More

    ವಿದ್ಯಾರ್ಥಿಗಳಿಂದ ಗುರುವಂದನೆ ಹಳೇ ವಿದ್ಯಾರ್ಥಿಗಳಿಂದ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ

    ಬಾಗಲಕೋಟೆ: ಅದು ಸರ್ಕಾರಿ ಪ್ರೌಢಶಾಲೆ, ಶಾಲೆ ಆರಂಭಗೊಂಡು 25 ವಸಂತ ಪೂರೈಸಿದೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಹೋಗಿದ್ದಾರೆ. ಭಾನುವಾರ ಅವರೆಲ್ಲರೂ ಕಲಿತ ಶಾಲೆಯಲ್ಲಿ ಸಮ್ಮಿಲನಗೊಂಡಿದ್ದರು. ತಾವು ಕಲಿತ ಶಾಲೆಯ ಬೆಳ್ಳಿ ಮಹೋತ್ಸವ ಜತೆಗೆ ತಮಗೆ ಬದುಕಿಗೆ ಮಾರ್ಗ ತೋರಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಸಂಭ್ರಮಿಸಿದರು.

    ಬಾಗಲಕೋಟೆ ತಾಲೂಕಿನ ನೀರಲಕೇರಿ ಗ್ರಾಮದ ಬಾಳಮ್ಮ ಯಲ್ಲಪ್ಪ ಶಿಕ್ಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಕಂಡು ಬಂದ ದೃಶ್ಯ ಇದು. ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ನೂರಾರು ಸ್ನೇಹಿತರು ಭಾನುವಾರ ಬೆಳ್ಳಿ ಮಹೋತ್ಸವಕ್ಕಾಗಿ ಅಲ್ಲಿ ಸೇರಿದ್ದರು. ಹಳೇ ನೆನಪುಗಳಿಗೆ ಜಾರಿದರು. ಕಲಿತ, ಆಟವಾಡಿದ ಜಾಗವನ್ನು ಸುತ್ತಾಡಿ ಸಂಭ್ರಮಿಸಿದರು. ಅಕ್ಷರ ಬೀಜ ಬಿತ್ತಿದ ಗುರುಗಳಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.

    ಗುರುಗಳು ನಿಜವಾದ ದೇವರು

    ಶಾಲೆಯ ಬೆಳ್ಳಿ ಮಹೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಮಾತನಾಡಿ, ವಿದ್ಯಾರ್ಥಿಗಳ ಬದುಕು ಸುಂದರವಾಗಿ ಕಟ್ಟಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿರುತ್ತದೆ. ಗುರು ಶಿಕ್ಷಣ ಕಲಿಸುವ ಮೂಲಕ ವಿದ್ಯಾರ್ಥಿಗಳ ಬದುಕು ಕಟ್ಟಿಕೊಡುವ ನಿಜವಾದ ದೇವರು. ಅಂತಹ ಗುರುಗಳನ್ನು ಸ್ಮರಿಸುವುದು ಹೆಮ್ಮೆಯ ಸಂಗತಿ ಎಂದರು.

    ಶಾಲೆಯಲ್ಲಿ ಕಲಿತು ಹೋಗಿರುವ ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ನೆನಪಿಟ್ಟುಕೊಂಡು ಅವರನ್ನು ಗೌರವಿಸುತ್ತಿರುವುದು ಸಂತಸ. ಜತೆಗೆ ಈ ಶಾಲೆ 25 ವರ್ಷ ಪೂರೈಸಿದ ಸಂಭ್ರಮ. ಇನ್ನು ಈ ಶಾಲೆಯಲ್ಲಿ ಈ ಭಾಗದ ಗ್ರಾಮೀಣ ಮಕ್ಕಳು ಶಿಕ್ಷಣ ಪಡೆದುಕೊಂಡು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

    ಪ್ರೌಢಶಾಲೆಗೆ ಭೂಮಿ ದಾನ ಮಾಡಿದ ಕುಟುಂಬದ ಹನುಮಂತ ಶಿಕ್ಕೇರಿ ಮಾತನಾಡಿ, ವಿದ್ಯೆ ಕಲಿಸಿದ ಗುರುವಿಗೆ ಏನನ್ನಾದರೂ ಉಡುಗೊರೆ ನೀಡಬೇಕೆಂದರೆ ನಾವು ಒಳ್ಳೆಯ ಬದುಕು ಕಟ್ಟಿಕೊಳ್ಳುವುದಾಗಿದೆ. ದೊಡ್ಡ ಸಾಧನೆ ಮಾಡಿದಾಗ ಅವರಿಗೆ ದೊಡ್ಡ ಉಡುಗೊರೆ ನೀಡಿದಂತಾಗುತ್ತದೆ. ಹಾಗಾಗಿ ಮಕ್ಕಳು ಒಳ್ಳೆಯ ಬದುಕು ಕಟ್ಟಿಕೊಳ್ಳುವ ಮೂಲಕ ಶಿಕ್ಷಕರಿಗೆ ಸಂತೋಷ ನೀಡಬೇಕು. ಜತೆಗೆ ಇಂದು ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರನ್ನು ಗೌರವಿಸುತ್ತಿರುವುದು ಬಹಳಷ್ಟು ಸಂತಸದ ವಿಚಾರ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಶ್ರೀಶೈಲ ಲಾಗಲೂಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್, ಬಡದಾನಿ, ರಾಯನಗೌಡ ಗೌಡರ, ಆರ್.ಆರ್. ಇಂಗಳಗಿ, ಎಸ್.ಎಚ್. ಹುನಗುಂದ, ಆರ್.ಆರ್. ಮೇಟಿ, ಸಿದ್ದನಗೌಡ ಗೌಡರ ಉಪಸ್ಥಿತರಿದ್ದರು. ಬಿ.ಎಸ್. ಲೋಕಾಪುರ ಸ್ವಾಗತಿಸಿದರು. ಬಸವಗೌಡ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts