More

    ಸಾಕ್ಷಾತ್ ದೇವರ ಸಾಕಾರ ರೂಪವೇ ಗುರು

    ಶಿರಸಿ: ಶಿವಯೋಗಿಯ ಪೂಜೆ ಮಾಡಿ ಪಾದೋದಕ ಪ್ರಸಾದ ಪಡೆದರೆ ಶತಕೋಟಿ ಯಜ್ಞ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಬಣ್ಣದ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ನುಡಿದರು.

    ಪಟ್ಟಣದ ಬಣ್ಣದ ಮಠದಲ್ಲಿ ಬುಧವಾರ ಆಯೋಜಿಸಿದ್ದ ಮ.ನಿ.ಪ್ರ. ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ 29ನೇ ಪುಣ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವೀರಶೈವರಲ್ಲಿ ಯಜ್ಞ ಮಾಡುವುದಿಲ್ಲ. ಬದಲಾಗಿ ಶಿವಯೋಗಿಯಂತಹ ಗುರುಗಳಿಗೆ ಪೂಜೆ ಮಾಡಿ ಪಾದೋದಕ ಪಡೆಯುತ್ತಾರೆ. ಗುರು ಎನ್ನುವುದು ಮುಕ್ಕೋಟಿ ದೇವರಿಗೂ ಮಿಗಿಲಾದದ್ದು, ಗುರುಗಳ ದಿವ್ಯ ದೃಷ್ಟಿ ಒಮ್ಮೆ ಭಕ್ತರ ಮೇಲೆ ಬಿತ್ತೆಂದರೆ ಆ ಭಕ್ತನ ಸಕಲ ಪಾಪ ಕರ್ಮಗಳು ಕಳೆದು ಮುಕ್ತಿ ಹೊಂದುತ್ತಾನೆ. ಗುರು ಎನ್ನುವುದು ಸಾಕ್ಷಾತ್ ದೇವರ ಸಾಕಾರ ರೂಪ. ಗುರುಗಳ ದರ್ಶನ ಪಡೆಯುವುದು ಮೂವತ್ತು ಕೋಟಿ ದೇವರುಗಳ ದರ್ಶನಕ್ಕೆ ಸಮನಾದದ್ದಾಗಿದೆ ಎಂದು ಹೇಳಿದರು.

    ನಾವು ಮಾಡುವ ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ಆತ್ಮಶುದ್ಧಿಯಾದ ಕಾಯಕದಿಂದ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆ. ಮನಸಿನ ಶಾಂತಿಗಾಗಿ ಎಲ್ಲೋ ಹೋಗುವುದಕ್ಕಿಂತ ಶಿವಯೋಗಿಗಳು ಲಿಂಗೈಕ್ಯರಾಗುವ ಮಠಕ್ಕೆ ಬಂದು ಭಕ್ತಿ ಮಾಡಬೇಕು. ಗುರು ಸ್ಮರಣೆಯಿಂದ ಮಾತ್ರ ಜೀವನ ಪಾವನಗೊಳಿಸಲು ಸಾಧ್ಯವಿದೆ ಎಂದರು.

    ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾವು ಮಾಡುವ ಕಾರ್ಯದಲ್ಲಿ ಶ್ರದೆ ಇರಬೇಕು. ಕಾಯಾ, ವಾಚಾ, ಮನಸಿನಿಂದ ಮಾಡಿದ ಎಲ್ಲ ಕಾರ್ಯಗಳು ನಮಗೆ ಯಾವತ್ತೂ ಫಲ ತಂದುಕೊಡುತ್ತವೆ ಎಂದರು. ವೇದಿಕೆಯಲ್ಲಿ ವೀರಶೈವ ಸಮಾಜದ ಕೆ.ಎಸ್. ಶೆಟ್ಟರ್, ಶಿವಯೋಗಿ ಹಂದ್ರಾಳ, ಬಸಲಿಂಗಯ್ಯ ಹಿರೇಮಠ ಗಬಸಾವಳಗಿ, ಬಸವರಾಜ ಚಕ್ರಸಾಲಿ, ಶಿವಾನಂದ ಶಿವನಂಚಿ, ಅಶೋಕ ಗೌಡ್ರು ಬೊಮ್ಮನಳ್ಳಿ, ಇತರರು ಉಪಸ್ಥಿತರಿದ್ದರು.

    ಬಣ್ಣದ ಮಠದ ವ್ಯವಸ್ಥಾಪಕರಾದ ಎಸ್. ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಶ್ರೀ ಗುರುಸಿದ್ಧೇಶ್ವರ ಮಹಿಳಾ ಮಂಡಳದಿಂದ ಭಜನೆ, ಮಹಿಳಾ ಮಂಡಳದ ನೂತನ ಪದಾದಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಗಳ ಸಾನಿದ್ಯದಲ್ಲಿ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts