More

    ಚಿಕ್ಕನೇರಳೆಯಲ್ಲಿ ಹನುಮ ಜಯಂತಿ 30ಕ್ಕೆ

    ಸಿ.ಜಿ.ಪುನೀತ್ ಚಪ್ಪರದಹಳ್ಳಿ

    ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿ ಶನಿವಾರ ನಡೆಯುವ ಎರಡನೇ ವರ್ಷದ ಹನುಮ ಜಯಂತಿಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

    ಚಿಕ್ಕನೇರಳೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದಿಂದ ಹನುಮ ಜಯಂತಿಯೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ಇದಕ್ಕಾಗಿ ಸಮಿತಿಯು ವಿಶೇಷ ತಯಾರಿ ಮಾಡಿಕೊಂಡಿದೆ. ಈಗಾಗಲೇ ಡಿ.24ರಿಂದಲೇ ದೇವಸ್ಥಾನದಲ್ಲಿ ಪಂಚಅಗ್ನಿ ಪೂಜೆ ಆರಂಭಗೊಂಡಿದೆ. ಈ ಪೂಜೆಯ ವಿಶೇಷತೆ ಎಂದರೆ ಭಾನುವಾರ ಹಚ್ಚಿದಂತಹ ದೀಪವು ಐದು ದಿನಗಳ ಕಾಲ ಉರಿಯಲಿದೆ. ಇನ್ನು ಡಿ.30ರ ಶನಿವಾರ ಬೆಳಗ್ಗೆಯಿಂದ ದೇವಸ್ಥಾನದ ಒಳಾವರಣದಲ್ಲಿ 21 ಬಾರಿ ಹನುಮಾನ್ ಚಾಲೀಸ್ ಪಠಣ ನಡೆಯಲಿದೆ. ಬಳಿಕ ಹನುಮಂತನ ಅರ್ಚಕರಾದ ನಾರಾಯಣ ಹಡಪಂಗ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಕೈಕಂರ್ಯಗಳು ನಡೆಯಲಿವೆ. ನಂತರ ಬೆಳಗ್ಗೆ 11 ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಬೃಹತ್ ಮೆರವಣಿಗೆ ಚಾಲನೆ ಸಿಗಲಿದ್ದು, ಚಿಕ್ಕನೇರಳೆ, ಸಂತೇಮಾಳ ಸೇರಿದಂತೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸುಮಾರು ರಾತ್ರಿ 8 ಗಂಟೆಯವರೆಗೆ ಮೆರವಣಿಗೆ ಸಾಗಲಿದೆ.

    ಭರದ ಸಿದ್ಧತೆ: ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಗ್ರಾಮದ ಪ್ರಮುಖ ಬೀದಿಗಳು ಮತ್ತು ವೃತ್ತಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ಸಮಿತಿ ವತಿಯಿಂದ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಹನುಮ ಭಕ್ತರ ಅದ್ದೂರಿ ಮೆರವಣಿಗೆ ಬಳಿಕ ಪ್ರಸಾದ ವಿತರಣೆ ಆಯೋಜನೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಒಟ್ಟು ನಾಲ್ಕು ಟ್ರ್ಯಾಕ್ಟರ್‌ನಲ್ಲಿ ಆಂಜನೇಯ ಸ್ವಾಮಿ ಮೂರ್ತಿ, ಅಯೋಧ್ಯ ರಾಮಮಂದಿರ ಸೇರಿದಂತೆ ಇನ್ನಿತರ ಸ್ತಬ್ಧ ಚಿತ್ರಗಳು ಸಾಗಲಿವೆ. ಅಲ್ಲದೆ ಈ ವ್ಯಾಪ್ತಿಯ ಗ್ರಾಮಗಳ ಭಕ್ತರ ಮನೆಯಿಂದ ಒಂದು ಬೊಗಸೆ ಅಕ್ಕಿ ಹಾಗೂ ಹನ್ನೊಂದು ರೂ. ಕಾಣಿಕೆಯನ್ನು ಸಂಗ್ರಹ ಮಾಡಲಾಗಿದ್ದು, ದೇವಸ್ಥಾನದಲ್ಲಿ ಹನುಮ ಜಯಂತಿ ಬಳಿಕ ಪ್ರತಿ ವಾರದ ಶನಿವಾರದಂದು ನಡೆಯುವಂತಹ ಪೂಜೆಯಲ್ಲಿ ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗಕ್ಕೆ ಬಳಕೆ ಮಾಡಕೊಳ್ಳಲಾಗುವುದು.

    ಐತಿಹಾಸಿಕ ಮಹತ್ವ: ಚಿಕ್ಕನೇರಳೆ ಗ್ರಾಮದಲ್ಲಿ ಇರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಆಂಜನೇಯ ಸ್ವಾಮಿ ಈ ಭಾಗದ ಆರಾಧ್ಯ ದೈವ. ಸುಮಾರು 2-3 ತಲೆಮಾರುಗಳಿಂದ ಗ್ರಾಮದಲ್ಲಿ ನೆಲೆಸಿರುವ ಶ್ರೀ ಆಂಜನೇಯ(ವೀರಾಂಜನೇಯ) ಸ್ವಾಮಿ ಮೇಲೆ ಭಕ್ತರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಗ್ರಾಮದ ಪ್ರಮುಖ ದೇವರ ಗುಡಿ ಇದಾಗಿದ್ದು, ಚಿಕ್ಕನೇರಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ರಕ್ಷಣೆ ನೀಡುವ ರಕ್ಷಕನಾಗಿದ್ದಾನೆ.
    ಆಂಜನೇಯ ಸ್ವಾಮಿಗೆ ತಾಲೂಕಿನ ಚಿಕ್ಕನೇರಳೆ, ದೊಡ್ಡನೇರಳೆ, ನೀಲವಾಡಿ, ವಡ್ಡರಹೊಸಹಳ್ಳಿ, ಹಾರನಹಳ್ಳಿ, ಹಸುವಿನಕಾವಲು, ತರೀಕಲ್ಲು ಸೇರಿದಂತೆ ಮೈಸೂರು, ಮಡಿಕೇರಿ, ಹಾಸನ ಜಿಲ್ಲೆಗಳಿಂದಲೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಈ ಪುಣ್ಯಕ್ಷೇತ್ರಕ್ಕೆ ಬಂದು ತಮ್ಮ ಸಮಸ್ಯೆಗಳು ದೂರಾಗಲಿ ಎಂದು ಪ್ರಾರ್ಥಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ, ಕಂಕಣ ಭಾಗ್ಯ ಸೇರಿದಂತೆ ಇನ್ನಿತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ಮಾರುತಿಗೆ ಪೂಜಿಸುತ್ತಾರೆ. ಅಂದುಕೊಂಡತೆ ಆದ ಬಳಿಕ ಹರಕೆ ಒಪ್ಪಿಸುವ ವಾಡಿಕೆ ಇದೆ.

    ಚಿಕ್ಕನೇರಳೆಯಲ್ಲಿ ಈ ಬಾರಿ 2ನೇ ವರ್ಷದ ಅದ್ದೂರಿ ಹನುಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಕಳೆದ ವರ್ಷ ಕೂಡ ಗ್ರಾಮದಲ್ಲಿ ನಡೆದ ಹನುಮ ಜಯಂತಿ ಯಶಸ್ವಿಗೆ ಇಲ್ಲಿನ ಗ್ರಾಮಸ್ಥರು ಹಾಗೂ ಮುಸ್ಲಿಂರು ಸಹಕಾರ ನೀಡಿದರು. ಈ ಬಾರಿಯೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ವಾಗತ ಕೋರುವ ಫ್ಲೇಕ್ಸ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ದೇವಸ್ಥಾನ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಿಗೆ ಅಲಂಕಾರ ಮಾಡಲಾಗಿದೆ. ಈ ಬಾರಿಯ ಹನುಮ ಜಯಂತಿ ಬೃಹತ್ ಮೆರವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಎಲ್ಲಾ ಭಕ್ತರು ಆಗಮಿಸಿ ಮಾರುತಿಯ ಭಕ್ತಿಗೆ ಪಾತ್ರರಾಗಬೇಕು.
    * ರಘು, ಸಂಚಾಲಕ, ಆಂಜನೇಯಸ್ವಾಮಿ ಸೇವಾ ಸಮಿತಿ

    ಕೋಟ್
    27ಬಿಟಿಪು01: ಚಿಕ್ಕನೇರಳೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
    27ಬಿಟಿಪಿ02; ದೇವಸ್ಥಾನದ ಗರ್ಭಗುಡಿಯಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿ ಮೂರ್ತಿ.
    27ಬಿಟಿಪಿ03; ಸಿ.ಪಿ ರಘು ಸಂಚಾಲಕ, ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ, ಚಿಕ್ಕನೇರಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts