More

    ಹಲಗೇರಿ ರಸ್ತೆಯಲ್ಲಿ ಪ್ರಯಾಣ ದುಸ್ತರ, ಚತುಷ್ಪಥ ದುರಸ್ತಿಗೆ ಅನಾದರ

    ರಾಣೆಬೆನ್ನೂರ: ನಗರದ ಹಲಗೇರಿ ಚತುಷ್ಪಥ ರಸ್ತೆ ಕಾಮಕಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಶಾಸಕ ಪ್ರಕಾಶ ಕೋಳಿವಾಡ ಅವರು ತಿಂಗಳ ಹಿಂದೆಯೇ ಸೂಚಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಇನ್ನೂತನಕ ಕ್ರಮ ಕೈಗೊಂಡಿಲ್ಲ.


    ಚತುಷ್ಪಥ ರಸ್ತೆಯ ಮ್ಯಾನ್‌ಹೋಲ್ ಮುಚ್ಚುವ ಜತೆಗೆ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಶಾಸಕರು ಒಂದು ತಿಂಗಳ ಹಿಂದೆಯೇ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.


    ಆದರೆ, ಶಾಸಕರ ಮಾತಿಗೆ ಕಿಮ್ಮತ್ತು ನೀಡದ ಅಧಿಕಾರಿಗಳು ಈವರೆಗೂ ರಸ್ತೆಯಲ್ಲಿಯ ಮ್ಯಾನ್‌ಹೋಲ್‌ಗಳನ್ನು ಮುಚ್ಚುವ ಕೆಲಸ ಆರಂಭಿಸಿಲ್ಲ. ಅಲ್ಲದೆ, ಅಲ್ಲಲ್ಲಿ ರಸ್ತೆ ವಿಭಜಕ ನಿರ್ಮಾಣ ಸೇರಿ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನೂ ಆರಂಭಿಸಿಲ್ಲ.


    ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ. ಅಲ್ಲದೆ, ನಗರದಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ. ಇದರಿಂದ ವಾಹನಗಳ ಓಡಾಟಕ್ಕೆ ಇನ್ನೂ ಸಮಸ್ಯೆ ತಂದೊಡ್ಡಿದೆ.


    ಕಾಮಗಾರಿಯ ಅವಧಿ ಮುಗಿದು 9 ತಿಂಗಳು ಕಳೆಯುತ್ತ ಬಂದರೂ ರಸ್ತೆ ಮಧ್ಯದಲ್ಲಿರುವ ಮ್ಯಾನ್‌ಹೋಲ್ ಮುಚ್ಚಿಲ್ಲ. ಅಕ್ಕಪಕ್ಕ ಪೇವರ್ಸ್‌ ಅಳವಡಿಕೆ, ರಸ್ತೆ ವಿಭಜಕ ನಿರ್ಮಾಣ, ವಿದ್ಯುತ್ ಕಂಬ ಅಳವಡಿಕೆ ಸೇರಿ ಇತರ ಕಾಮಗಾರಿಗಳು ಬಾಕಿ ಉಳಿದಿವೆ. ಸರ್ಕಾರ ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರೂ. ಖುರ್ಚು ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ.


    ಈ ರೀತಿ ರಸ್ತೆ ನಿರ್ಮಾಣದಿಂದ ಅಕ್ಕಪಕ್ಕದ ನಿವಾಸಿಗಳು, ಪಾದಚಾರಿಗಳು ಹೇಗೆ ಓಡಾಡಬೇಕು? ಹಲಗೇರಿ ರಸ್ತೆಯಲ್ಲಿ ನಿತ್ಯವೂ ಎಪಿಎಂಸಿಗೆ ಬರುವ ಲಾರಿ, ಗೂಡ್ಸ್ ವಾಹನಗಳು ಹಾಗೂ ಬಸ್‌ಗಳ ಸಂಚಾರ ಅಧಿಕವಾಗಿರುತ್ತದೆ. ಇಂತಹ ಸಮಯದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ರಸ್ತೆ ನಿರ್ಮಿಸಬೇಕಾದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿಸಿದರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.


    ಅರ್ಧಕ್ಕೆ ನಿಂತ ಕಾಮಗಾರಿ
    ರಸ್ತೆ ಕಾಮಗಾರಿ ಆರಂಭಿಸಿ ವರ್ಷಗಳೇ ಕಳೆದಿವೆ. ಅಲ್ಲದೆ, ಕಾಮಗಾರಿಯ ಅವಧಿ ಮುಗಿದು 9 ತಿಂಗಳು ಕಳೆಯುತ್ತ ಬಂದಿದ್ದು, ಈವರೆಗೂ ಪೂರ್ಣಗೊಳಿಸಿಲ್ಲ. ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿಯನ್ನು ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಹಳೇ ರಸ್ತೆಯುದ್ದಕ್ಕೂ ಪಾದ ಮುಳುಗುವಂಥ ತಗ್ಗು-ಗುಂಡಿಗಳು ಬಿದ್ದಿವೆ. ಈಗಾಗಲೇ ನಿರ್ಮಿಸಿದ ರಸ್ತೆಯ ಮಧ್ಯೆ ಇರುವ ಚರಂಡಿ ಮ್ಯಾನಹೋಲ್‌ಗಳು ಸಹ ರಸ್ತೆಯಿಂದ ಕೆಳಗೆ ಇಳಿದಿವೆ. ದ್ವಿಚಕ್ರ, ತ್ರಿಚಕ್ರ ವಾಹನದವರು ರಾತ್ರಿ ಸಮಯದಲ್ಲಿ ಕೊಂಚ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.


    ಹಲಗೇರಿ ರಸ್ತೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. 10 ಕೋಟಿ ರೂ.ನಲ್ಲಿ ನಿರ್ಮಿಸುತ್ತಿರುವ ರಸ್ತೆಗೆ ಗಟಾರ ಇಲ್ಲ, ಫುಟ್‌ಪಾತ್ ಇಲ್ಲ. ಇದೀಗ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಒಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕಾಮಗಾರಿ ಬಗ್ಗೆ ಸ್ವತಃ ಜಿಲ್ಲಾಧಿಕಾರಿಯವರು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಮಾಡಿಸಬೇಕು. -ಮಂಜುನಾಥ ಕೆ., ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts