More

    ವ್ಯಾಪಾರದಲ್ಲಿ ಬುದ್ಧಿವಂತಿಕೆ ಇರಲಿ, ಮೋಸ ಬೇಡ

    ವ್ಯಾಪಾರದಲ್ಲಿ ಬುದ್ಧಿವಂತಿಕೆ ಇರಲಿ, ಮೋಸ ಬೇಡವ್ಯಾಪಾರದಲ್ಲಿ ಬುದ್ಧಿವಂತಿಕೆ ಇರಬೇಕು ಆದರೆ ಅದರಲ್ಲಿ ಮೋಸ ಇರಬಾರದು. ಬುದ್ಧಿವಂತಿಕೆಗೂ ಮೋಸಕ್ಕೂ ಇರೋದು ಕೂದಲೆಳೆಯ ವ್ಯತ್ಯಾಸ ಅಷ್ಟೆ. ಇದಕ್ಕೆ ಒಂದು ಸ್ವಾರಸ್ಯಕರವಾದ ಕಥೆಯನ್ನು ಹೇಳುತ್ತೇನೆ ಕೇಳಿ, ರಾಮು ಕುದುರೆ ಮಾರಲು ಹೊರಟ. ಅಂಗಡಿಯಲ್ಲಿ ಕುಳಿತಿದ್ದ ಮಾರ್ವಾಡಿ ವ್ಯಾಪಾರಿ ಕ್ರಯ ಕೇಳಿದಾಗ ಹತ್ತು ಸಾವಿರ ರೂಪಾಯಿ ಅಂದ. ಆತ ಐದು ಸಾವಿರ ರೂಪಾಯಿಗೆ ಕೇಳಿದ. ಇದಕ್ಕೊಪ್ಪದ ರಾಮು ಕುದುರೆಯನ್ನು ಮನೆಗೆ ವಾಪಸು ತಂದ. ಅವನ ದುರಾದೃಷ್ಟಕ್ಕೆ ಬೆಳಗ್ಗೆ ಆ ಕುದುರೆ ಸತ್ತು ಬಿದ್ದಿತ್ತು. ಅವನಿಗೆ ಒಂದು ಉಪಾಯ ಹೊಳೆಯಿತು.

    ಸೀದಾ ಆ ವ್ಯಾಪಾರಿ ಹತ್ತಿರ ಹೋಗಿ ಐದು ಸಾವಿರ ರೂಪಾಯಿಗೆ ಕುದುರೆ ಕೊಡುವುದಾಗಿ ಒಪ್ಪಿಕೊಂಡು ಆತನಿಂದ ಹಣ ತಗೊಂಡು, ‘ನನ್ನ ಮನೆಯಲ್ಲಿ ಕುದುರೆ ಯಾವಾಗ್ಲೂ ಬಿದ್ದಿರುತ್ತೆ. ಯಾವಾಗ ಬೇಕಾದ್ರೂ ಬಂದು ತೆಗೆದುಕೊಂಡು ಹೋಗಿ’ ಅಂತ ಹೇಳಿ ಊರನ್ನೇ ಬಿಟ್ಟು ಓಡಿಹೋದ. ಸಂಜೆ ಆತ ಮನೆಗೆ ಹೋದಾಗ ಕುದುರೆ ಸತ್ತುಬಿದ್ದಿತ್ತು. ಒಂದು ತಿಂಗಳ ನಂತರ ರಾಮುಗೆ ಹೇಗೋ ಹಣ ಒಟ್ಟಾಯಿತು. ಸರಿ ಮಾರ್ವಾಡಿಯ ಹಣ ಹಿಂದಿರುಗಿಸಿ ಊರಿನಲ್ಲೇ ಏನಾದರೂ ವ್ಯಾಪಾರ ಮಾಡೋಣವೆಂದು ಹಿಂದಿರುಗಿದ. ರಾಮು ಮಾರ್ವಾಡಿ ಬಳಿ ಹೋದ. ತಾನು ಮಾಡಿದ ಕೆಲಸಕ್ಕೆ ಗ್ರಹಚಾರ ಬಿಡಿಸುತ್ತಾನೆ ಎಂದುಕೊಂಡ. ಅವನ ಐದು ಸಾವಿರ ರೂಪಾಯಿ ವಾಪಸು ಕೊಡಲು ಬಂದವನಂತೆ ನೋಟನ್ನು ಜೇಬಲ್ಲಿ ಕಾಣುವಂತೆ ಇಟ್ಟುಕೊಂಡಿದ್ದ.

    ಇವನನ್ನು ನೋಡಿದ ವ್ಯಾಪಾರಿ ನಗುತ್ತಲೇ ಸ್ವಾಗತಿಸಿದ. ಕೊನೆಗೆ ಕುತೂಹಲ ತಡೆಯಲಾರದೆ ರಾಮುನೇ, ‘ಕುದುರೆ ಸತ್ತಿತ್ತಲ್ಲ, ಏನು ಮಾಡಿದಿ?’ ಅಂತ ಕೇಳಿದ. ಆತ, ‘ಮಾರಿದೆ’ ಎಂದ. ‘ಸತ್ತ ಕುದುರೆ ಹೇಗೆ ಮಾರಿದೆ’ ಅಂತ ರಾಮು ಕೇಳಿದ. ಅದಕ್ಕೆ ಮಾರ್ವಾಡಿ ‘ಅದು ಸತ್ತಿದ್ದು ನನಗೂ ನಿನಗೂ ಮಾತ್ರ ಗೊತ್ತಿತ್ತು, ಉಳಿದವರಿಗೇನು ಗೊತ್ತಿತ್ತು? ಒಂದು ಲಾಟರಿ ಏರ್ಪಾಡು ಮಾಡಿ ಒಂದು ಟಿಕೆಟಿಗೆ ಒಂದು ರೂಪಾಯಿ, ಗೆದ್ದವರಿಗೆ ಕುದುರೆ ಬಹುಮಾನ ಅಂತ ಪ್ರಚಾರ ಮಾಡಿದೆ. ಇದರಿಂದ ಸಾವಿರಾರು ಟಿಕೇಟು ಮಾರಿಹೋಯಿತು. ಗೆದ್ದವನಿಗೆ ಕುದುರೆಯನ್ನು ತೆಗೆದುಕೊಂಡು ಹೋಗುವಂತೆ ಹೇಳಿದೆ. ಆತ ಸತ್ತ ಕುದುರೆ ನೋಡಿ, ಮೋಸ ಹೋದೆನೆಂದು ಅಳಲಾರಂಭಿಸಿದ. ಅದಕ್ಕೆ ನಿನ್ನ ಹಣ ಹಿಂದಿರುಗಿಸುತ್ತೇನೆ ಎಂದಾಗ ಸಮಾಧಾನ ಪಟ್ಟ. ಅವನ ಟಿಕೆಟಿನ ಒಂದು ರೂಪಾಯಿಯನ್ನು ಅವನಿಗೇ ವಾಪಾಸು ಕೊಟ್ಟೆ ಅಷ್ಟೇ’ ಎಂದ.

    ಈಗ ನೀವೇ ಹೇಳಿ, ರಾಮು ಮಾಡಿದ್ದು ಮೋಸಾನಾ? ಇಲ್ಲ ವ್ಯಾಪಾರಿ ಮಾಡಿದ್ದು ಮೋಸಾನಾ? ಇದರಲ್ಲಿನ ತಪು್ಪ-ಒಪು್ಪಗಳ ವಿವೇಚನೆ ನಿಮಗೇ ಬಿಟ್ಟಿದ್ದು. ಈಗ ನನ್ನ ಸ್ನೇಹಿತನೊಬ್ಬನ ನಿಜವಾದ ಕಥೆ ಹೇಳುವೆ ಕೇಳಿ. ಅವರೀಗ ಇಲ್ಲ. ಆದರೂ ಅವರ ನೆನಪು ಆಗಾಗ ಆಗುತ್ತಿರುತ್ತದೆ. ಸೀರಿಯಲ್​ನಲ್ಲಿ ನಟಿಸಬೇಕೆಂಬ ನನ್ನ ಆಸೆ ಅವರಿಂದ ಈಡೇರಿತು. ‘ಈಶ್ವರ ಅಲ್ಲಾ ನೀನೇ ಎಲ್ಲಾ’ ಎಂಬ ಸೀರಿಯಲ್​ಗೆ ಮುಖ್ಯಪಾತ್ರವಾದ ಗುರುಗೋವಿಂದ ಭಟ್ಟರ ಪಾತ್ರಕ್ಕೆ ನಿರ್ದೇಶಕ ರೇಣುಕಾ ಶರ್ಮ ಹುಡುಕಾಟ ನಡೆಸುತ್ತಿದ್ದಾಗ ನನ್ನನ್ನು ಶಿಫಾರಸು ಮಾಡಿದ್ದು ಇವರೇ. ಅಷ್ಟೇನೂ ವಿದ್ಯೆ, ಸಂಪನ್ಮೂಲಗಳು, ಉನ್ನತ ಜನರ ಸಂಪರ್ಕ ಇವೇನೂ ಇಲ್ಲದೆ ತುಂಬ ಸಣ್ಣ ರೀತಿಯಲ್ಲಿ ಕೆಲಸವನ್ನಾರಂಭಿಸಿ ರಾಜ್ಯ ಚಲನಚಿತ್ರೋದ್ಯಮದ ಸಂಪರ್ಕಾಧಿಕಾರಿಯಾಗಿ ಪ್ರಥಮ ಸ್ಥಾನದಲ್ಲಿದ್ದ ದಿ.ಡಿ.ವಿ.ಸುಧೀಂದ್ರ ಅವರು.

    ಅವರು ಪ್ರಖ್ಯಾತ ಹರಿಕತೆ ದಾಸರೊಬ್ಬರ ಮಗ. ಆದರೆ ಆ ಕಲೆಯನ್ನು ರೂಢಿಸಿಕೊಂಡಿರದಿದ್ದುದರಿಂದ ಜೀವನ ನಿರ್ವಹಣೆಗೆ ಏನಾದರೊಂದು ಉದ್ಯೋಗ ಅರಸಲೇಬೇಕಿತ್ತು. ಒಂದು ಕಡೆ ಹೋಗಿ ಕೆಲಸ ಕೇಳಿದಾಗ, ‘ಇಲ್ಲಿ ಕಸ ಗುಡಿಸುವ ಕೆಲಸವಲ್ಲದೆ ಬೇರೇನೂ ಇಲ್ಲ’ ಎಂದು ತಾತ್ಸಾರವಾಗಿ ಹೇಳಿದರು. ಅವರು ಮರುಮಾತಿಲ್ಲದೆ ಅಲ್ಲಿದ್ದ ಕಸಪೊರಕೆಯೊಂದನ್ನು ತೆಗೆದುಕೊಂಡು ಸ್ವಚ್ಛವಾಗಿ ಕಸ ಗುಡಿಸಿ ತಾನು ಅದನ್ನೂ ಮಾಡಬಲ್ಲೆ ಎಂದು ತೋರಿಸಿಕೊಟ್ಟು, ಅದೇ ಕಚೇರಿಯಲ್ಲಿ ಸಹಾಯಕನ ಕೆಲಸ ಗಿಟ್ಟಿಸಿದರು. ಅದಾದ ಕೆಲವು ದಿನಗಳ ನಂತರ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋಗಿ ಒಳಗೆ ಸಿನಿಮಾ ತಾರೆಯರ ಸಂದರ್ಶನ ಮಾಡಿ ಆಗ ಪ್ರಕಟವಾಗುತ್ತಿದ್ದ ‘ಲಾವಣ್ಯ’ ವಾರಪತ್ರಿಕೆಗೆ ಲೇಖನ ಬರೆಯಲು ಉದ್ದೇಶಿಸಿದರು. ಹೊರಗಿದ್ದ ಕಾವಲುಗಾರ ಅವರನ್ನು ಒಳಗೇ ಬಿಡಲಿಲ್ಲ. ಸರಿ, ಆತನದೇ ಒಂದು ಸಂದರ್ಶನ ಮಾಡಿದ ಸುಧೀಂದ್ರ ಅದನ್ನು ಪ್ರಕಟಣೆಗೆ ಕಳುಹಿಸಿದರು. ಅದು ಪ್ರಕಟವಾದ ನಂತರ ಅವರು ಮತ್ತೆ ಸ್ಟುಡಿಯೋಗೆ ಹೋದಾಗ ಕಾವಲುಗಾರ ಸೆಲ್ಯೂಟ್ ಮಾಡಿ ಒಳಗೆ ಬಿಟ್ಟ . ಹೀಗೆ ಸುಧೀಂದ್ರ ತನ್ನ ಸಮಯಪ್ರಜ್ಞೆ, ಪ್ರಸಂಗಾವಧಾನಗಳಿಂದ ತೀರಾ ಸಾಮಾನ್ಯ ಸ್ಥಾನದಿಂದ ಏಕಪ್ರಕಾರವಾಗಿ ಉನ್ನತ ಸ್ಥಾನಕ್ಕೆ ಬಂದವರು.

    ಇದೇ ರೀತಿ ಗೆಲುವನ್ನು ಸಾಧಿಸಿದ ಇನ್ನೊಬ್ಬರ ಬಗ್ಗೆ ಹೇಳುತ್ತೇನೆ. ಇವತ್ತು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವಂಥ ನಿರ್ವಪಕ ರಾಮು ಅವರು ಓದಿರುವುದು ಜಸ್ಟ್ ಎಸ್ಸೆಸ್ಸೆಲ್ಸಿ! ಹನ್ನೆರಡು ವರ್ಷಗಳ ಹಿಂದೆ ಇದೇ ರಾಮು, ಸೈಕಲ್ ಮೇಲೆ ಸಿನಿಮಾದ ರೀಲುಗಳ ಡಬ್ಬ ಇಟ್ಟುಕೊಂಡು ಗಾಂಧಿನಗರದಲ್ಲಿ ಅಡ್ಡಾಡುತ್ತಿದ್ದರು. ಈತನಿಗೆ ಕೆಲಸದಲ್ಲಿ ಉತ್ಸಾಹವಿತ್ತು. ಶ್ರದ್ಧೆಯೂ ಇತ್ತು. ದೊಡ್ಡ ಎತ್ತರಕ್ಕೆ ಬೆಳೆಯಬೇಕೆಂಬ ಆಸೆಯೂ ಇತ್ತು. ಆ ಸಂದರ್ಭದಲ್ಲೇ ರಘುವೀರ್ ನಟಿಸಿದ್ದ, ಅದೇ ಮೊದಲ ಬಾರಿಗೆ ಎಸ್.ನಾರಾಯಣ್ ನಿರ್ದೇಶಿಸಿದ ‘ಚೈತ್ರದ ಪ್ರೇಮಾಂಜಲಿ’ ಸಿನಿಮಾದ ಬಿಡುಗಡೆಯ ಹಕ್ಕು ರಾಮುಗೆ ಸಿಕ್ಕಿತು. ಆಗ ಶುರುವಾದದ್ದೇ ರಾಮು ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ.

    ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಸಿನಿಮಾ ಹಿಟ್ ಆಯಿತು. ಅಷ್ಟೆ, ರಾಮು ಹಿಂತಿರುಗಿ ನೋಡಲೇ ಇಲ್ಲ. ಆಮೇಲೆ ಹಂಚಿಕೆಯೊಂದಿಗೇ ಚಿತ್ರ ನಿರ್ವಣಕ್ಕೂ ಮುಂದಾದರು. ಒಂದೊಂದು ಸಿನಿಮಾಕ್ಕೂ ಲಕ್ಷವಲ್ಲ, ಕೋಟಿ ರೂಪಾಯಿ ಸುರಿದರು- ಹೀರೋ ಹೆಸರಿನಿಂದಲ್ಲ, ಹೀರೋಯಿನ್ ಚೆಲುವಿನಿಂದಲೂ ಅಲ್ಲ, ‘ಕೋಟಿ ರಾಮು’ ಎಂಬ ಹೆಸರಿನಿಂದಲೇ ಒಂದು ಸಿನಿಮಾ ಓಡುತ್ತಿತ್ತು!

    ಸಾಮಾನ್ಯವಾಗಿ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಬಾಳಿನಲ್ಲಿ ಹೀಗೆ ಪ್ರಚಂಡ ಅವಕಾಶಗಳು ಸದಾ ಕಾಯುತ್ತಲೇ ಇರುತ್ತವೆ. ಅಷ್ಟೇಕೆ, ತೀರ ಎಳೆತನದಲ್ಲೇ ಕಣ್ಣು, ಕಿವಿ ಎರಡನ್ನೂ ಕಳೆದುಕೊಂಡ ಹೆಲೆನ್ ಕೆಲ್ಲರ್ ಸುಪ್ರಸಿದ್ಧ ಸಾಹಿತಿಯಾದುದು ಅಲ್ಲದೆ, ತನ್ನ ಸುತ್ತಲಿನ ಕಂಪನದಿಂದಲೇ ಒಳ್ಳೆಯ ಸಂಗೀತವನ್ನೂ ಗುರುತಿಸಬಲ್ಲ ಅಸಾಧಾರಣ ಶಕ್ತಿ ಪಡೆದುಕೊಂಡಳು. ಇಲ್ಲೆಲ್ಲ ಮುಖ್ಯವಾಗಿ ಬೇಕಾದುದು ಸಂಕಲ್ಪಶಕ್ತಿ ಅಲ್ಲದೆ ಇನ್ನೇನೂ ಅಲ್ಲ. ಪಾಶ್ಚಾತ್ಯ ಸಂಗೀತ ಪ್ರಪಂಚದಲ್ಲಿ ಅಜರಾಮರನಾದ ಬಿಥೋವನ್ ವಾಸ್ತವವಾಗಿ ಕಿವುಡನಾಗಿದ್ದ. ಚಿತ್ರಕಾರ ಮೈಖೆಲ್ ಏಂಜೆಲೋ ಇಳಿವಯಸ್ಸಿನಲ್ಲಿ ಮಂದದೃಷ್ಟಿಯವನಾಗಿದ್ದಾಗಲೇ ಯುರೋಪಿನ ಕ್ರೖೆಸ್ತ ದೇವಾಲಯವೊಂದರ ಛಾವಣಿಯ ಕೆಳಗೆ ಕೂತು ಅಸಾಧಾರಣ ಚಿತ್ರವೊಂದನ್ನು ರಚಿಸಿದ.

    ನಮ್ಮಲ್ಲಿ ಬಹಳ ಜನ ನಮ್ಮ ದೇಶದಲ್ಲಿ ಉತ್ತಮ ಅವಕಾಶಗಳಿಲ್ಲ ಎನ್ನುತ್ತ ವಿದೇಶಗಳಲ್ಲಿ ನೆಲೆಸುವುದನ್ನು ನೀವು ಕಂಡಿರುತ್ತೀರಲ್ಲ. ಆದರೆ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಸರ್ ಸಿ.ವಿ.ರಾಮನ್, ಗಾಂಧೀಜಿ, ಸರ್ ಎಂ.ವಿಶ್ವೇಶ್ವರಯ್ಯ, ‘ಇನ್ಪೋಸಿಸ್’ ನಾರಾಯಣಮೂರ್ತಿ ಇವರುಗಳಿಗೆ ಯಾವ ಭಾರತವಿದೆಯೋ ಅದೇ ಭಾರತ ನಿಮಗೂ ಇರುವುದು. ಅದರ ಪೂರ್ಣೇಪಯೋಗವನ್ನು ನೀವು ಪಡೆಯದಿದ್ದಲ್ಲಿ ಅದು ಯಾರ ತಪು್ಪ? ಹಾಗೇ ಕೋಟ್ಯಧಿಪತಿಯಾಗಲೂ ಸತತವಾಗಿ ಪ್ರಯತ್ನಿಸಬೇಕು. ಆಗೊಲ್ಲ ಎಂದು ಕುಳಿತರೆ ಆಗುವುದೇ ಇಲ್ಲ.

    ನಿಮಗೆ ಖೀರುಪ್ರಿಯನ ಕತೆ ಗೊತ್ತೆ? ಆತನಿಗೆ ಹಾಲುಖೀರು ಎಂದರೆ ಪರಮಪ್ರಿಯವಂತೆ. ಒಮ್ಮೆ ಈತನ ಕೈಯಲ್ಲಿ ಏನಾದರೂ ಮಾಡಿ ಖೀರು ಬೇಡ ಎನ್ನುವಂತೆ ಮಾಡಬೇಕು ಎಂದು ನಿರ್ಧರಿಸಿದ ಈತನ ಮಿತ್ರರು ಕಂಠಪೂರ್ತಿ, ಇನ್ನು ಏನೂ ತಿನ್ನಲಾಗಲೀ ಕುಡಿಯಲಾಗಲೀ ಸಾಧ್ಯವಿಲ್ಲ ಎನಿಸುವಷ್ಟು ತಿನ್ನಿಸಿ, ‘ಖೀರು ಬೇಕೆ?’ ಎಂದು ಕೇಳಿದರಂತೆ. ಈತ ಅವರಿಗೇ ಅಚ್ಚರಿಯಾಗುವಂತೆ, ‘ಓಹೋ’ ಎಂದು, ಒಂದಿಡೀ ಲೋಟ ಖೀರು ಕುಡಿದನಂತೆ. ದಿಗ್ಭ್ರಾಂತರಾಗಿ ನೋಡುತ್ತಿದ್ದ ಮಿತ್ರರಿಗೆ, ‘ಖೀರು ಎಂದರೆ ನಂಜನಗೂಡು ಜಾತ್ರೆಯಲ್ಲಿ ಮಹಾರಾಜರು ಬಂದಂತೆ’ ಎಂದನಂತೆ. ಈ ಜೋಕ್ ಗೊತ್ತಾಗಬೇಕಾದರೆ ನೀವು ನಂಜನಗೂಡು ಶ್ರೀಕಂಠೇಶ್ವರನ ದೊಡ್ಡಜಾತ್ರೆಯನ್ನು ನೋಡಬೇಕು. ಅಲ್ಲಿ ಒಂದು ನೊಣಕ್ಕೂ ಜಾಗವಿಲ್ಲದಂತೆ ತೇರಿನ ಸುತ್ತ ಜನ ಗಿಜಿಗಿಜಿಯೆಂದು ತುಂಬಿರುತ್ತಾರೆ. ಆದರೆ ಸಾಂಪ್ರದಾಯಿಕವಾಗಿ ತೇರನ್ನು ಎಳೆಯಲು ಮಹಾರಾಜರು ಬರುತ್ತಿದ್ದ ಹಾಗೆಯೇ ಅದ್ಹೇಗೋ ಜನ ದಾರಿ ಬಿಟ್ಟುಕೊಡುತ್ತಾರೆ. ಹಾಗೆಯೇ, ನೀವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಲ್ಲಿರಿ. ಮನಸ್ಸಿರಬೇಕು ಅಷ್ಟೇ.

    (ಲೇಖಕರು ಜಾದೂಗಾರರು ಮತ್ತು ಬರಹಗಾರರು )

    ಪದ್ಮಪುರಸ್ಕಾರ 2021 ಆನ್​ಲೈನ್ ಅರ್ಜಿ ಸಲ್ಲಿಕೆಗೆ ಸೆ.15 ರ ತನಕ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts