More

    ಕೋರ‌್ಲಕುಂಟೆ ಬಳಿಯ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರ ಸಾವು

    ಚಳ್ಳಕೆರೆ(ಚಿತ್ರದುರ್ಗ): ತಾಲೂಕಿನ ಕೊರ‌್ಲಕುಂಟೆ ಗ್ರಾಮದ ಸಮೀಪ ಒಂದು ವಾರದಿಂದ ತುಂಬಿ ಹರಿಯುತ್ತಿದ್ದ ನಶಳ್ಳ(ಹಳ್ಳ)ನೀರಿನಲ್ಲಿ ಸೋಮವಾರ ರಾತ್ರಿ ಇಬ್ಬರು ಯುವಕರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಹನುಮಂತರಾಯ,ಹನುಮಕ್ಕ ಎಂಬುವರ ಮಗ ಎಚ್.ರವಿಕುಮಾರ(35),ಪಾಲಣ್ಣ,ಮಾರಕ್ಕ ಎಂಬುವರ ಮಗ ಪಿ.ಓಬಳೇಶ(34)ಮೃತರೆಂದು ಗುರುತಿಸಲಾಗಿದೆ. ಪರಶುರಾಂಪುರ ದಿಂದ ಸಂಜೆ ಕೊರ‌್ಲಕುಂಟೆ ಗ್ರಾಮಕ್ಕೆ ಬೈಕಿನಲ್ಲಿ ಬರುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.

    ಕೋರ‌್ಲಕುಂಟೆ ಬಳಿಯ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರ ಸಾವು

    ಶೋಧ ಕಾರ್ಯ

    ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ,ಪೊಲೀಸರು ನೀರಲ್ಲಿ ಕಣ್ಮರೆಯಾಗಿದ್ದ ಯುವಕರ ಪತ್ತೆಗೆ ಬೋಟ್ ಬಳಸಿ ಶೋಧ ಕಾರ್ಯ ಆರಂಭಿಸಿದರು. ಮಧ್ಯಾಹ್ನವಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಶೋಧ ತೀವ್ರಗೊಳಿಸಿದ ನಂತರದಲ್ಲಿ ರಸ್ತೆಯಿಂದ ಅಂದಾಜು 20-30 ದೂರದ ದಲ್ಲಿ ಸಿಲುಕಿದ್ದ ಓಬಳೇಶ ಮತ್ತು ರವಿಕುಮಾರ್ ಶವಗಳು ಪತ್ತೆಯಾಗಿವೆ.

    ರಸ್ತೆ ತಡೆ

    ಸೋಮವಾರ ರಾತ್ರಿ ನಡೆದಿರುವ ಘಟನಾ ಸ್ಥಳಕ್ಕೆ ಮಂಗಳವಾರ 10 ಗಂಟೆಯಾದರೂ ಜಿಲ್ಲಾ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಆಗಮಿಸಿ,ಶೋಧ ಕಾರ್ಯ ಪ್ರಾರಂಭಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಪರಶುರಾಂಪುರ ಮತ್ತು ಕಲ್ಯಾಣ ದುರ್ಗ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ನೀರಿನ ಹರಿವು ದೊಡ್ಡ ಮಟ್ಟದಲ್ಲಿದೆ. ಬೋಟ್ ಬಳಕೆಯಿಂದ ಸಾಧ್ಯವೇ ಇಲ್ಲ. ಕೂಡಲೇ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.

    ಗ್ರಾಮಸ್ಥರ ಪಟ್ಟು

    ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಎರಡು ಮೃತ ದೇಹಗಳನ್ನು ಪತ್ತೆ ಹಚ್ಚಿದ ಬಳಿಕ ಅಧಿಕಾರಿಗಳು ಶವಪರೀಕ್ಷೆ ಮಾಡಬೇಕಿದೆ ಎಂದ ಕೂಡಲೇ,ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಪರಶುರಾಂಪುರದಿಂದ ಊರಿಗೆ ಬರುವ ಹೊತ್ತಲ್ಲಿ ನಡೆದಿರುವ ಘಟನೆ ಆಗಿದೆ. ಅಪಾಯ ದ ಮಟ್ಟದಲ್ಲಿ ನೀರು ಹರಿಯುತ್ತಿರುವ ಹಳ್ಳದ ಸಮೀಪ ಯಾವುದೇ ಮುಂಜಾಗ್ರತೆ ಕ್ರಮ ಇಲ್ಲದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
    ಘಟನಾ ಸ್ಥಳಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್,ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮ್‌ದಾಸ್,ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ,ಕಾಂಗ್ರೆಸ್ ಮುಖಂಡ ಮೆಡಿಕಲ್ ಕೇಶವ,ಗ್ರಾಪಂ ಸದಸ್ಯರಾದ ವರಲಕ್ಷ್ಮಮ್ಮ,ಲಕ್ಷ್ಮಿದೇವಿ,ಎಸ್.ಶಿವಣ್ಣ,ಗೋವಿಂದರೆಡ್ಡಿ, ಗ್ರಾಮಸ್ಥರಾದ ಕೆಂಗಪ್ಪ, ಎನ್.ನಾಗರಾಜಪ್ಪ, ಚನ್ನರಾಯಪ್ಪ, ಕೆ.ವಿ.ಪ್ರಸನ್ನ, ಸಿ.ರವಿಕುಮಾರ್, ಚನ್ನಕೇಶವ, ಪಿ.ರಾಮದಾಸ, ಮಹಾಲಿಂಗಪ್ಪ, ಎಂ. ಮಾರಣ್ಣ, ಮುನಿಯಪ್ಪ,ಪಿಎಸ್‌ಐ ಕಾಂತರಾಜ್, ಆರ್‌ಐ ಮೋಹನ್‌ಕುಮಾರ್ ಮತ್ತಿತರರು ಇದ್ದರು.

    ಕ್ರಮಕ್ಕೆ ಸೂಚನೆ

    ಶಾಸಕ ಟಿ. ರಘುಮೂರ್ತಿ ಪತ್ರಿಕೆಯೊಂದಿಗೆ ಮಾತನಾಡಿ,ರಾತ್ರಿ ನಡೆದಿರುವ ಘಟನೆ ತಿಳಿದ ಕೂಡಲೇ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಲು ನಿಲುವಳಿ ಸೂಚನೆಯಲ್ಲಿ ಅವಕಾಶ ಆಗಿರುವ ಕಾರಣ ಸಭೆಯಲ್ಲಿ ಭಾಗವಹಿಸಿದ್ದೇನೆ. ವಿಷಯ ಮಂಡನೆ ಮಾಡಿದ ತಕ್ಷಣವೇ ಘಟನಾ ಸ್ಥಳಕ್ಕೆ ಬರಲಿದ್ದೇನೆ.
    ನ್ಯಾಯಾಲಯಕ್ಕೆ ಹಾಜರಾಗಲು ತಹಸೀಲ್ದಾರ್ ಬೆಂಗಳೂರಿಗೆ ಬಂದಿದ್ದಾರೆ. ಆದ್ದರಿಂದ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿಲ್ಲ.ಎಸಿ ಹೋಗಿದ್ದಾರೆ. ಘಟನೆಯಿಂದ ಬಹಳ ನೋವಾಗಿದೆ.ನೊಂದ ಕುಟುಂಬದವರಿಗೆ ದೇವರು ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ. ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಕೊರ‌್ಲಕುಂಟೆ ಸಮೀಪದ ಹಳ್ಳ ಸೇರಿದಂತೆ 9 ಭಾಗದಲ್ಲಿ ಕಾಜುವೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts