More

  ಭಕ್ತರು ಮೆಚ್ಚಿದ ಗುರುಗಳು ಮಲ್ಲಿಕಾರ್ಜುನ ಸ್ವಾಮೀಜಿ

  ಹೊಸದುರ್ಗ: ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಭಕ್ತರು ಮೆಚ್ಚಿದ ಗುರುವಾಗಿ ತರಳಬಾಳು ಪೀಠದ ಬೆಳವಣಿಗೆಗೆ ಅಪಾರ ಸೇವೆ ಸಲ್ಲಿಸಿದ ಮಹಾಪುರುಷ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

  ಸಾಣೇಹಳ್ಳಿಯ ಶಿವಕುಮಾರ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ತರಳಬಾಳು ಬೃಹನ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ 16ನೇ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

  ಮಲ್ಲಿಕಾರ್ಜುನ ಶ್ರೀಗಳು ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಸಿರಿಗೆರೆಯಲ್ಲೇ ಹುಟ್ಟಿದರೂ ಮಠದ ಸಂಪರ್ಕ ಹೆಚ್ಚಿತ್ತೇ ಹೊರತು ಮನೆಯ ಒಡನಾಟ ಇರಲಿಲ್ಲ. ಬಸವತತ್ವ ಕುರಿತು ಸದಾ ಚಿಂತನೆ ಮಾಡುವ ಜತೆಗೆ ಬಸವಾದಿ ಶರಣರ ಕುರಿತು ಅಪಾರವಾದ ಪ್ರೀತಿ ಹಾಗೂ ಶ್ರದ್ಧೆ ಹೊಂದಿದ್ದರು. ಸಭೆ ಸಮಾರಂಭಗಳಲ್ಲಿ ವ್ಯಾವಹಾರಿಕ ಮಾತುಗಳಿಗಿಂತ ಬಸವತತ್ವ, ಧರ್ಮ, ಆಚಾರಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು ಎಂದರು.

  ಶ್ರೀಗಳು ಯಾವಾಗಲೂ ಹಳ್ಳಿಗಳಲ್ಲಿನ ಭಕ್ತರ ಮನೆಗಳಿಗೆ ಹೋಗಿ ಮಠಕ್ಕೆ ಬೇಕಾದ ಧಾನ್ಯ, ಹಣ ಇತ್ಯಾದಿ ಸಂಗ್ರಹ ಮಾಡುತ್ತಿದ್ದರು. ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿಯ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡುವ ಗುಣ ಅವರಲ್ಲಿತ್ತು. ಮಲ್ಲಿಕಾರ್ಜುನ ಶ್ರೀಗಳದ್ದು ಪ್ರತಿ ಊರುಗಳಲ್ಲೂ ನ್ಯಾಯಪೀಠ ನಡೆಯುತ್ತಿತ್ತು. ಹೆಚ್ಚು ಅಧ್ಯಯನ ಮಾಡುತ್ತಿದ್ದ ಅವರು ಭಕ್ತರಿಗೆ ನೀತಿವಂತರು, ಸತ್ಯವಂತರು, ಪ್ರಾಮಾಣಿಕರಾಗಬೇಕು, ಚೆನ್ನಾಗಿ ದುಡಿಯಬೇಕು, ಮಠ ನಿಮ್ಮದು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.

  ನಿವೃತ್ತ ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ ಮಾತನಾಡಿ, ತರಳಬಾಳು ಗುರುಪರಂಪರೆಯಲ್ಲಿ ಪಟ್ಟಾಧ್ಯಕ್ಷರು, ವಿರಕ್ತರು, ಚರಪಟ್ಟಾಧ್ಯಕ್ಷರು ಎನ್ನುವ ಮೂರು ವಿಧದ ಸ್ವಾಮಿಗಳಿದ್ದರು. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಚರಪಟ್ಟಾಧ್ಯಕ್ಷರಾಗಿದ್ದರು ಎಂದು ಹೇಳಿದರು.

  ಮಲ್ಲಿಕಾರ್ಜುನ ಶ್ರೀಗಳು ಆಧ್ಯಾತ್ಮಿಕ ಶಕ್ತಿ ಹೊಂದಿದವರು. ಕಾಯಕಯೋಗಿಯಾಗಿದ್ದ ಅವರು ನೂರಾರು ಎಕರೆ ತೆಂಗಿನತೋಟವನ್ನು ಮಾಡಿದರು. ಪೂಜ್ಯರು ಬೆಳಗಿನಿಂದ ಸಂಜೆಯವರೆಗೂ ಜಮೀನಿನಲ್ಲಿ ದುಡಿಯುತ್ತಿದ್ದರು. ಮಠದ ಶಿಷ್ಯರನ್ನು ಸಮಾಜದ ಆಸ್ತಿಯನ್ನಾಗಿ ಮಾಡಿ ಶಿಷ್ಯರ ಮನೆಯ ಕತ್ತಲೆಯನ್ನು ಕಳೆಯುವ ಕೆಲಸ ಮಾಡಿದರು ಎಂದರು.

  ಶಿವಸಂಚಾರದ ಕಲಾವಿದ ಎಚ್.ಎಸ್.ನಾಗರಾಜ್ ಸಂಗಡಿಗರು ವಚನಗೀತೆಗಳನ್ನು ಹಾಡಿದರು. ಮುಖ್ಯಶಿಕ್ಷಕ ಬಸವರಾಜ್, ಶಿಲ್ಪಾ, ಹೊನ್ನೇಶಪ್ಪ, ಶಿವಕುಮಾರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts