More

    ಗುಟ್ಟಹಳ್ಳಿ ದೇಗುಲ ಪೇಷ್ಕಾರ್ ಅಮಾನತು

    ಕೋಲಾರ: ದೇವಾಲಯದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಗುಟ್ಟಹಳ್ಳಿ ಬಂಗಾರು ತಿರುಪತಿ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಪೇಷ್ಕಾರ್ ಕೆ.ಜಿ.ಶ್ರೀನಿವಾಸಶೆಟ್ಟಿ ಅವರನ್ನು ಅಮಾನತು ಮಾಡಲಾಗಿದೆ.

    ಪೇಷ್ಕಾರ್ ಕೆ.ಜಿ.ಶ್ರೀನಿವಾಸಶೆಟ್ಟಿ ಸುಮಾರು 45 ಲಕ್ಷ ರೂ. ದುರುಪಯೋಗಪಡಿಸಿಕೊಂಡಿರುವುದು ಹಾಗೂ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
    ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 16 ಮತ್ತು 2002ರ ನಿಯಮ 17ರನ್ವಯ ಶಿಸ್ತುಕ್ರಮ ಜರುಗಿಸಲು ಮತ್ತು ವಿಚಾರಣೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿ ಅವರಿಗೆ ಶಿಾರಸ್ಸು ಮಾಡಿದ್ದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಮಂಡಿಸಿ ಶಿಸ್ತುಕ್ರಮ ಜರುಗಿಸಲು ಜಿಲ್ಲಾಧಿಕಾರಿ ಸೂಚಿಸಿದ್ದರು.
    ಪೇಷ್ಕರ್ ಕೆ.ಜಿ.ಶ್ರೀನಿವಾಸಶೆಟ್ಟಿ 1996-1997ರಲ್ಲಿ ಹಸು, ಕರು, ಹೋರಿ, ಪಾತ್ರೆ ಸಾಮಾನು ಬಾಡಿಗೆ ಮತ್ತು ವಿದ್ಯುತ್ ಶುಲ್ಕದಲ್ಲಿ ಒಟ್ಟು 1,68,614 ರೂ. ಗಳನ್ನು ಸಂಸ್ಥೆಯ ನಿಧಿಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ. 2014ನೇ ಸಾಲಿನಿಂದ 2019ರತನಕ ದೇವಾಲಯದ ವಿವಿಧ ಖಾತೆಗಳಲ್ಲಿದ್ದ 20,80,000 ರೂ. ಸ್ವಂತ ಖರ್ಚಿಗಾಗಿ ಡ್ರಾ ಮಾಡಿದ್ದಾರೆ. ಸ್ವಯಂ ಹೆಸರಿನ ಮೇಲೆ 21,84,945 ರೂಪಾಯಿ ಪಡೆದುಕೊಂಡು ಕರ್ನಾಟಕ ಸಾದಿಲ್ವಾರ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೆ ದೇವಾಲಯದ ಆವರಣದಲ್ಲಿ ಭದ್ರತಾ ಕೊಠಡಿಯನ್ನು ನಿರ್ಮಾಣ ಮಾಡಲು ನಿರ್ಮಿತಿ ಕೇಂದ್ರವು ಕಾಮಗಾರಿಗೆ ತಗಲುವ ವೆಚ್ಚಕ್ಕೆ ಅಂದಾಯಪಟ್ಟಿ 1,10,000 ರೂ.ಗೆ ಅಂದಾಜು ಮಟ್ಟಿ ತಯಾರಿಸಿ ತಾಂತ್ರಿಕ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಅದರಂತೆಯೇ ಜಿಲ್ಲಾಡಳಿತ 2017ರಂದು ಆಡಳಿತ ಮಂಜೂರಾತಿ ನೀಡಿರುತ್ತಾರೆ. ಆದರೆ ಕಾಮಗಾರಿ ಹಣವನ್ನು ನಿರ್ಮಿತಿ ಕೇಂದ್ರಕ್ಕೆ ನೀಡದೆ ಶ್ರೀನಿವಾಸಶೆಟ್ಟಿ ಹೆಸರಿಗೆ ಚೆಕ್ ಪಡೆದು ಹಣ ಡ್ರಾ ಮಾಡಿದ್ದಾರೆ ಎಂದು ಕೋಲಾರ ವರ್ತುಲ ಲೆಕ್ಕ ಪರಿಶೋಧನಾ ಹಿರಿಯ ಉಪ ನಿರ್ದೇಶಕರು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ವರದಿ ಸಲ್ಲಿಸಿದ್ದರು.
    ವರದಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಅಮಾನತು ಮಾಡಲು ವ್ಯವಸ್ಥಾಪನಾ ಸಮಿತಿ ನ. . 27ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಿತ್ತು.
    ಸಮಿತಿಯ ತೀರ್ಮಾನದ ಪತ್ರವನ್ನು ಪರಿಶೀಲಿಸಿರುವ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕಾಧಿಕಾರಿ ವಿಚಾರಣೆ ಬಾಕಿ ಇರಿಸಿ, ಶ್ರೀನಿವಾಸಶೆಟ್ಟಿ ಅವರನ್ನು ಅಮಾನತುಪಡಿಸಿ, ವಿಚಾರಣೆ ಮುಗಿಯುವ ತನಕ ಸಮಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೊರಹೋಗಬಾರದು ಎಂದು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts