More

    ಸಚಿವ ನಾಗೇಶ್ ನೇತೃತ್ವದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ ಆರ್ಭಟ

    ಕೋಲಾರ: ಈ ವರ್ಷದ ಜಿಲ್ಲಾ ಪಂಚಾಯಿತಿ ಮೊದಲ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅರಣ್ಯ, ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಕಾರ್ಯವೈಖರಿ ವಿರುದ್ಧ ಬೆಂಕಿ ಉಗುಳಿದರು.

    ಟೀಕಾಸ್ತ್ರಗಳಿಗೆ ಕಡಿವಾಣ ಹಾಕಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆಗೆ ಹಾಗೂ ಲೋಪ ಸಾಬೀತಾದಲ್ಲಿ ಕ್ರಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿ ಬಾಯಿ ಮುಚ್ಚಿಸಿದರು.

    ರಾಹುಕಾಲ ಮುಗಿದ ಬಳಿಕ ಆರಂಭವಾದ ಸಭೆಯಲ್ಲಿ ಬಿಜೆಪಿ ಸದಸ್ಯ ಮಹೇಶ್, 2017-18, 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ ಅಗತ್ಯ ಸಾಮಗ್ರಿ ಖರೀದಿಸಲು ಸರ್ಕಾರ 80 ಲಕ್ಷ ರೂ. ಅನುದಾನ ನೀಡಿದ್ದರೂ ಸಾಮಗ್ರಿ ಖರೀದಿಸಿಲ್ಲ, ಹಣ ಏನಾಯಿತು ಎಂದು ಪ್ರಶ್ನಿಸಿದರು. ಅನುದಾನವನ್ನು ಡಿಡಿಪಿಐ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಜಿಪಂ ಲೆಕ್ಕಾಧಿಕಾರಿ ದಾಖಲೆ ತೋರಿಸಿದರೆ, ಜಿಪಂನಿಂದ ಹಣ ಬಂದಿರುವುದು ಗಮನಕ್ಕೆ ಬಂದಿಲ್ಲವೆಂದು ಡಿಡಿಪಿಐ ಕೆ.ರತ್ನಯ್ಯ ಹೇಳಿದರು.

    ಸದಸ್ಯ ಅರವಿಂದ್, 3 ವರ್ಷಗಳಿಂದ ಅನುದಾನದ ಮಾಹಿತಿ ಸಿಕ್ಕಿಲ್ಲ. ದಕ್ಷ ಅಧಿಕಾರಿ ಇರುವ ಸಮಿತಿಯಿಂದ ತನಿಖೆ ಮಾಡಿಸಿ ಎಂದಾಗ ಸದಸ್ಯ ಎಚ್.ವಿ.ಶ್ರೀನಿವಾಸ್ ಧ್ವನಿಗೂಡಿಸಿದರು. ಉನ್ನತ ಸಮಿತಿ ಮೂಲಕ ತನಿಖೆ ಮಾಡಿಸಿ 2 ವಾರದಲ್ಲಿ ವರದಿ ತರಿಸುವ ಭರವಸೆ ಅಧ್ಯಕ್ಷರಿಂದ ಬಂತು. ಕೋಲಾರ ತಾಪಂ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಬಡವರಿಗೆ ಗ್ಯಾಸ್ ಸಿಲಿಂಡರ್ ವಿತರಿಸಲು ಸರ್ಕಾರ ಸೂಚಿಸಿದ್ದರೂ ಡಿಎಫ್‌ಒ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿಲ್ಲ ಎಂದು ದೂರಿದರು.

    ಅಧಿಕಾರ ಹಸ್ತಾಂತರವಾಗಿಲ್ಲ: ಸಮಾಜ ಕಲ್ಯಾಣ ಇಲಾಖೆ ಹಿಂದಿನ ಜಂಟಿ ನಿರ್ದೇಶಕಿ ಸಿಂಧು ವರ್ಗಾವಣೆಯಾಗಿದ್ದರೂ ಪ್ರಭಾರ ಅಧಿಕಾರಿ ರಾಜಣ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿಲ್ಲ. ಪ್ರಮುಖ ಕಡತ ಇಟ್ಟುಕೊಂಡಿದ್ದಾರೆಂದು ಸದಸ್ಯರು ಆರೋಪಿಸಿದಾಗ ಅಧಿಕಾರಿ ರಾಜಣ್ಣ ಈ ಹಿಂದೆ ಆಗಿರುವ ಲೋಪಗಳ ಕುರಿತು ತನಿಖೆ ಮಾಡಿಸಲು ಸಮ್ಮತಿ ಇದೆ ಎಂದರು. ಹಿಂದಿನ ಅಧಿಕಾರಿ ಸಿಂಧು ಅವರನ್ನು ಕರೆತರಲು ಪೊಲೀಸರಿಗೆ ದೂರು ನೀಡುವಂತೆ ಸಂಸದ ಎಸ್.ಮುನಿಸ್ವಾಮಿ ಹಾಗೂ ಸದಸ್ಯರು ಒತ್ತಾಯಿಸಿದರು.

    ಶಾಸಕರು, ಸದಸ್ಯರ ಮಾರ್ದನಿ: ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಬಿಡುಗಡೆಯಾಗಿದ್ದ ಅನುದಾನವನ್ನು ಡಿಡಿಪಿಐ ಖಾತೆಗೆ ವರ್ಗಾವಣೆ ವಿಚಾರದಲ್ಲಿ ಅಧಿಕಾರಿಗಳು ಭಿನ್ನ ಹೇಳಿಕೆ ನೀಡುತ್ತಿರುವುದರಿಂದ ಪೊಲೀಸ್ ಇಲಾಖೆಗೆ ದೂರು ನೀಡಿದಲ್ಲಿ ಸತ್ಯ ಬೇಗ ಹೊರಬರುತ್ತದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

    ಆನೆ ದಾಳಿಯಿಂದ ರೈತರಿಗೆ ನಷ್ಟವಾಗಿದೆ. ಸಚಿವರು, ಎಂಪಿ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕೊಡಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಒತ್ತಾಯಿಸಿದಾಗ ಆನೆ ದಾಳಿಯಿಂದ ಆಗಿರುವ ತೊಂದರೆ ಪರಿಶೀಲಿಸುವುದಾಗಿ ಸಚಿವ ನಾಗೇಶ್ ಭರವಸೆ ನೀಡಿದರು.
    ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಬೆಂಗಳೂರಿನಲ್ಲಿ ಟೆಂಡರ್ ಕರೆಯುವುದು ಸರಿಯಲ್ಲ. ಕೋಲಾರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಗುತ್ತಿಗೆದಾರರು ಲೋಡ್‌ಗಟ್ಟಲೆ ಹಾಸಿಗೆಗಳನ್ನು ಸರಬರಾಜು ಮಾಡಿದ್ದಾರೆ, ಇದಕ್ಕೆ ಬದಲು ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಚಿಂತನೆ ನಡೆಸುವಂತೆ ಜಿಪಂ ಅಧ್ಯಕ್ಷರು ತಿಳಿಸಿದರು.

    ಡಿಎಚ್‌ಒ ಡಾ.ವಿಜಯಕುಮಾರ್ ಜಿಲ್ಲೆಯ ಗ್ರಾಮೀಣ ಆಸ್ಪತ್ರೆಗಳ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಮಾಹಿತಿ ಕೇಳಿದ್ರೆ ಕೊಡಲ್ಲ ಎಂದು ಸದಸ್ಯರಾದ ಅರುಣ್ ಪ್ರಸಾದ್, ಭಾಗ್ಯಮ್ಮ ಮತ್ತು ಗೋವಿಂದಸ್ವಾಮಿ ದೂರಿದರು.

    ಶಾಲೆಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ, ನನ್ನ ಕ್ಷೇತ್ರಕ್ಕೆ ಸೇರಿದ ಕ್ಯಾಪನಹಳ್ಳಿಯಲ್ಲಿ ಮಕ್ಕಳಿಗೆ ಶಾಲೆಯ ಅಡುಗೆ ಮನೆಯಲ್ಲಿ ಪಾಠ ಮಾಡಲಾಗುತ್ತಿದೆ ಎಂದು ಸದಸ್ಯ ಚಿನ್ನಸ್ವಾಮಿ ಗಮನ ಸೆಳೆದರು. ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕ ನಂಜೇಗೌಡ, ಸದಸ್ಯೆ ಅಶ್ವಿನಿ ದೂರಿದಾಗ ಕ್ರಮ ಕೈಗೊಳ್ಳುವುದಾಗಿ ಸಚಿವರು ಉತ್ತರಿಸಿದರು. ಜಿಲ್ಲೆಯ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಲುವಾಗಿ ಸರ್ವೇ ಮಾಡಿಸಿ ಬೇಲಿ ಅಳವಡಿಸಬೇಕೆಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರೂಪಶ್ರೀ ಮಂಜುನಾಥ್ ಸಲಹೆ ನೀಡಿದರು.

    ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಸಿಇಒ ಎಚ್.ವಿ.ದರ್ಶನ್, ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.

    ಡಿಎಫ್‌ಒ ಗೈರಿಗೆ ಆಕ್ರೋಶ: ಡಿಎಫ್‌ಒ ಚಕ್ರಪಾಣಿ ಗೈರಿಗೆ ಆಕ್ರೋಶ ವ್ಯಕ್ತವಾಯಿತು. ಜನರ ಕೆಲಸಕ್ಕಾಗಿ ಫೋನ್ ಮಾಡಿದ್ರೂ ಕರೆ ಸ್ವೀಕರಿಸಲ್ಲ, ಬಡವರಿಗೆ ಅಡುಗೆ ಅನಿಲ ವಿತರಣೆಗೆ ಕಾಳಜಿ ತೋರುತ್ತಿಲ್ಲ ಎಂದು ಸದಸ್ಯ ಅರುಣ್ ಪ್ರಸಾದ್ ಆರೋಪಿಸಿದರೆ, ಆನೆಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂದು ಸದಸ್ಯೆ ಪಾರ್ವತಮ್ಮ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts