ರತಿಷ್ಠೆ ನೆರವೇರಿದವು. ಗರುಡ ದೇವರಿಗೆ ಪಂಚಾಮೃತ ಹಾಗೂ ವಿವಿಧ ದ್ರವ್ಯಗಳಿಂದ ವಿಶೇಷ ಅಭಿಷೇಕ ಮಾಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಎಸ್.ಕಷ್ಣಮೂರ್ತಿ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಸ್ಥಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಡಿ.13ರವರೆಗೂ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts