More

    ಗುತ್ತಲ ಹೇಮಗಿರಿಮಠದಲ್ಲಿ ಕಾರ್ತಿಕೋತ್ಸವ

    ಗುತ್ತಲ: ನಿತ್ಯ ಕನ್ನಡದಲ್ಲಿಯೇ ಎರಡು ಹೊತ್ತು ಪೂಜೆ ಜರುಗುವ, ಶತಮಾನಗಳಿಂದ ನಂದಾದೀಪದಿಂದ ಕಂಗೊಳಿಸುತ್ತಿರುವ ಭಕ್ತರ ಪಾಲಿನ ಭಾಗ್ಯದಾತ ಶ್ರೀಗುರು ಪಟ್ಟಣದ ಶ್ರೀ ಹೇಮಗಿರಿ ಚನ್ನಬಸವೇಶ್ವರರ ಮಹಾಕಾರ್ತಿಕೋತ್ಸವ ಜ. 11ರಂದು ಏರ್ಪಾಟಾಗಿದೆ.
    10ನೇ ಶತಮಾನದ ಆದಿಯಲ್ಲಿ ಸ್ಥಾಪಿತವಾದ ಶ್ರೀ ಹೇಮಗಿರಿಮಠ ನಾಡಿನ ಖ್ಯಾತ ಮಠಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಶ್ರೀ ಹೇಮಗಿರಿ ಮಠದಲ್ಲಿ ಕರ್ತೃ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರ ಹಾಗೂ ಶ್ರೀ ಹೇಮಗಿರಿ ಅಕ್ಕನಾಗಮ್ಮ ಮಾತೆಯ ಗದ್ದುಗೆಗಳ ಮಹಾಕಾರ್ತಿಕೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
    ಎಲ್ಲ ದೇವಸ್ಥಾನ ಹಾಗೂ ಮಠಗಳಲ್ಲಿ ಸಂಸ್ಕೃತ ಭಾಷೆಯ ಮಂತ್ರಗಳೊಂದಿಗೆ ಪೂಜೆ ಜರುಗಿದರೆ, ಗುತ್ತಲದ ಶ್ರೀ ಹೇಮಗಿರಿಮಠದಲ್ಲಿ ಮಾತ್ರ ಕನ್ನಡದ ಮಂತ್ರೋಚ್ಛಾರಣೆಯೊಂದಿಗೆ ಪೂಜೆಗಳು ನಡೆಯುತ್ತವೆ. ಗ್ರಹಣ ಮೋಕ್ಷದ ನಂತರ ವಿಶೇಷ ಪೂಜೆಗಳನ್ನು ನಡೆಸಿಕೊಂಡು ಬರಲಾಗಿದೆ.
    ಪವಾಡ ಪುರುಷರಾದ ಶ್ರೀ ಹೇಮಗಿರಿ ಚನ್ನಬಸವೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಉಲ್ಲೇಖಗಳಿವೆ. ಅನೇಕ ಪವಾಡ ಮಾಡಿರುವ ಹಾಗೂ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಚನ್ನಬಸವೇಶ್ವರರ ಪೂಜೆ ವೇಳೆ ಉಚ್ಛರಿಸಲ್ಪಡುವ ಮಂತ್ರಗಳಲ್ಲಿ ಅನೇಕ ಕಾಲಜ್ಞಾನ ಭವಿಷ್ಯವನ್ನು ತಿಳಿಸಿದ್ದಾರೆ. ಕೆಲ ವಾಣಿಗಳು ಒಗಟಾಗಿವೆ.
    ಸಂತಾನ ಭಾಗ್ಯದಾತ: ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸಿದ ಅನೇಕ ಉದಾಹರಣೆಗಳಿವೆ. ಶ್ರೀಶೈಲ ಪೀಠದ ಹಿಂದಿನ ಜಗದ್ಗುರುಗಳಾಗಿದ್ದ ಶ್ರೀ ವಾಗೀಶ ಪಂಡಿತಾರಾಧ್ಯರ ಪೂರ್ವಾಶ್ರಮದ ತಂದೆ-ತಾಯಿ ಶ್ರೀ ಹೇಮಗಿರೀಶನಲ್ಲಿ ಬೇಡಿಕೊಂಡಿದ್ದರಿಂದಲೇ ವಾಗೀಶ ಪಂಡಿತಾರಾಧ್ಯರು ಜನಿಸಿದರು ಎಂಬುದು ಪುರಾಣದಲ್ಲಿ ಉಲ್ಲೇಖವಿದೆ.
    ಮೂಲತಃ ಪಂಚಪೀಠಗಳ ಪರಂಪರೆ ಇದ್ದರೂ ಶ್ರೀ ಹೇಮಗಿರಿ ಚನ್ನಬಸವೇಶ್ವರರು 72 ಸಾವಿರ ವಿರಕ್ತರಿಗೆ ಗುರುವಾಗಿದ್ದರು. ಅಲ್ಲದೆ, 56 (ಚಪ್ಪನ್) ದೇಶಗಳಿಗೆ ಗುರುವಾಗಿದ್ದರು ಎಂಬ ಬಗ್ಗೆ ಉಲ್ಲೇಖವಿದೆ. ಪೂಜೆಗಳಲ್ಲಿ ಉಚ್ಛರಿಸಲ್ಪಡುವ ಅಲಿಖಿತ ಮಂತ್ರಗಳಲ್ಲಿ ಶ್ರೀ ಹೇಮಗಿರಿ ಚನ್ನಬಸವೇಶ್ವರರು 11ನೇ ಅವತಾರದಲ್ಲಿ ಹವಣಿಸಿ (ಅಪೇಕ್ಷಿಸಿ) ಬರುವುದಾಗಿ ಹೇಳಿದ್ದಾರೆ.
    ಶ್ರೀ ಮಠದಲ್ಲಿ ನಿತ್ಯ ಬ್ರಾಹ್ಮೀ ಮುಹೂರ್ತ ಹಾಗೂ ಗೋಧೂಳಿ ಸಮಯದಲ್ಲಿ ನಗಾರಿಯನ್ನು ಬಾರಿಸಲಾಗುತ್ತದೆ. ಅದರಂತೆ ಪೂರ್ವಾಹ್ನ ಹಾಗೂ ರಾತ್ರಿ ಪೂಜೆ ವೇಳೆ ಸಹ ನಗಾರಿಯನ್ನು ಬಾರಿಸಲಾಗುತ್ತದೆ.
    ಸೂತಕವನ್ನು ಗಣನೆಗೆ ತೆಗೆದುಕೊಳ್ಳದೇ ನಿತ್ಯ ಪೂಜೆಯನ್ನು ಮಾಡುತ್ತಿರುವುದು ಮಠದ ಪುರಾತನ ಪರಂಪರೆಗೆ ಸಾಕ್ಷಿಯಾಗಿದೆ. ಎಲ್ಲ ಜಾತಿ, ಮತ, ಪಂಥ, ಧರ್ಮದವರಿಗೂ ಶ್ರೀ ಹೇಮಗಿರಿ ಚನ್ನಬಸವೇಶ್ವರರು ಆರಾಧ್ಯ ದೈವವಾಗಿದ್ದಾರೆ.
    ಹಿಂದು ಧರ್ಮದವರಲ್ಲದೇ ಅನ್ಯ ಧರ್ಮೀಯರು ಬೆಳಗ್ಗೆಯಿಂದ ಚನ್ನಬಸವೇಶ್ವರರ ದರ್ಶನಕ್ಕೆ ಆಗಮಿಸುತ್ತಾರೆ.
    ಹೇಮಗಿರಿಮಠದ ನಂದಾದೀಪ: ಶ್ರೀ ಚನ್ನಬಸವೇಶ್ವರರು ಅಂದು ಹಚ್ಚಿರುವ ನಂದಾದೀಪಗಳು ಈಗಲೂ ಶ್ರೀಮಠದಲ್ಲಿ ನಿತ್ಯ ಪ್ರಜ್ವಲಿಸುತ್ತಿವೆ. ಇದು ಚನ್ನಬಸವೇಶ್ವರರ ಪವಾಡವನ್ನು ಎತ್ತಿ ತೋರಿಸುತ್ತದೆ.
    ಅದೃಶ್ಯ ನ್ಯಾಯಾಲಯ: ಗುತ್ತಲ ಸೇರಿ ಸುತ್ತಮುತ್ತಲಿನ ನೂರಾರು ಗ್ರಾಮಗಳ ಜನರು ತಮ್ಮ ವ್ಯಾಜ್ಯ ಹಾಗೂ ಕಲಹಗಳ ಕುರಿತು ಶ್ರೀ ಹೇಮಗಿರಿ ಚನ್ನಬಸವೇಶ್ವರರ ಹೆಸರಿನಲ್ಲಿ ನ್ಯಾಯ ಪಡೆದುಕೊಂಡಿದ್ದಾರೆ.
    ಹೇಮಗಿರಿಮಠದಲ್ಲಿ ಎಳ್ಳ ಅಮಾವಾಸ್ಯೆಯಂದು ಮಹಾಕಾರ್ತಿಕೋತ್ಸವ ನಡೆಯಲಿದೆ. ಅದಕ್ಕಾಗಿ ಪಟ್ಟಣ ಮಧುವಣಗಿತ್ತಿಯಂತೆ ಸಿದ್ಧಗೊಳ್ಳುತ್ತಿದೆ. ಬಸ್ ನಿಲ್ದಾಣ ಹತ್ತಿರದ ಮಠದ ದ್ವಾರಬಾಗಿಲಿನಿಂದ ಮಠದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಾಲು ದೀಪಗಳನ್ನು ನಿಲ್ಲಿಸಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ.
    ಫೋಟೋ ತೆಗೆಯುವಂತಿಲ್ಲ: ಶ್ರೀಮಠದಲ್ಲಿ ಕರ್ತೃ ಗದ್ದುಗೆಗಳ ಫೋಟೋ ಹಾಗೂ ವಿಡಿಯೋ ತೆಗೆಯವುದನ್ನು ನಿಷೇಧಿಸಲಾಗಿದೆ. ಅನಾದಿ ಕಾಲದಿಂದಲೂ ಕರ್ತೃ ಗದ್ದುಗೆ, ಚನ್ನಬಸವೇಶ್ವರರ ಹಾಗೂ ಅಕ್ಕನಾಗಮ್ಮನವರ ವಿಗ್ರಹಗಳ ಚಿತ್ರಗಳನ್ನು ಬಿಡಿಸಲು ಅವಕಾಶವಿಲ್ಲ.
    ಯುಗಾದಿ ವೇಳೆಗೆ ಪೂರ್ಣ: ಶ್ರೀ ಮಠವನ್ನು ಕಳೆದ 3 ವರ್ಷಗಳಿಂದ ಶಿಲಾ ಮಠವನ್ನಾಗಿ ನಿರ್ಮಿಸಲಾಗುತ್ತಿದೆ. ಮಠದ ನಿರ್ಮಾಣ ಕಾರ್ಯ ಈಗಾಗಲೇ ಶೇ. 80ರಷ್ಟು ಮುಗಿದಿದ್ದು, ಯುಗಾದಿ ವೇಳೆಗೆ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts