More

    ಗ್ರಾಮಗಳಲ್ಲಿ ಹಾಲ್ಟಿಂಗ್ ಬೀಟ್ ವ್ಯವಸ್ಥೆ

    ಶಿರಸಿ: ಉಪವಿಭಾಗ ವ್ಯಾಪ್ತಿಯಲ್ಲಿ ಹಾಲಿ ಇರುವ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಲು ಯೋಚಿಸಲಾಗಿದೆ. ಗ್ರಾಮಗಳಲ್ಲಿ ಪೊಲೀಸರ ಹಾಲ್ಟಿಂಗ್ ಬೀಟ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಸ್​ಪಿ ರವಿ ನಾಯ್ಕ ಹೇಳಿದರು.

    ನಗರದ ಡಿಎಸ್​ಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಈಗಿರುವ ಬೀಟ್ ವ್ಯವಸ್ಥೆ ಬದಲಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ವಹಿಸಲಾಗಿದೆ. ಪೊಲೀಸ್ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ಬೀಟ್ ಪರಿಶೀಲಿಸುವ ಜತೆಗೆ ಬೀಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಭೆ ನಡೆಸಿ ಮಾರನೇ ದಿನ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಪೊಲೀಸರ ಈ ಹಾಲ್ಟಿಂಗ್ ಬೀಟ್ ವ್ಯವಸ್ಥೆಯಿಂದ ಜನತೆಗೆ ಅನುಕೂಲವಾಗಲಿದೆ. ಜತೆಗೆ ಅಪರಾಧ ಪ್ರಕರಣ ಕಡಿಮೆ ಮಾಡಲು ಸಹಾಯವಾಗಲಿದೆ ಎಂದರು.

    ಬೀಟ್ ಪೊಲೀಸ್ ಸಿಬ್ಬಂದಿ ಭಾವಚಿತ್ರದ ಜತೆಗೆ ದೂರವಾಣಿ ಸಂಖ್ಯೆ, ಪೊಲೀಸ್ ಠಾಣೆ ನಂಬರ್, ಪಿಎಸ್​ಐ ಮೊಬೈಲ್ ಫೋನ್ ನಂಬರ್ ಒಳಗೊಂಡ ಸ್ಟಿಕರ್​ಗಳನ್ನು ಒಂಟಿ ಮನೆಗಳಿಗೆ ನೀಡುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ರೌಡಿಸಂ ಸಂಪೂರ್ಣ ಮಟ್ಟಹಾಕಲು ಈಗಾಗಲೇ ರೌಡಿ ಶೀಟರ್​ಗಳ ಪರೇಡ್ ಮಾಡಲಾಗಿದೆ. ಕೆಲವು ರೌಡಿಗಳು ಇನ್ನೂ ಹಳೇ ವರಸೆಯಲ್ಲಿದ್ದು, ಅಂಥವರನ್ನೂ ನಿಯಂತ್ರಿಸಲಾಗುವುದು ಎಂದರು.

    ನಗರದ ಬಹುತೇಕ ಕಡೆ ಗಾಂಜಾ ಮಾರಾಟ ಮತ್ತು ಸೇವನೆ ನಡೆದಿದ್ದು, ಇಂಥ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಯಲ್ಲಾಪುರ, ಮುಂಡಗೋಡ ಭಾಗಗಳಲ್ಲಿ ಅರಣ್ಯದೊಳಗೆ ಗಾಂಜಾ ಬೆಳೆಯುವ ಜನರಿದ್ದು, ಅಂಥವರ ವಿರುದ್ಧ ಕ್ರಮಕ್ಕಾಗಿ ಅರಣ್ಯ ಇಲಾಖೆ ಜತೆ ರ್ಚಚಿಸಿ ಸೂಕ್ತ ವ್ಯವಸ್ಥೆಗೆ ಮುಂದಾಗಿದ್ದೇವೆ. ಅಲ್ಲದೆ, ಹಣ ಹಾಕಿ ಜೂಜಾಟ ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

    ಪೊಲೀಸ್ ಇಲಾಖೆ ಸಿಬ್ಬಂದಿ ಜನರ ಕಷ್ಟ, ನೋವುಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ವಾಹನ ನಿಲುಗಡೆ ಸಮಸ್ಯೆ ಬಗೆಹರಿಸಲು ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಎಸ್​ಪಿ ರವಿ ನಾಯ್ಕ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts