More

    ಕೋಟಿ ಮೊತ್ತದ ತೂಗುಸೇತುವೆಗೆ ಎಳ್ಳುನೀರು

    ಮಂಗಳೂರು: ಹತ್ತು ವರ್ಷಗಳ ಹಿಂದೆ ಬಹುನಿರೀಕ್ಷೆ ಹುಟ್ಟಿಸಿದ್ದ ಘಲ್ಗುಣಿ ನದಿಯ ತೀರಗಳಾದ ಸುಲ್ತಾನ್ ಬತ್ತೇರಿ ಹಾಗೂ ಬೆಂಗ್ರೆ ನಡುವಿನ ತೂಗುಸೇತುವೆಗೆ ಕಾಮಗಾರಿಗೆ ಎಳ್ಳುನೀರು ಬಿಡಲಾಗಿದೆ.

    ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ 2010ರಲ್ಲಿ ಆ.23ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಬಳಿಕ 2013ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿ ಕಾಮಗಾರಿಗೆ ಚಾಲನೆಯನ್ನೂ ನೀಡಿದ್ದರು. ಶಾಸಕರಾಗಿದ್ದ ಯೋಗೀಶ್ ಭಟ್ ಅವರ ಕನಸಿನ ಯೋಜನೆಗಳಲ್ಲಿ ಇದೂ ಒಂದಾಗಿತ್ತು.

    ಆರಂಭದಲ್ಲಿ 3 ಮೀ.ಅಗಲ ಹಾಗೂ 410 ಮೀ. ಉದ್ದದ ತೂಗುಸೇತುವೆಯನ್ನು 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಬಳಿಕ ಇದು 10 ಅಡಿಗೆ ವಿಸ್ತರಣೆಯಾದ ಕಾರಣ ಯೋಜನಾ ವೆಚ್ಚ ಹೆಚ್ಚಾಗಿ 12 ಕೋಟಿ ರೂ.ಗೆ ಏರಿಕೆಯಾಯಿತು. 2012ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದು, ದ.ಕ ನಿರ್ಮಿತಿ ಕೇಂದ್ರದ ಮೂಲಕ ಯೋಜಕ ಇಂಡಿಯಾ ಪ್ರೈ.ಲಿ ಸಂಸ್ಥೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿತ್ತು. ಕೆಲಸ ಆರಂಭವಾಗಬೇಕಿದ್ದರೆ ಯೋಜನಾ ವೆಚ್ಚದ ಮೂರನೇ ಒಂದು ಭಾಗದಷ್ಟು ಹಣ ಬಿಡುಗಡೆಯಾಗಬೇಕಿತ್ತು. ಆದರೆ ಇಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದು, 1 ಕೋಟಿ ರೂ. ಇದರಿಂದಾಗಿ ಪ್ರವಾಸೋದ್ಯಮ ಇಲಾಖೆ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಿತು. ಬಳಿಕ ಯೋಜನೆಯನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಲು ಸರ್ಕಾರ ಉದ್ದೇಶಿಸಿತ್ತು. ಅದರಂತೆ ವರ್ಗಾವಣೆ ಪ್ರಕ್ರಿಯೆ ನಡೆಯಿತಾದರೂ, ಕಾಮಗಾರಿ ಆರಂಭಗೊಳ್ಳಲೇ ಇಲ್ಲ. ಕೊಟ್ಟ ಭರವಸೆಗಳು,ಹೇಳಿಕೆಗಳು ಗಾಳಿಯಲ್ಲೇ ತೂರಿ ಹೋದವು ವಿನ: ಯಾವ ಒಬ್ಬ ಜನಪ್ರತಿನಿಧಿ ಕೂಡಾ ಬದ್ದತೆಯನ್ನು ಪ್ರದರ್ಶಿಸಲಿಲ್ಲ.

    ಹೊಸ ಮಾದರಿ ತೂಗು ಸೇತುವೆ?: ಜನರು ನಡೆದುಕೊಂಡು ಹೋಗುವ ಸೇತುವೆ ನಿರ್ಮಾಣ ಮಾಡುವುದಕ್ಕಿಂತ ದ್ವಿಚಕ್ರ ವಾಹನ, ಕಾರು, ಆಟೋ ಮೊದಲಾದ ಲಘು ವಾಹನಗಳ ಸಂಚಾರಕ್ಕೆ ಪೂರಕ ಹೊಸ ಮಾದರಿ ತೂಗು ಸೇತುವೆ ನಿರ್ಮಾಣವಾಗಬೇಕಿದೆ ಎನ್ನುತ್ತಾರೆ ಹಾಲಿ ಶಾಸಕ ವೇದವ್ಯಾಸ ಕಾಮತ್. ಆದರೆ ಸದ್ಯದ ಮಟ್ಟಿಗೆ ಇದೂ ಸಾಧ್ಯವೇ ಎಂದು ನೋಡಬೇಕಿದೆ. ನದಿಯಲ್ಲಿ ಬೋಟ್‌ಗಳು ಸಾಗುವುದರಿಂದ ಸೇತುವೆ ಎತ್ತ ರ ಹೆಚ್ಚಾಗಬೇಕು, ಜತೆಗೆ ದೊಡ್ಡ ಮೊತ್ತವೂ ಬೇಕು. ದೊಡ್ಡ ಮೊತ್ತ ನೀಡುವಾಗ ಸರ್ಕಾರ ಯೋಜನೆ ಕುರಿತು ಸಂಪೂರ್ಣ ಅಧ್ಯಯನ ಮಾಡಿಯೇ ನೀಡುತ್ತದೆ. ಸೇತುವೆ ನಿರ್ಮಾಣದ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವ, ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸೇತುವೆ ಯಾಕೆ?: ಮಂಗಳೂರು ನಗರ ವ್ಯಾಪ್ತಿಗೆ ಸೇರಿದರೂ ಬೆಂಗ್ರೆ ಪ್ರದೇಶದ ಜನರು ನಗರಕ್ಕೆ ಬರಬೇಕಾದರೆ ಫಲ್ಗುಣಿ ನದಿಯನ್ನು ಬೋಟ್ ಮೂಲಕ ದಾಟಿ ಸುಲ್ತಾನ್ ಬತ್ತೇರಿಗೆ ಬರುವುದು ಹತ್ತಿರದ ದಾರಿ. ರಸ್ತೆ ಮೂಲಕವೂ ಬರಬಹುದಾದರೂ 8 ಕಿ.ಮೀ ಸುತ್ತು ಬಳಸಬೇಕು. ಪ್ರತಿನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಗರದಲ್ಲಿ ಕೆಲಸ ಮಾಡುವವರು, ಮಹಿಳೆಯರು ಮಕ್ಕಳು ಎಂದು ಸಾವಿರಾರು ಮಂದಿ ಬೋಟ್ ಮೂಲಕವೇ ಮಂಗಳೂರಿಗೆ ಬರುತ್ತಾರೆ. ಒಂದು ಬೋಟ್‌ನಲ್ಲಿ ಗರಿಷ್ಠ 30 ಮಂದಿ ಸಾಗಬಹುದು. ರಾತ್ರಿ 7.30ಕ್ಕೆ ಬೋಟ್ ಸಂಚಾರ ಅವಧಿ ಮುಗಿಯುತ್ತದೆ. ರಾತ್ರಿ ವೇಳೆ ತುರ್ತು ಮಂಗಳೂರಿಗೆ ಬರಬೇಕಿದ್ದರೆ ರಸ್ತೆಯನ್ನೇ ಬಳಸಬೇಕು. ಬೆಂಗ್ರೆಯಲ್ಲೇ ತಣ್ಣೀರುಬಾವಿ ಬೀಚ್ ಇದ್ದು, ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರತಿ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ವೇಳೆ ಪ್ರವಾಸಿಗರ ದೊಡ್ಡ ಸಾಲು ನದಿ ತಟದಲ್ಲಿ ಕಾಣಲು ಸಿಗುತ್ತದೆ. ನದಿಯ ಎರಡು ದಡಗಳ ನಡುವೆ ಸೇತುವೆ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲ.

    ಶಾಶ್ವತ ಸೇತುವೆಗೆ ಯೋಜನೆ ರೂಪಿಸಿದ್ದ ಲೋಬೋ: ಯೋಗೀಶ್ ಭಟ್ ನಂತರ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಜೆ.ಆರ್.ಲೋಬೋ ಸುಲ್ತಾನ್ ಬತ್ತೇರಿ ಮತ್ತು ಬೆಂಗ್ರೆ ನಡುವೆ ಶಾಶ್ವತ ಸೇತುವೆ ನಿರ್ಮಾಣದ ಉದ್ದೇಶ ಹೊಂದಿದ್ದರು. ಕೇಂದ್ರ ಸರ್ಕಾರದ ಸಾಗರ್‌ಮಾಲಾ ಯೋಜನೆಯಲ್ಲಿ ನೇತ್ರಾವತಿ ಸೇತುವೆ ಬಳಿಯಿಂದ ನಾಲ್ಕು ಪಥದ ಲಿಂಕ್‌ರಸ್ತೆಯ ಮೂಲಕ ಹಳೇ ಬಂದರು ಮತ್ತು ಪಣಂಬೂರಿನ ನವಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವಿತ್ತು. ಇದರಲ್ಲಿ ಸುಲ್ತಾನ್ ಬತ್ತೇರಿ-ಬೆಂಗ್ರೆ ನಡುವೆ ತೂಗುಸೇತುವೆ ಬದಲು ಶಾಶ್ವತ ಸೇತುವೆ ನಿರ್ಮಾಣವೂ ಸೇರಿತ್ತು. ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಈ ಕುರಿತು ಮನವಿ ಮಾಡಿ, ಯೋಜನಾ ವರದಿ ತಯಾರಿಸಲು ಸಿದ್ಧತೆಯೂ ನಡೆದಿತ್ತು. ಸುಮಾರು 3000 ಸಾವಿರ ಕೋಟಿ ರೂ.ವೆಚ್ಚದಲ್ಲಿ ಈ ಬೃಹತ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಿದ್ದರು. ವಿಪರ್ಯಾಸವೆಂದರೆ ಈ ಕೆಲಸಗಳು ಮುಂದುವರಿಯಲೇ ಇಲ್ಲ.

    ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಲಿಂಕ್ ರಸ್ತೆ ನಿರ್ಮಿಸಿ ಅದರಲ್ಲಿ ಸೇತುವೆಯನ್ನೂ ಸೇರಿಸುವ ಉದ್ದೇಶವಿತ್ತು. ಜತೆಗೆ ಮಂಗಳೂರಿನ ಹಳೇ ಬಂದರನ್ನು ಬೆಂಗ್ರೆ ಕಡೆಗೆ ಸ್ಥಳಾಂತರಿಸಿ, ನದಿಯ ಈ ಭಾಗದಲ್ಲಿ ಸಂಪೂರ್ಣ ಮೀನುಗಾರಿಕಾ ದೋಣಿಗಳು ನಿಲ್ಲಲು ಅವಕಾಶ ನೀಡಬೇಕು ಎನ್ನುವ ದೊಡ್ಡ ಯೋಜನೆ ರೂಪಿಸಲಾಗಿತ್ತು. ಸದ್ಯ ಏನಾಗಿದೆ ಎನ್ನುವ ಮಾಹಿತಿಯೇ ಇಲ್ಲ.

    ಜೆ.ಆರ್.ಲೋಬೋ ಮಾಜಿ ಶಾಸಕ

    ಸುಲ್ತಾನ್ ಬತ್ತೇರಿ-ಬೆಂಗ್ರೆ ನಡುವಿನ ತೂಗುಸೇತುವೆ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಹೊಸದಾಗಿ ಯೋಜನೆ ತಯಾರಿಸಿ, ಉತ್ತಮ ಸೇತುವೆ ನಿರ್ಮಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇನೆ.

    ಡಿ.ವೇದವ್ಯಾಸ ಕಾಮತ್ ಶಾಸಕ 

    5 ಕೋಟಿ ರೂ.ಮೊತ್ತದ ಪರಿಷ್ಕೃತಗೊಂಡು 12 ಕೋಟಿ ರೂ.ಗೆ ಏರಿಕೆಯಾದ ಕಾರಣ, ಪಿಡಬ್ಲುೃಡಿಯವರು ಯೋಜನೆ ನಿರ್ವಹಿಸಬೇಕು ಎಂದು ಸರ್ಕಾರ ಸೂಚಿಸಿತ್ತು. ಆ ಕಾರಣ ಪ್ರವಾಸೋದ್ಯಮ ಇಲಾಖೆಯಿಂದ ಪಿಡಬ್ಲುೃಡಿಗೆ ಹಸ್ತಾಂತರ ಮಾಡಲಾಗಿದೆ. ಪ್ರಸ್ತುತ ಯೋಜನೆ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯಿಲ್ಲ.

    ಡಾ.ಉದಯ ಕುಮಾರ್ ಶೆಟ್ಟಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts