More

    ಕಾಲುವೆ ತುಂಬ ಹೂಳು… ರೈತರ ಗೋಳು

    ಪಿ.ಎನ್. ಹೇಮಗಿರಿಮಠ ಗುತ್ತಲ
    ಪ್ರತಿ ಮಳೆಗಾಲದಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗಳ ಮೂಲಕ ರೈತರ ಜಮೀನಿಗಳಿಗೆ ನೀರು ಬರುತ್ತಿತ್ತು. ಆದರೆ, ಕಳೆದ 3-4 ವರ್ಷಗಳಿಂದ ಸಮರ್ಪಕ ನಿರ್ವಹಣೆ ಮಾಡದ್ದರಿಂದ ಕಾಲುವೆಯಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ನಿಂತಿವೆ. ಈ ವರ್ಷ ರೈತರ ಜಮೀನುಗಳಿಗೆ ನೀರು ತಲುಪುವುದು ಅನುಮಾನವಾಗಿದೆ.
    ಗಾಜನೂರ ಡ್ಯಾಂ ನಿಂದ ಗುತ್ತಲ ಹೋಬಳಿಯ ಜಮೀನಿಗಳಿಗೆ 195 ಕಿ.ಮೀ. ದೂರದಿಂದ ತುಂಗಾ ನೀರು ಹರಿದುಬರಬೇಕು. ಕೂರಗುಂದ ಗ್ರಾಮದಿಂದ ಆರಂಭವಾಗಿ ಟಾಟಾ ಮಣ್ಣೂರ ಗ್ರಾಮದವರೆಗೆ ಬರುವ ವಿವಿಧ ಊರುಗಳ ಸುಮಾರು 13,600 ಹೆಕ್ಟೇರ್ ಜಮೀನುಗಳಿಗೆ ನೀರು ತಲುಪುತ್ತಿತ್ತು. ಆದರೆ, ಕಳೆದ 3-4 ವರ್ಷಗಳಿಂದ ಕಾಲುವೆಗಳನ್ನು ಸ್ವಚ್ಛಗೊಳಿಸಲು ಸಂಬಂಧಪಟ್ಟವರು ಮುಂದಾಗಲಿಲ್ಲ. ಇದರಿಂದಾಗಿ ಕಾಲುವೆಗುಂಟ ಜಾಲಿ ಗಿಡಗಳು ಬೆಳೆದಿವೆ. ಹೂಳು ತುಂಬಿಕೊಂಡಿದೆ. ಹೀಗಾಗಿ ನೀರು ಸಮರ್ಪಕವಾಗಿ ಕೊನೆಯತನಕ ಹರಿಯದ ಸ್ಥಿತಿ ನಿರ್ಮಾಣವಾಗಿದೆ.
    ಮಳೆಗಾಲದಲ್ಲಿ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬರುವ ನೀರನ್ನೇ ನೆಚ್ಚಿಕೊಂಡು ಸಾವಿರಾರು ರೈತರು ಬೆಳೆಗಳನ್ನು ಬೆಳೆಯುತ್ತ ಬಂದಿದ್ದಾರೆ. ಈಗಾಗಲೇ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ ಮುಂಗಾರು ವಿಳಂಬವಾಗಿದ್ದು, ಮುಂದೆ ಮಳೆ ಬಂದು ನಂತರ ಕೈಕೊಟ್ಟಲ್ಲಿ ಕಾಲುವೆಯ ನೀರನ್ನು ಬಳಸಿಕೊಂಡು ಬೆಳೆ ಬೆಳೆಯುಲು ಸಹಾಯವಾಗುತ್ತಿತ್ತು. ಆದರೆ, ಕಾಲುವೆಗಳು ಸ್ವಚ್ಛಗೊಳ್ಳದ ಕಾರಣ ನೀರು ಸರಾಗವಾಗಿ ಬರುವುದು ಅನುಮಾನವಾಗಿದೆ.
    ಅಲ್ಲದೆ, ಮಳೆ ಆದ ಸಂದರ್ಭದಲ್ಲಿ ರೈತರು ಬಳಸದೇ ಇರುವ ನೀರು ವಿವಿಧ ಗ್ರಾಮಗಳ ಕೆರೆ ಕಟ್ಟೆಗಳನ್ನು ತುಂಬಿಸುತ್ತಿತ್ತು. ನಂತರ ತುಂಗಭದ್ರಾ ಹಾಗೂ ವರದಾ ನದಿಗೆ ಸೇರುತ್ತಿತ್ತು. ಆದರೆ, ಕಾಲುವೆಗಳಲ್ಲಿ ಭಾರಿ ಪ್ರಮಾಣದ ಹೂಳು ಇರುವ ಕಾರಣ ನೀರು ಹರಿಯುವಲ್ಲಿ ವಿಳಂಬವಾಗುವುದು ನಿಶ್ಚಿತ. ಇದರಿಂದ ರೈತರಿಗೆ, ಕೆರೆ-ಕಟ್ಟೆಗಳಿಗೆ ನೀರು ಸಿಗುವುದೂ ಕಷ್ಟಸಾಧ್ಯ.
    ಮಳೆಗಾಲದಲ್ಲಿ ಗಾಜನೂರ ಜಲಾಶಯ ತುಂಬಿದ ನಂತರ ವಾಡಿಕೆಯಂತೆ ತುಂಗಾ ಮೇಲ್ದಂಡೆ ಕಾಲುವೆ ಮೂಲಕ ನೀರನ್ನು ಬಿಡುತ್ತಾರೆ. ಮಳೆ ಇಲ್ಲದ ವೇಳೆ ಕಾಲುವೆಗಳನ್ನು ಸ್ವಚ್ಛಗೊಳಿಸಲು ಸಹಾಯವಾಗುತ್ತದೆ. ಮಳೆ ಬಂದ ನಂತರ ಯಂತ್ರಗಳನ್ನು ರೈತರ ಜಮೀನಿನ ಮರ್ಧಯದಿಂದ ಕೊಂಡೊಯ್ಯುವುದೂ ಕಷ್ಟ. ಈ ಎಲ್ಲ ಕಾರಣದಿಂದ ತುಂಬಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಆದಷ್ಟು ಶೀಘ್ರ ಕಾಲುವೆಗಳಲ್ಲಿ ತುಂಬಿರುವ ಹೂಳು ಹಾಗೂ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.

    ನಮ್ಮ ಜಮೀನಿನ ಹತ್ತಿರ ಇರುವ ಕಾಲುವೆ ಸೇರಿದಂತೆ ಅನೇಕ ಕಾಲುವೆಗಳು ಸ್ವಚ್ಛವಾಗಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರು ಬರುವುದು ಅನುಮಾನ. ತುಂಗಾ ಮೇಲ್ದಂಡೆ ಅಧಿಕಾರಿಗಳಿಗೆ ಫೋನ್ ಮಾಡಿ ಸಕಾಗಿದೆ. ಫೋನ್ ಕರೆ ಸ್ವೀಕರಿಸುತ್ತಿಲ್ಲ. ಕಾಲುವೆಗಳ ದುರಸ್ತಿ ಆಗದೆ ನೀರು ಪಡೆಯಲು ಆಗುತ್ತಿಲ್ಲ. ಮಳೆ ಇಲ್ಲದ ವೇಳೆ ಬೆಳೆಗೆ ನೀರು ಹಾಯಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
    ಮಂಜುನಾಥ ಬಸವಣ್ಣೆಪ್ಪ ಗಡದ, ಗುತ್ತಲದ ರೈತ

    ಕಾಲುವೆಗಳ ದುರಸ್ತಿ ಹಾಗೂ ಹೂಳು ತೆಗೆಯುವ ಕೆಲಸಗಳ ಟೆಂಡರ್ ಆಗಿದೆ. ವಿಧಾನಸಭಾ ಚುನಾವಣೆ ನೀತಿ ಸಂಹಿತಿಯ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಮಳೆ ಆರಂಭಕ್ಕೂ ಮುನ್ನ ಈಗಾಗಲೇ ಟೆಂಡರ್ ಆಗಿರುವ ಕಾಲುವೆಗಳ ದುರಸ್ತಿ, ಹೂಳು ತೆಗೆಯುವ ಹಾಗೂ ಗಿಡ ಗಂಟಿಗಳನ್ನು ತೆಗೆಯುವ ಕೆಲಸವನ್ನು ಪೂರ್ತಿಗೊಳಿಸಲಾಗುವುದು.
    ಪ್ರಶಾಂತ ಕೆ. ಅಧೀಕ್ಷಕ ಇಂಜನಿಯರ್, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts