More

    ರೈತರ ಬದುಕು ಹಸನಾಗಿಸುವ ಹಂದ್ರೀನಿವಾ ; ಪೇರೂರು ಡ್ಯಾಂಗೆ ಹರಿಯುತ್ತಿದೆ ನೀರು

    ಪಾವಗಡ : ರೈತರ ಬದುಕು ಹಸನಾಗಿಸಲು ಹಂದ್ರೀನಿವಾ ಯೋಜನೆಯಲ್ಲಿ ನಾಗಲಮಡಿಕೆಯ ಉತ್ತರಪಿನಾಕಿನಿ ಹಳ್ಳದ ಮೂಲಕ ಪೇರೂರು ಡ್ಯಾಂಗೆ ನೀರು ಹರಿಸಲಾಗುತ್ತಿದೆ ಎಂದು ಆಂಧ್ರದ ಲೋಕೋಪಯೋಗಿ ಸಚಿವ ಶಂಕರ್‌ನಾರಾಯಣ್ ತಿಳಿಸಿದರು.

    ನಾಗಲಮಡಿಕೆ ಸುತ್ತಮುತ್ತಲಿನ ರೈತರು ಗುರುವಾರ ಹಮ್ಮಿಕೊಂಡಿದ್ದ ಉತ್ತರಪಿನಾಕಿನಿ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿ.ಮಾಜಿ ಸಿಎಂ ವೈ.ಎಸ್.ರಾಜಶೇಖರರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆ ಸೇರಿ ಪ್ರತಿ ಗ್ರಾಮಕ್ಕೆ ನೀರು ಹರಿಸಲು 5, 800 ಕೋಟಿ ರೂಪಾಯಿ ಬಜೆಟ್‌ನಲ್ಲಿ ಘೋಷಿಸಿ ಕೈಗೆತ್ತಿಕೊಂಡಿದ್ದರು. ಆದರೆ, ಅವರು ಕಾವಾದ ನಂತರ ಟಿಟಿಡಿಪಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು 9 ಕೋಟಿ ರೂಪಾಯಿ ನೀಡಿದ್ದರಿಂದ ಯೋಜನೆ ಕುಂಟುತ್ತಾ ಸಾಗಿತ್ತು, 2019ರಲ್ಲಿ ವೈಎಸ್‌ಆರ್ ಪಕ್ಷದಿಂದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ್ತೆ ಈ ಯೋಜನೆಗೆ ಚಾಲನೆ ನೀಡಿದ್ದರ ಫಲವಾಗಿ ಇಂದು ಬರಪೀಡಿತ ಪ್ರದೇಶವಾದ ಪಾವಗಡ ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಕೃಷ್ಣಾ ನೀರು ಹರಿಯುವಂತಾಯಿತು ಎಂದು ತಿಳಿಸಿದರು.

    ಯೋಜನೆ ರೂವಾರಿ ರಾಪ್ತಾಡು ಶಾಸಕ ತೋಪುದುರ‌್ತಿ ಪ್ರಕಾಶ್ ರೆಡ್ಡಿ ಮಾತನಾಡಿ, ದಿ.ವೈ.ಎಸ್.ರಾಜಶೇಖರರೆಡ್ಡಿ ಪಾದಯಾತ್ರೆ ಮೂಲಕ ರಾಪ್ತಾಡು ಕ್ಷೇತ್ರಕ್ಕೆ ಬಂದಾಗ, 40 ವರ್ಷಗಳಿಂದ ಬತ್ತಿದ್ದ ಪೇರೂರು ಡ್ಯಾಂಗೆ ನೀರು ಹರಿಸುವುದಾಗಿ ಮಾತುಕೊಟ್ಟಿದ್ದರು. ತಂದೆಯ ಮಾತಿನಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಮಾತು ಉಳಿಸಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಪೇರೂರು ಡ್ಯಾಂಗೆ ನಾಗಲಮಡಿಕೆ ಮೂಲಕ ನೀರು ಹರಿಯುತ್ತಿದ್ದು, ಇದಕ್ಕೆ ಸಹಕರಿಸಿದ ಕರ್ನಾಟಕದ ಮುಖ್ಯಮಂತ್ರಿ ಯುಡಿಯೂರಪ್ಪ, ಸಂಸದ ಎ.ನಾರಾಯಣಸ್ವಾಮಿಗೆ ಧನ್ಯವಾದ ತಿಳಿಸಿದರು.
    ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಹಂದ್ರೀನಿವಾ ಯೋಜನೆಯಲ್ಲಿ ನಿರಂತರವಾಗಿ ನೀರು ಹರಿಸಬೇಕು ಎಂದರು. ಜೆಡಿಎಸ್ ಮುಖಂಡ ಎಸ್.ಕೆ.ರೆಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ರವಿಶಂಕರ್ ನಾಯ್ಕ, ಮುಖಂಡರಾದ ಡಾ. ಜಿ.ವೆಂಕಟರಾಮಯ್ಯ, ವಕೀಲರಾದ ಕೃಷ್ಣಾನಾಯ್ಕ, ಬಿ.ಕೆ.ಹಳ್ಳಿ ಮುಂಜುನಾಥರೆಡ್ಡಿ, ಆಂಧ್ರ ಹಾಗೂ ತಾಲೂಕಿನ ರೈತರು ಇದ್ದರು.

    ಶಾಸಕ ವೆಂಕಟರವಣಪ್ಪ ಗೈರು: ಉತ್ತರಪಿನಾಕಿನಿ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಶಾಸಕ ವೆಂಕಟರವಣಪ್ಪ ಗೈರಾಗಿದ್ದರು, ರಾಪ್ತಾಡು ಶಾಸಕ ತೋಪುದುರ‌್ತಿ ಪ್ರಕಾಶ್‌ರೆಡ್ಡಿ ಮತ್ತು ಶಾಸಕ ವೆಂಕಟರವಣಪ್ಪ ರಾಜಕೀಯ ವೈರಿಗಳಾಗಿದ್ದು, ಈ ಯೋಜನೆ ಪ್ರಕಾಶ್ ರೆಡ್ಡಿ ಕೈಗೆತ್ತಿಕೊಂಡಾಗಿನಿಂದ ಶಾಸಕರು ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುತ್ತಿರಲಿಲ್ಲ. ಗೈರು ವಿಚಾರವಾಗಿ ಶಾಸಕರನ್ನು ವಿಜಯವಾಣಿ ಸಂರ್ಪಕಿಸಿದಾಗ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಹಂದ್ರಿನೀವಾ ಯೋಜನೆಯಲ್ಲಿ ನಾಗಲಮಡಿಕೆ ಉತ್ತರಪಿನಾಕಿನಿ ಹಳ್ಳದ ಮೂಲಕ ಪೇರೂರು ಡ್ಯಾಂಗೆ ನೀರು ಹರಿಸಲು ರಾಪ್ತಾಡು ಶಾಸಕ ದೋಪುದುರ‌್ತಿ ಪ್ರಕಾಶ್‌ರೆಡ್ಡಿ ಮನವಿ ಮಾಡಿದಾಗ, ಸಿಎಂ ಬಿಎಸ್‌ವೈ ಬಳಿ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ನೀರು ಹರಿಸಲು ಒಪ್ಪಿದ್ದರಿಂದ ಇಂದು ನಾಗಲಮಡಿಕೆ ಸುತ್ತಮುತ್ತಲಿನ 14 ಹಳ್ಳಿಗಳ ರೈತರಿಗೆ ಅನುಕೂಲವಾಗುತ್ತಿದೆ.
    ಎ.ನಾರಾಯಣಸ್ವಾಮಿ, ಸಂಸದ

    ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಪಾವಗಡ ಪಕ್ಕದ ಆಂಧ್ರದ ಕಲ್ಯಾಣದುರ್ಗ, ಮಡಕಶಿರಾ ತಾಲೂಕುಗಳಿಗೂ ನೀರು ಹರಿಸಲಿ.
    ತೋಪುದುರ‌್ತಿ ಪ್ರಕಾಶ್ ರೆಡ್ಡಿ, ರಾಪ್ತಾಡು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts