More

    ಲೋಕಸಭೆ ಅಖಾಡದಲ್ಲಿ ಗ್ಯಾರಂಟಿ ಕುಸ್ತಿ; ಎರಡೂ ಪಕ್ಷಗಳ ತಂತ್ರಗಾರಿಕೆ

    ಮೃತ್ಯುಂಜಯ ಕಪಗಲ್ ಬೆಂಗಳೂರು
    ಮೊದಲ ಹಂತದ ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟವಾದ ನಂತರ ಲೋಕಸಭೆ ಚುನಾವಣೆ ಸಮರ ಮತ್ತೊಂದು ತಿರುವು ಪಡೆದಿದೆ. ‘ಗ್ಯಾರಂಟಿ’ ಕುಸ್ತಿಯು ಅಖಾಡವನ್ನು ರೋಚಕ, ಕೌತುಕಮಯವಾಗಿಸಲಿದೆ.

    ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿಮತ್ತು ಯುವನಿಧಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ರಾಜ್ಯ ಕಾಂಗ್ರೆಸ್ ಹೆಮ್ಮೆಯಿಂದ ಬೀಗುತ್ತಿದೆ. ಗ್ಯಾರಂಟಿಗಳಿಗೆ 2023-24ರಲ್ಲಿ ಬರೋಬ್ಬರಿಗೆ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿದೆ. ಮುಂದಿನ ಆರ್ಥಿಕ ವರ್ಷ (2024-25)ಕ್ಕೆ 52 ಸಾವಿರ ಕೋಟಿ ರೂ. ಕಾದಿರಿಸಿದೆ. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಐದು ಗ್ಯಾರಂಟಿಗಳು ಪ್ರತಿ ಕುಟುಂಬಕ್ಕೆ ವಾರ್ಷಿಕ 50 ರಿಂದ 55 ಸಾವಿರ ರೂ. ಆದಾಯ, ಸುಸ್ಥಿರ ಬದುಕು ಕಟ್ಟಿಕೊಳ್ಳಲು ಆಸರೆಯಾಗಿವೆ ಎಂದು ಕಾಂಗ್ರೆಸ್ ಬಲವಾಗಿ ಸಮರ್ಥಿಸಿಕೊಂಡಿದೆ.

    ರಾಜ್ಯದಲ್ಲಿ ಯಶಸ್ವಿ ಅನುಷ್ಠಾನದ ಸ್ಪೂರ್ತಿ ಪಡೆದ ಕೈ ರಾಷ್ಟ್ರೀಯ ನಾಯಕರು ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಘೋಷಿಸಿದರು. ಆದರೆ ತೆಲಂಗಾಣ ಹೊರತುಪಡಿಸಿ ಬೇರೆ ಕಡೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೂ ಕಾಂಗ್ರೆಸ್ ‘ಕೈ’ಕಟ್ಟಿ ಕುಳಿತಿಲ್ಲ. ಮುಂಬರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವು ಗ್ಯಾರಂಟಿಗಳ ಭರವಸೆಯಿತ್ತಿದೆ. ಲೋಕಸಭೆ ಚುನಾವಣೆಗೂ ಇವೇ ಗ್ಯಾರಂಟಿಗಳ ಅಸ್ತ್ರ ಪ್ರಯೋಗಿಸಲು ಉತ್ಸುಕವಾಗಿದೆ. ಇದರಿಂದಾಗಿ ಮೋದಿ ಕಾ ಗ್ಯಾರಂಟಿ ಮತ್ತು ರಾಹುಲ್ ಗಾಂಧಿ ‘ನ್ಯಾಯ’ ಜಿದ್ದಾಜಿದ್ದಿ ಕಣವಾಗಿ ಮಾರ್ಪಡಲಿದೆ. ಸ್ವಚ್ಛ, ದಕ್ಷ, ಸುಸ್ಥಿರ, ಪರಿವಾರವಾದ, ಭ್ರಷ್ಟಾಚಾರಮುಕ್ತ ಸರ್ಕಾರ ಮೋದಿ ಕಾ ಗ್ಯಾರಂಟಿ ಎಂದು ಬಿಜೆಪಿ ಸಾರುತ್ತಿದೆ.ಸಾಮಾಜಿಕ ನ್ಯಾಯ, ಸಂಪತ್ತಿನ ಸಮಾನ ಹಂಚಿಕೆ, ಸರ್ವ ಜನಾಂಗದ ಶಾಂತಿ ಬಯಸುವ, ದ್ವೇಷಮುಕ್ತ ಆಡಳಿತವೇ ರಾಹುಲ್ ಗಾಂಧಿ ‘ನ್ಯಾಯ’ ಪರ ನಿಲುವು ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ.

    ಫಸಲಿಗೆ ‘ಕೈ’: ಆಂತರಿಕ ಸಮೀಕ್ಷಾ ವರದಿಗಳು ಗ್ಯಾರಂಟಿಗಳು ಜನರಿಗೆ ತಲುಪಿ, ಮೆಚ್ಚುಗೆ ಗಿಟ್ಟಿಸಿಕೊಂಡಿರುವುದು ಖಚಿತಪಡಿಸಿಕೊಂಡಿದೆ. ಮೊದಲು ನಾಲ್ಕು ಯೋಜನೆಗಳು ಉತ್ತಮ ಮತ ಫಸಲು ನೀಡಲಿದೆ ಎನ್ನುವುದು ಕಾಂಗ್ರೆಸ್ ಎಣಿಕೆಯಾಗಿದೆ. ಲೋಕಸಭೆ ಚುನಾವಣೆಗೆ ಮೊದಲ ಫಸಲು ಕಟಾವು ಮಾಡಿ ಮತಪೆಟ್ಟಿಗೆ ಭರ್ತಿ ಮಾಡಲು ವ್ಯೂಹಾತ್ಮಕ ತಂತ್ರಗಾರಿಕೆ ರೂಪಿಸಿದೆ.

    ಲಾಭಾರ್ಥಿಗಳತ್ತ ಕಣ್ಣು: ಯುವಜನರಿಗೆ ಉದ್ಯೋಗ ನೀಡಿದ ರೋಜ್​ಗಾರ್ ಮೇಳ, ಸ್ವಾವಲಂಬಿ ಜೀವನಕ್ಕೆ ನೆರವಾದ ಮುದ್ರಾ ಸೇರಿ ಕೇಂದ್ರ ಸರ್ಕಾರದ 178 ಜನಪರ ಯೋಜನೆಗಳು ವರದಾನವಾಗಲಿವೆ ಎಂದು ಬಿಜೆಪಿ ಆಶಾಭಾವ ಹೊಂದಿದೆ. ಈ ಯೋಜನೆಗಳ ಪೈಕಿ ಒಂದಿಲ್ಲೊಂದು ಯೋಜನೆ ಪ್ರತಿ ಕುಟುಂಬವನ್ನು ತಲುಪಿದ ಮಾಹಿತಿ ಕಲೆ ಹಾಕಿದೆ. ಇದೇ ನೆಲೆಯ ಮೇಲೆ ಲಾಭಾರ್ಥಿಗಳತ್ತ ಕಣ್ಣು ನೆಟ್ಟಿದ್ದು, ಮೋದಿ ಪರ ಅಲೆಯನ್ನು ಮತಗಳಾಗಿ ಪರಿವರ್ತಿಸಲು ಸಂಘಟನಾ ಶಕ್ತಿ ಬಳಸಿಕೊಳ್ಳುತ್ತಿದೆ.

    ತರಹೇವಾರಿ ತಂತ್ರ: ಲೋಕ ಸಂಗ್ರಾಮದಲ್ಲಿ ಮತ ಬೇಟೆಗಾಗಿ ಕಾಂಗ್ರೆಸ್ ತರಹೇವಾರಿ ತಂತ್ರೋಪಾಯ ಹೆಣೆದಿದ್ದು, ಸಾಮರ್ಥ್ಯಕ್ಕೆ ಅನುಸಾರ ತಂತ್ರಜ್ಞಾನದ ಸ್ಪರ್ಶ ನೀಡಿದೆ. ಜಿಲ್ಲಾ, ತಾಲೂಕುಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳು ವೃತ್ತಿಪರ ಎನ್​ಜಿಒಗಳ ರೀತಿಯಲ್ಲಿ ಕಾರ್ಯತತ್ಪರವಾಗಿವೆ. ಪ್ರತಿ ಬೂತ್​ಗೆ ಒಬ್ಬ ಉಸ್ತುವಾರಿ ನೇಮಿಸಿ ಪ್ರತಿ ಮನೆಗೆ ಭೇಟಿ ನೀಡಿ ಗ್ಯಾರಂಟಿ ತಲುಪಿದ್ದನ್ನು ಖಾತರಿಪಡಿಸಿಕೊಂಡು ಕಾಂಗ್ರೆಸ್​ನ ಕೊಡುಗೆಯಿದು ಎಂದು ಹೇಳುತ್ತಿದೆ. ನಿಖರತೆಗಾಗಿ ದತ್ತಾಂಶಗಳನ್ನು ಸಂಗ್ರಹಿಸುತ್ತಿದೆ. ಜತೆಗೆ ಕರಪತ್ರ ಹಂಚಿಕೆ, ಓಣಿಗಳಲ್ಲಿ ಕಾಲ್ನಡಿಗೆ ಮೂಲಕ ಪ್ರಚಾರ ಪೂರ್ವ ಕಾಂಗ್ರೆಸ್ ಪರ ಅಲೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಪಕ್ಷದ ಜಾಲತಾಣ, ಪ್ರತ್ಯೇಕ ಗುಂಪುಗಳನ್ನು ರಚಿಸಿ ಸಾಮಾಜಿಕ ತಾಲತಾಣದ ಮುಖೇನ ವಿವಿಧ ವಿಷಯ ಹಂಚಿಕೊಂಡು ಗ್ಯಾರಂಟಿಗಳ ಪರ ಅಭಿಪ್ರಾಯಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತಿದೆ.

    ಫಲಾನುಭವಿ ಸಂಪರ್ಕ: ಕ್ಷೇತ್ರ ಕಾರ್ಯಚಟುವಟಿಕೆಗಳ ಹಿಮ್ಮಾಹಿತಿ, ವಾಸ್ತವಿಕ ದತ್ತಾಂಶಗಳನ್ನು ನಮೋ ಆಪ್, ಸರಳ್ ಆಪ್​ಗಳ ಮುಖೇನ ರವಾನಿಸುವುದರಲ್ಲಿ ಬಿಜೆಪಿ ಪಳಗಿದೆ. ಬೂತ್​ವುಟ್ಟದಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಫಲಾನುಭವಿಯನ್ನು ಭೇಟಿಯಾಗಿ ಐದು ಪ್ರಶ್ನೆಗಳಿಗೆ ಉತ್ತರ ಪಡೆದು, ಮೊಬೈಲ್ ನಂಬರ್, ಸ್ಥಳದ ಫೋಟೋ ಸಹಿತ ಅಪ್​ಲೋಡ್ ಮಾಡುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರು ನಿಮ್ಮ ಬಳಿಗೆ ಕಳುಹಿಸಿದ್ದಾರೆ. ನಿಮಗೆ ನಮಸ್ಕಾರ ತಿಳಿಸಲು ಹೇಳಿದ್ದಾರೆ ಎನ್ನುವ ಮೂಲಕ ಆತ್ಮೀಯ ಬಂಧ ಬೆಳೆಸಲು ಕಮಲಪಡೆ ಮುಂದಾಗಿದೆ.

    ಮೋದಿ ಗ್ಯಾರಂಟಿ

    • 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ
    • ಸವೋದಯ ಆಶಯ, ಅಂತ್ಯೋದಯ ಪರಿಕಲ್ಪನೆಗೆ ಒತ್ತು
    • ಸಂಕಲ್ಪ ಪತ್ರ (ಚುನಾವಣಾ ಪ್ರಣಾಳಿಕೆ)ದ ಸಿದ್ಧತೆಗಾಗಿ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ‘ಮೋದಿ ಕಾ ಗ್ಯಾರಂಟಿ ವಾಹನಗಳ ಸಂಚಾರ, ದೇಶದ ಜನ ಸಾಮಾನ್ಯರಿಂದ ಹಿಡಿದು ಎಲ್ಲ ಕ್ಷೇತ್ರ-ವರ್ಗಗಳ ಒಂದು ಕೋಟಿ ಜನರ ಅಭಿಪ್ರಾಯ ಕ್ರೋಡೀ ಕರಣ ಗುರಿ, ಲೋಕಸಭೆ ಕ್ಷೇತ್ರ, ರಾಜ್ಯ, ರಾಷ್ಟ್ರಮಟ್ಟದ ಅಭಿವೃದ್ಧಿ ಆದ್ಯತೆಗಳ ಸಂಕಲ್ಪ ಪತ್ರ ತಯಾರಿ ಉದ್ದೇಶ.

    ರಾಹುಲ್ ಗಾಂಧಿ ನ್ಯಾಯ

    • ಪಂಚ ನ್ಯಾಯ, 25 ಗ್ಯಾರಂಟಿಗಳ ಚುನಾವಣಾ ಪ್ರಣಾಳಿಕೆ ಪ್ರಕಟ
    • ಸಹಭಾಗಿತ್ವ, ರೈತರು, ಕಾರ್ವಿುಕರು, ಯುವ ಮತ್ತು ನಾರಿ ನ್ಯಾಯ
    • ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ, 30 ಲಕ್ಷ ಸರ್ಕಾರಿ ನೌಕರಿ ಭರ್ತಿ, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ. ನೆರವು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ಥಾನಮಾನ, ನರೇಗಾ ಸೇರಿ ಕಾರ್ವಿುಕರಿಗೆ ದಿನಕ್ಕೆ 400 ರೂ. ರಾಷ್ಟ್ರೀಯ ಕನಿಷ್ಠ ವೇತನ ಸೇರಿ ಐದು ‘ನ್ಯಾಯ’ಗಳಡಿ 25 ಖಾತರಿಗಳು.

    ಜಾತಿ-ಮತ, ಪಂಥ, ಬಡವ-ಬಲ್ಲಿದನೆಂಬ ಭೇದವಿಲ್ಲದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಯೋಜನೆಗಳ ಪ್ರಯೋಜನ ಪಡೆದವರ ಬಳಿಗೆ ತೆರಳಲು ಸನ್ನದ್ಧರಾಗಿದ್ದೇವೆ. ಈ ಬಾರಿ ಲೋಕಸಭೆ ಚುನಾವಣೆಗೆ ಗ್ಯಾರಂಟಿಗಳು ವರದಾನವಾಗುವ ವಿಶ್ವಾಸವಿದೆ.

    | ಎ.ವಸಂತಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷ

    ಜ್ವರ ಬಂದರೆ ವಾಸಿಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಕ್ಯಾನ್ಸರ್ ನಾಲ್ಕನೇ ಹಂತ ದಾಟಿದ ನಂತರ ಗೊತ್ತಾಗುತ್ತದೆ. ಅಂತೆಯೇ ಗ್ಯಾರಂಟಿಗಳಿಂದಾಗುವ ಆರ್ಥಿಕತೆ ದುಷ್ಪರಿಣಾಮ ಕೂಡ ತಕ್ಷಣಕ್ಕೆ ತಿಳಿಯುವುದಿಲ್ಲ. ಚುನಾವಣೆ ಕಾಲಕ್ಕೆ ಗ್ಯಾರಂಟಿಗಳಿಂದ ಬಾಧಿತ ವಲಯ, ಜನರ ಬಳಿಗೆ ತೆರಳಿ ವಿವರಿಸಲಿದ್ದೇವೆ.

    | ಪಿ.ರಾಜೀವ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts