More

    ಅತಿಯಾದ ಮಳೆ 1170 ಹೆಕ್ಟೇರ್ ಬೆಳೆ ನಾಶ

    ಗುಳೇದಗುಡ್ಡ: ಪಟ್ಟಣ ಸೇರಿ ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ 1170 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಸಜ್ಜೆ, ಸೂರ್ಯಕಾಂತಿ ಮತ್ತಿತತರ ಬೆಳೆಗಳು ಹಾಳಾಗಿವೆ.

    ಬೆಳೆಗಳು ಉತ್ತಮವಾಗಿ ಬೆಳೆದಿದ್ದು ನೋಡಿ ಲಾಕ್‌ಡೌನ್‌ನಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ, ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆ ಅದನ್ನೆಲ್ಲವನ್ನೂ ಹಾಳು ಮಾಡಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಎಲ್ಲವೂ ನೆಲಕಚ್ಚಿದ್ದು, ಅತಿವೃಷ್ಟಿಯಿಂದ ರೈತರು ನಲುಗಿದ್ದಾರೆ. ಹೊಲದಲ್ಲಿದ್ದ ಬೆಳೆಯನ್ನು ಕಟಾವು ಮಾಡಲೂ ಸಮಯ ನೀಡದ ಮಳೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುವಂತಾಗಿದೆ.

    488 ಹೆಕ್ಟೇರ್ ಈರುಳ್ಳಿ ಹಾಳು
    ಹಂಗರಗಿ ಗ್ರಾಮದಲ್ಲಿ 80 ಹೆಕ್ಟೇರ್, ಕಟಗೇರಿ 83, ಕೊಂಕಣಕೊಪ್ಪ 35, ಖಾಜಿಬೂದಿಹಾಳ 35, ಅಲ್ಲೂರ 15, ಹಳದೂರ 15, ಕಟಗಿನಹಳ್ಳಿ 19, ಕೊಟ್ನಳ್ಳಿ 20, ಲಾಯದಗುಂದಿ 15 ಹೀಗೆ 488 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣವಾಗಿ ಹಾಳಾಗಿದೆ.

    ಹರದೊಳ್ಳಿ 19, ಕೆಲವಡಿ 25, ತಿಮ್ಮಸಾಗರ 25, ಹಾನಾಪುರ ಎಸ್.ಪಿ. 35 ಹೀಗೆ 241 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸಜ್ಜೆ ನೆಲಕಚ್ಚಿ ಹೋಗಿದೆ. ಕೆಲವಡಿ, ಹಂಸನೂರ, ತಿಮ್ಮಸಾಗರ ಕೋಟಿಕಲ್ಲ, ತೆಗ್ಗಿ, ಹಂಗರಗಿ, ತೊಗುಣಶಿ, ಕಟಗೇರಿ, ಕೊಂಕಣಕೊಪ್ಪ, ಇಂಜಿನವಾರಿ ಬೂದಿನಗಡ, ಹುಲಸಗೇರಿ, ಲಕ್ಕಸಕೊಪ್ಪ, ಪಾದನಕಟ್ಟಿ ಸೇರಿದಂತೆ ತಾಲೂಕಿನ 35 ಹಳ್ಳಿಗಳಲ್ಲಿ 175 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮಳೆಗೆ ಆಹುತಿಯಾಗಿದೆ.

    168 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಸೂರ್ಯಕಾಂತಿ, 59 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೈಬ್ರೀಡ್ ಜೋಳ, 10 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, 29 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಇನ್ನಿತರ ಬೆಳೆಗಳು ಭಾರಿ ಮಳೆಯಿಂದ ಹಾಳಾಗಿವೆ.

    ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಗುಳೇದಗುಡ್ಡ ತಾಲೂಕಿನಲ್ಲಿ ಒಟ್ಟು 1170 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿ ಇನ್ನಿತರ ಬೆಳೆಗಳು ಹಾಳಾಗಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ.
    ಆನಂದ ಗೌಡರ, ಕೃಷಿ ಅಧಿಕಾರಿಗಳು, ಗುಳೇದಗುಡ್ಡ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts