More

    ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದನ್ನು ಸಾಬೀತುಪಡಿಸಿದ ಯುವಕ!

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ಒಕ್ಕಲುತನವನ್ನೇ ಬದುಕಾಗಿಸಿಕೊಂಡ ಕುಟುಂಬದ ಯುವಕ ಓದಿದ್ದು ಎಸ್​ಎಸ್​ಎಲ್​ಸಿ. ಕೃಷಿ ಮೇಲಿನ ಪ್ರೀತಿ, ಆಸಕ್ತಿಯಿಂದ ಉತ್ತಮ ಸಾಧನೆ ಮಾಡುವ ಮೂಲಕ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದನ್ನು ಸಾಬೀತುಪಡಿಸಿದ್ದಾರೆ.

    ಅದುವೇ ತಾಲೂಕಿನ ಮಾಡಳ್ಳಿ ಗ್ರಾಮದ ಹನಮಂತಪ್ಪ ಚಿಂಚಲಿ. ತಂದೆಯ ಸಲಹೆಯಂತೆ ಶಿಕ್ಷಣ ಮೊಟುಕುಗೊಳಿಸಿ ಕೃಷಿಕನಾದ ಅವರು, ತಮ್ಮ ವಿಭಿನ್ನ ಪ್ರಯೋಗ, ಪದ್ಧತಿಗಳ ಮೂಲಕ ಹೆಸರುವಾಸಿಯಾಗಿದ್ದಾರೆ.

    ಸ್ವಂತದ 30 ಎಕರೆ ಕಪ್ಪು ಮಣ್ಣಿನ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಹನಮಂತಪ್ಪ, ಪ್ರಮುಖವಾಗಿ ಹೆಸರು, ಶೇಂಗಾ, ಮೆಣಸಿನಕಾಯಿ, ಹತ್ತಿ, ಕಡಲೆ, ಕುಸುಬಿ, ಗೋದಿ ಬೆಳೆಯುವ ಇವರು ವಾರ್ಷಿಕ ಸರಾಸರಿ 12 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಭೂಮಿ ತಾಯಿ ನಂಬಿದರೆ ಕೇಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

    ಕೃಷಿ ಹೊಂಡ ನಿರ್ವಿುಸಿ, ತರಕಾರಿ ಬೆಳೆಯುವ ಜತೆಗೆ ಅವಶ್ಯಕ ಸಂದರ್ಭದಲ್ಲಿ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರು ಹಾಯಿಸುತ್ತಾರೆ. ಕೃಷಿ ಹೊಂಡದಲ್ಲಿ 2019ರಿಂದ ಮೀನು ಸಾಕಾಣಿಕೆ ಮಾಡುತ್ತಿದ್ದು, ವಾರ್ಷಿಕ 75 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಕೆರೆಯಂಚಿನ ಗಿಡ-ಮರಗಳಲ್ಲಿ ಸಣ್ಣ ಪ್ರಮಾಣದ ಜೇನು ಕೃಷಿ ಮಾಡುತ್ತಾರೆ. ಮಣ್ಣಿನ ಸವಕಳಿ ತಡೆಗಾಗಿ ನರೇಗಾ ಯೋಜನೆಯಡಿ ಇಳಿಜಾರು ಬದು ನಿರ್ಮಾಣ ಮಾಡಿ, ಜಮೀನಿನ ಬದುವುಗಳಲ್ಲಿ ಬೇವು, ಹೆಬ್ಬೇವು, ಬನ್ನಿ, ಹೊಂಗೆ ಮರ ಬೆಳೆಸಿದ್ದಾರೆ.

    ಸಾವಯವ ಕೃಷಿಗೆ ಒತ್ತು: ಹನಮಂತಪ್ಪ ಚಿಂಚಲಿ 5 ದೇಶಿ ಆಕಳು, 3 ಎತ್ತುಗಳಿಂದ ಕೊಟ್ಟಿಗೆ ಗೊಬ್ಬರದ ಜತೆಗೆ ಎರೆಹುಳು, ಹಸಿರೆಲೆ ಗೊಬ್ಬರ ತಯಾರಿಸಿ ತಮ್ಮ ಭೂಮಿಯ ಫಲವತ್ತತೆಗೆ ಬಳಸುತ್ತಾ ಬಂದಿದ್ದಾರೆ. ಕೃಷಿ ವಿವಿಯಲ್ಲಿ ತರಬೇತಿ ಪಡೆದು ಜೀವಾಮೃತ, ಗೋಕೃಪಾಮೃತ, ಹುಳಿ ಮಜ್ಜಿಗೆ, ದಶಪರ್ಣಿ(ಕೀಟ, ರೋಗನಾಶಕ), ಗೋಮೂತ್ರ, ವೇಸ್ಟ್ ಡಿ ಕಂಪೂಜರ್, ಬೇವು ಮಿಶ್ರಿತ ಎರೆಹುಳು ಗೊಬ್ಬರ ಸ್ವತಃ ತಯಾರಿಸಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

    ಕೃಷಿಗೆ ಚಟುವಟಿಕೆಗೆ ಬೇಕಾದ ಯಂತ್ರೋಪಕರಣ ಹೊಂದಿರುವ ಹನಮಂತಪ್ಪ, ಟ್ರ್ಯಾಕ್ಟರ್ ಚಾಲಿತ ಸ್ಪ್ರೇಯರ್, ಬೈಕ್ ಚಾಲಿತ ಟ್ರ್ಯಾಲಿ ಸೇರಿ ಅನೇಕ ಸಣ್ಣಪುಟ್ಟ ಕೃಷಿ ಪರಿಕರ ಯಂತ್ರೋಪಕರಣಗಳನ್ನು ಹನಮಂತಪ್ಪ ಸ್ವತಃ ತಯಾರಿಸಿಕೊಂಡಿದ್ದಾರೆ. ಗೋ ಉತ್ಪನ್ನಗಳಾದ ದಂತ ಮಂಜನ್, ವಿಭೂತಿ, ಧೂಪ, ಸೋಪು, ತುಪ್ಪ ಇತ್ಯಾದಿ ಸಿದ್ಧಪಡಿಸಿ ಬಳಸುವ ಜತೆಗೆ ಹೆಚ್ಚಿನದನ್ನು ಮಾರಾಟ ಮಾಡುತ್ತಿದ್ದಾರೆ. ಎರೆಹುಳು ಗೊಬ್ಬರಕ್ಕೆ ಬೇವಿನ ಹಿಂಡಿ ಮಿಶ್ರಣದೊಂದಿಗೆ ಮೌಲ್ಯವರ್ಧಿತ ಗೊಬ್ಬರವಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ.

    ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನ: ಸಾವಯವ ಯುವ ಕೃಷಿಕ ಹನಮಂತಪ್ಪ ಜಿ ಚಿಂಚಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಧಾರವಾಡದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಸೆ. 18ರಂದು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಹನಮಂತಪ್ಪ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    ಭೂಮಿತಾಯಿ ಕೂಡ ಆಡಿದ್ರ ಕೇಡಿಲ್ಲ ಎಂಬ ಹಿರಿಯರ ಮಾತನ್ನು ಬಲವಾಗಿ ನಂಬಿದ್ದೇನೆ. ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ವೆಚ್ಚ ಬಹಳಷ್ಟು ಕಡಿಮೆ ಮಾಡಿಕೊಂಡಿದ್ದೇನೆ. ಮಣ್ಣಿನ ಫಲವತ್ತತೆಗೆ ಸಾವಯವ ಗೊಬ್ಬರ ಬಳಸಿದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಮನೆಯವರೆಲ್ಲ ಕಾಯಾ, ವಾಚಾ, ಮನಃಪೂರ್ವಕವಾಗಿ ಸಂಪೂರ್ಣ ಕೃಷಿಯಲ್ಲೇ ತೊಡಗಿಸಿಕೊಂಡಿದ್ದರಿಂದ ಮತ್ತು ಕೃಷಿ ಇಲಾಖೆ, ಅಧಿಕಾರಿಗಳ ಸಲಹೆ-ಸಹಕಾರವೂ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ.

    | ಹನಮಂತಪ್ಪ ಚಿಂಚಲಿ, ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ

    ಹನಮಂತಪ್ಪ ಚಿಂಚಲಿ ಅವರು ಸಂಪೂರ್ಣ ಸಾಯುವ ಕೃಷಿ ಅಳವಡಿಸಿಕೊಂಡು ಅತ್ಯಂತ ಆಸಕ್ತಿಯಿಂದ ಕೃಷಿಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಕಳೆದ ವರ್ಷ ತುಕ್ಕು ರೋಗದ ಹಾವಳಿ ನಡುವೆಯೂ ಮೆಣಸಿನಕಾಯಿ ಉತ್ತಮವಾಗಿ ಬೆಳೆದಿದ್ದರು. ಅತಿವೃಷ್ಟಿ-ಅನಾವೃಷ್ಟಿ ನಡುವೆಯೂ ತಕ್ಕಮಟ್ಟಿಗಾದರೂ ಬೆಳೆ ತೆಗೆದು ಕೃಷಿಯಲ್ಲಿ ಲಾಭ ಮಾಡಿಕೊಳ್ಳುತ್ತಾರೆ. ತಮಗೆ ಬೇಕಾದ ಕೃಷಿ ಪರಿಕರಗಳನ್ನು ಸ್ವತಃ ತಾವೇ ಸಿದ್ಧಪಡಿಸಿಕೊಂಡು, ಬದಲಾಯಿಸಿಕೊಂಡು ಬಳಸುತ್ತಾರೆ. ಬಹುಬೆಳೆ ಪದ್ಧತಿ, ಮಿಶ್ರ ಕೃಷಿ ಅಳವಡಿಸಿಕೊಂಡು ಮಾದರಿಯಾಗಿದ್ದಾರೆ.

    | ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ನಿರ್ದೇಶಕ ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts