More

    ಅಭಿವೃದ್ಧಿಯೇ ನನ್ನ ಧ್ಯೇಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿಕೆ

    ಲಕ್ಕೂರು: ಮುಂದಿನ 3 ವರ್ಷಗಳ ಅವಧಿಯಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

    ಲಕ್ಕೂರು ಬಾಲಾಜಿ ವೃತ್ತದಲ್ಲಿ ಜಿಪಂ, ತಾಪಂ ಹಾಗೂ ಲಕ್ಕೂರು ಗ್ರಾಪಂ ಸಹಯೋಗದಲ್ಲಿ ನಿರ್ಮಿಸಿರುವ ಗ್ರಾಪಂ ಕಚೇರಿ ಹಾಗೂ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೆ 2 ವರ್ಷದ ಆಡಳಿತದಲ್ಲಿ 1 ವರ್ಷ ರಾಜಕೀಯ ವಿದ್ಯಮಾನಗಳಿಂದ ಕಳೆದು ಹೋಗಿದೆ. 1 ವರ್ಷದ ಯಡಿಯೂರಪ್ಪ ಸರ್ಕಾರದಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದಿರುವ 3 ವರ್ಷಗಳಲ್ಲಿ ಜಿಲ್ಲೆಗೆ ಸರ್ಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

    ನನ್ನಲ್ಲಿ ಪಕ್ಷಭೇದವಿಲ್ಲ. ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ. ಇತಿಹಾಸ ಪ್ರಸಿದ್ಧ ದೇವಾಲಯ ಹೊಂದಿರುವ ಹೋಬಳಿ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

    ಕರೊನಾ ಸೋಂಕಿಗೆ ಯಾರೂ ಭಯಪಡಬೇಡಿ, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಪರಸ್ಪರ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬೇಕು ಎಂದರು.

    ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಶಾಸಕನಾಗಿ ಲಕ್ಕೂರು ಗ್ರಾಪಂಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ನಾಗೇಶ್ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜಕೀಯವಾಗಿ ಉತ್ತಮ ಸೇವೆ ಸಲ್ಲಿಸಿದರೆ ನಮ್ಮ ಕೆಲಸ ಶಾಶ್ವತವಾಗಿ ಉಳಿಯುತ್ತದೆ ಎಂದರು.

    ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಕ್ನಷ್ಣಪ್ಪ, ಗ್ರಾಪಂ ಅಧ್ಯಕ್ಷೆ ಸುಬ್ಬಮ್ಮಕ್ನಷ್ಣಪ್ಪ, ಉಪಾಧ್ಯಕ್ಷ ವಿ.ರಾಜಪ್ಪ, ತಾಪಂ ಸದಸ್ಯ ಎಂ.ರವಿಕುಮಾರ್, ಗ್ರಾಪಂ ಸದಸ್ಯರಾದ ಶ್ರೀಧರ್, ಎ.ಸುರೇಶ್ ರೆಡ್ಡಿ, ಶಂಕರಪ್ಪ, ವಿ.ಶೋಭಾ, ಗೌರಮ್ಮ, ಶಾರದಮ್ಮ, ಸಿ.ವೆಂಕಟೇಶ್, ಪ್ರಕಾಶ್, ರತ್ನಮ್ಮ ವೆಂಕಟೇಶ್, ಪಿಡಿಒ ಎಸ್.ಲೋಕೇಶ್, ಕಾರ್ಯದರ್ಶಿ ದಯಾನಂದ ರೆಡ್ಡಿ ಇದ್ದರು.

    ಸಚಿವರ ವಿರುದ್ಧ ಅಸಮಾಧಾನ: ಲಕ್ಕೂರು: ಉದ್ಘಾಟನಾ ಕಾರ್ಯಕ್ರಮಕ್ಕೆ ಕೆಲ ನಿಮಿಷ ತಡವಾಗಿ ಬರುವ ವೇಳೆಗೆ ಸಚಿವ ಎಚ್.ನಾಗೇಶ್ ಕಟ್ಟಡ ಉದ್ಘಾಟನೆ ಮಾಡಿರುವುದಕ್ಕೆ ಶಾಸಕ ಕೆ.ವೈ. ನಂಜೇಗೌಡ ಅಸಮಾದಾನ ವ್ಯಕ್ತಪಡಿಸಿದರು.

    ನಿಗದಿತ ಸಮಯಕ್ಕೆ ಆಗಮಿಸಿದ ಸಚಿವ ನಾಗೇಶ್ ಕಚೇರಿ ಉದ್ಘಾಟಿಸಿ ಕಚೇರಿಯೊಳಗೆ ಪೂಜೆ ಸಲ್ಲಿಸುವ ವೇಳೆ ಆಗಮಿಸಿದ ನಂಜೇಗೌಡ, ‘ನಾನು ಈ ಕ್ಷೇತ್ರದ ಶಾಸಕ. ಗ್ರಾಮಕ್ಕೆ ಆಗಮಿಸಿ ಸಾಕಷ್ಟು ಸಮಯದಿಂದ ಕಾಯುತ್ತಿದ್ದೇನೆ. ಕಾರ್ಯಕ್ರಮ ಆರಂಭವಾಗುವ ಮೊದಲು ನನ್ನನ್ನು ಇಲ್ಲಿಗೆ ಕರೆಸಿಕೊಳ್ಳಬೇಕಿತ್ತು. ನೀವು ಇದೇ ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದ್ದೀರಿ, ನಿಮನ್ನು ನಾನು ಗೌರವದಿಂದ ಬರಮಾಡಿಕೊಳ್ಳಬೇಕಿತ್ತು. ಇಂತಹ ವರ್ತನೆ ಬಿಡಿ’ ಎಂದು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಶಾಸಕರ ಮಾತಿಗೆ ಉತ್ತರಿಸಿದ ಸಚಿವ ನಾಗೇಶ್, ನಾನು ನಿಮ್ಮ ರೀತಿಯೇ ಗ್ರಾಪಂನಿಂದ ಬಂದ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಕಾರ್ಯಕ್ರಮ ನಿಮ್ಮದಲ್ಲವೆ, ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ತೆರಳಿದರು. ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಗ್ರಾಮದ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts