More

    ಯುವವಾಹಿನಿ ಕಾರ್ಯಚಟುವಟಿಕೆಯಿಂದ ಉತ್ತಮ ನಾಯಕತ್ವ ಸೃಷ್ಟಿ, ಉಜ್ಜೋಡಿಶ್ರೀ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ನಡೆದ ಗುರು ಸ್ಮರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

    ಮಂಗಳೂರು: ಯುವವಾಹಿನಿ ಉತ್ತಮ ನಾಯಕರನ್ನು ಸೃಷ್ಟಿ ಮಾಡಬಲ್ಲ ಸಂಸ್ಥೆ. ಯುವಶಕ್ತಿ ಸಮಾಜದ ಅಭಿವೃದ್ಧಿಗೆ ಪಣ ತೊಟ್ಟರೆ ಸಮಾಜ ಅಭಿವೃದ್ಧಿ ಕಾಣಲಿದೆ, ಯುವವಾಹಿನಿ ಕಾರ್ಯಚಟುವಟಿಕೆಯಿಂದ ಜನರಲ್ಲಿ ಉತ್ತಮ ನಾಯಕತ್ವ ಸೃಷ್ಟಿಯಾಗುತ್ತಿದೆ ಎಂದು ಬಂಟ್ವಾಳದ ವಕೀಲರಾದ ಶೋಭಾಲತಾ ಸುವರ್ಣ ಹೇಳಿದರು.

    ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿಯ ಪ್ರಯುಕ್ತ ಯುವವಾಹಿನಿ ಕಂಕನಾಡಿ ಘಟಕದ ಸಹಯೋಗದಲ್ಲಿ ಉಜ್ಜೋಡಿಶ್ರೀ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ನಡೆದ ಗುರು ಸ್ಮರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಯುವವಾಹಿನಿ ಕಂಕನಾಡಿ ಘಟಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಸೇವೆಯ ಮೂಲಕ ಕತ್ತಲೆಯಿಂದ ಬೆಳಕಿನೆಡೆಗೆ ಎಂಬ ಧ್ಯೇಯ ಇಲ್ಲಿ ಸಾಕಾರವಾಗಿದೆ ಎಂದರು.

    ಸಂತ ಆಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್ ಮಾತನಾಡಿ, ಮಾನವನ ನೈಪುಣ್ಯತೆಯಲ್ಲಿ ಹೊಸತನ ಅಡಕವಾಗಿದೆ. ಜೀವನವು ನಿಂತ ನೀರಾಗದೆ ಹರಿಯುವ ನೀರಿನಂತೆ ಇರಬೇಕು. ಆಗ ಮಾತ್ರ ಮಾನವನ ಬದುಕು ಸುಂದರವಾಗುವುದಕ್ಕೆ ಸಾಧ್ಯ. ಯುವವಾಹಿನಿ ಕಂಕನಾಡಿ ಘಟಕವು ತನ್ನ ಕಾರ್ಯಯೋಜನೆಗಳಿಂದ ಸಮಾಜದಲ್ಲಿ ಸಂಘಟಿತ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಶ್ರೀ ನಾರಾಯಣಗುರುಗಳ ಆಶಯದಂತೆ ಶಿಕ್ಷಣದಿಂದ ಹೆಚ್ಚಿನ ಜ್ಞಾನ ಎಂಬ ದ್ಯೇಯವನ್ನು ಯುವವಾಹಿನಿ ಸಕಾರಗೊಳಿಸುತ್ತಿದೆ ಎಂದರು.

    ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷ ಲೋಕೇಶ್ ಅಮೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿನ ಸಹಪ್ರಾಧ್ಯಾಪಕ ಡಾ. ಶೇಷಪ್ಪ ಅಮೀನ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ, ಶ್ರೀ ಮಹಾಂಕಾಳಿ ಸೇವಾ ಸಮಿತಿ ಉಜ್ಜೋಡಿ ಇದರ ಅಧ್ಯಕ್ಷ ಉಮಾನಾಥ್ ಕೋಟ್ಯಾನ್, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ನವೀನ್ ಕೋಟ್ಯಾನ್ ಹಾಗೂ ಕಾರ್ಯದರ್ಶಿ ಮಮತಾ ತೇಜಪಾಲ್ ಉಪಸ್ಥಿತರಿದ್ದರು.

    ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್, ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರ ರೋಗ ತಜ್ಞ ಡಾ.ಸದಾನಂದ ಪೂಜಾರಿ, ಸಹಪ್ರಾಧ್ಯಾಪಕ ಡಾ. ಶೇಷಪ್ಪ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಭವಿತ್ ರಾಜ್, ರೋಹಿತ್ ಕುಮಾರ್, ಮೇಘ, ವೀಣಾ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷ ಲೋಕೇಶ್ ಅಮೀನ್ ಸ್ವಾಗತಿಸಿದರು. ನವೀನ್ ಕೋಟ್ಯಾನ್ ವಂದಿಸಿದರು. ರಚನಾ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts