More

    ವಿಕಲಚೇತನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವಾಗಬೇಕು: ಸಚಿವ ಎಚ್.ಕೆ.ಪಾಟೀಲ

    ಗದಗ: ವಿಕಲಚೇತನರಲ್ಲಿ  ಆತ್ಮಸ್ಥೈರ್ಯ ಮೂಡಿಸುವ ಕೆಲಸವಾಗಬೇಕು.  ಸಮಾಜದಲ್ಲಿ ವಿಕಲಚೇತನರನ್ನು ಅಶಕ್ತರು ಎಂಬ ಕೀಳರಿಮೆಯಿಂದ ನೋಡಬಾರದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ತಿಳಿಸಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ರವಿವಾರದಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ  ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ  ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ವಿಕಲತೆಯನ್ನು ಮೆಟ್ಟಿ ನಿಂತು ತಮ್ಮಲ್ಲಿ ಹುದುಗಿರುವ ಕಲೆಯನ್ನು ಪ್ರೋತ್ಸಾಹಿಸಬೇಕು. ವಿಕಲಚೇತನರನ್ನು ಇತರ ರೀತಿಯಿಂದ ಶಕ್ತನಾಗಿರುವವನು ಎಂದು ಜಗತ್ತು ಗುರುತಿಸುತ್ತಿದೆ. ವಿಕಲಚೇತನರು ಗಣಿತ, ಕಂಪ್ಯೂಟರ್ ಜ್ಞಾನ, ಸಂಗೀತ,  ಸಾಹಿತ್ಯ, ಕಲೆ,  ವಿವಿಧ ಹಂತದ ಸಮಾಜ ಸೇವೆಯಲ್ಲಿ ತಮ್ಮ ಶಕ್ತಿ ಹಾಗೂ ಯುಕ್ತಿಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  ವಿಕಲಚೇತನರಿಗೆ ಅನುಕಂಪ ತೋರದೇ ಅವಕಾಶ ಕೊಡಬೇಕು. ಸಮಸ್ಯೆಗಳು ಎಷ್ಟೇ ಬಂದರೂ ಸಾಧಿಸಿ ತೋರಿಸಬೇಕು ಎನ್ನುವ ಛಲ ವಿಕಲಚೇತನರಲ್ಲಿದ್ದರೆ ಅವರು ದೇಶಕ್ಕೆ ದೊಡ್ಡ ಆಸ್ತಿಯಾಗುತ್ತಾರೆ. ಜಿಲ್ಲೆಯ ಪಂಚಾಕ್ಷರಿ ಗವಾಯಿಗಳ ಆಶ್ರಮವು ಕಣ್ಣಿಲ್ಲದವರಿಗೆ ಬದುಕು ಕಟ್ಟಿಕೊಳ್ಳುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ವಿಕಲಚೇತನರ ಸೇವೆಯಲ್ಲಿ ಗದಗ ಜಿಲ್ಲೆ ಅಗ್ರ ಸ್ಥಾನದಲ್ಲಿರಬೇಕು.  ಸರ್ಕಾರವು ವಿಕಲಚೇತನರಿಗಾಗಿ ಜಾರಿಗೆ ತಂದಿರುವ ಸೌಲಭ್ಯಗಳು ಹಾಗೂ ಅನುಕೂಲತೆಗಳು ಶೀಘ್ರಗತಿಯಲ್ಲಿ ಅವರಿಗೆ ದೊರಕುವಂತಾಗಬೇಕು. ಸೌಲಭ್ಯಗಳು ಅವರಿಗೆ ತಲುಪುವಲ್ಲಿ ಏನಾದರೂ ತೊಂದರೆಯಾದರೆ ವಿಶೇಷ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಚಿವ ಡಾ.ಎಚ್.ಕೆ.ಪಾಟೀಲ ನುಡಿದರು.  

    ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮಾತನಾಡಿ ವಿಕಲಚೇತನ ಮಕ್ಕಳು ದೇವರ ಮಕ್ಕಳಿಗೆ ಸಮಾನ. ದೈಹಿಕ ವಿಕಲತೆ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು. ಅವರಿಗೆ ದೇವರು ಬೇರೆ ರೀತಿಯಲ್ಲಿ ಅಗಾಧ ಶಕ್ತಿ ಕೊಟ್ಟಿರುತ್ತಾರೆ.   ಜಿಲ್ಲೆಯ ವಿರೇಶ್ವರ ಪುಣ್ಯಾಶ್ರಮದ  ಡಾ.ಪಂ. ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ಸಹಿತ ಸಂಗೀತ ಕ್ಷೇತ್ರದಲ್ಲಿ ಜಗತ್ತಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ.  ಅವರು ಕಣ್ಣಿಲ್ಲದಿದ್ದರೂ 12 ತರಹದ ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದರು  ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.  ವೀಲ್ ಚೇರ್ ಮೇಲೆ ಬದುಕು ಸವೆಸಿದ ಯು.ಕೆ. ದ ಸ್ಟೀಫನ್ ಹಾಕಿಂಗ್ ಎಂಬ ವಿಜ್ಞಾನಿ ಇಡೀ ಜಗತ್ತಿಗೆ ಭೌತಶಾಸ್ತ್ರ , ಗಣಿತ ಶಾಸ್ತ್ರದಲ್ಲಿ ಶ್ರೇಷ್ಟ ವಿಜ್ಞಾನಿಯಾಗಿ ಗುರುತಿಸಿಕೊಂಡರು. ಅಂಗವಿಕಲರ ಸರ್ವತೋಮುಖ ಬೆಳವಣಿಗೆಗೆ ಸರ್ಕಾರದಿಂದ ವಿತರಿಸಿದ ವಿಕಲಚೇತನರ   ಸ್ಕಾಲರ್ ಶಿಪ್, ಸಾಧನ ಸಲಕರಣೆಗಳ ಸದ್ಭಳಕೆಯಾಗಬೇಕೆಂದು ಸಲಹೆ ಮಾಡಿದರು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ಮಾತನಾಡಿ  ವಿಕಲಚೇತನರ ದಿನಾಚರಣೆಯನ್ನು 1992 ರಿಂದ ಅಚರಿಸಲಾಗುತ್ತಿದೆ. 2016ರಲ್ಲಿ ವಿಕಲಾಂಗಚೇತನರ ಅಧಿನಿಯಮ ಜಾರಿಗೆ ಬಂದಿತು. ಈ ಕಾಯ್ದೆಯಲ್ಲಿ ವಿಕಲಾಂಗ ಚೇತನರ ಹಕ್ಕುಗಳ ಮೇಲೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಹಾಗೂ 21 ತರಹದ ವಿವಿಧ ನ್ಯೂನತೆಗಳನ್ನು  ಸಹ ಅಂಗವಿಕಲತೆಯನ್ನು ಗುರುತಿಸಲಾಗಿದೆ.  ಸರ್ಕಾರದಿಂದ ವಿಕಲಚೇತನರಿಗೆ  ಜಾರಿ ಮಾಡಿರುವ ವಿವಿಧ ಸೌಲಭ್ಯಗಳು ಅವರಿಗೆ ತ್ವರಿತಗತಿಯಲ್ಲಿ ದೊರಕುವಂತಾಗಬೇಕೆಂದರು.

    ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ವಿಕಲಚೇತನರಿಗೆ ಸನ್ಮಾನಿಸಲಾಯಿತು. ವಿಕಲಚೇತನರ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಕಲಚೇತನರಿಗಾಗಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಕಲಚೇತನರಿಗೆ ಟ್ರೈಸಿಕಲ್, ವೀಲ್‍ಚೇರ್ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಶ್ರೀಮತಿ ರಾಧಾ ಮಣ್ಣೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ತಹಶೀಲ್ದಾರರಾದ ಶ್ರೀನಿವಾಸ ಕುಲಕರ್ಣಿ, ವಿಕಲಚೇತನರ  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಶಿರಹಟ್ಟಿ,  ಮಾಗಡಿ ಗ್ರಾ.ಪಂ. ಸದಸ್ಯರಾದ ವೀರಯ್ಯ ಮಠಪತಿ,  ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ ಕಡೆಮನಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ- ಸಂಸ್ಥೆಗಳು , ವಿವಿಧ ವಿಕಲಚೇತನರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

    ಕು. ಸಂಗೀತಾ ಭರಮಗೌಡರ ಪ್ರಾರ್ಥಿಸಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಕೆ. ಮಹಾತೇಶ ಸರ್ವರಿಗೂ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts