More

    ಖಾತ್ರಿ ಕೂಲಿ ಏರಿಕೆ, ಕೃಷಿಗೆ ಕಾರ್ಮಿಕರ ಕೊರತೆ

    ಬೆಳಗಾವಿ: ಕೋವಿಡ್-19, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಜೀವನ ನಿರ್ವಹಣೆ ತೊಡಕು ಇನ್ನಿತರ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಿರುವ ಸರ್ಕಾರ, ನರೇಗಾ ಕೂಲಿಯನ್ನು 275 ರಿಂದ 289 ರೂ.ಗೆ ಏರಿಸಿದೆ. ಇದು ಖಾತ್ರಿ ಕಾರ್ಮಿಕರಿಗೆ ಸಂತಸ ತಂದಿದ್ದರೆ, ಕೃಷಿ ಚಟುವಟಿಕೆಗೆ ಕೂಲಿ ಕೆಲಸಗಾರರು ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಹಳ್ಳಿಗಳಲ್ಲಿ ನಿರುದ್ಯೋಗ ನಿವಾರಣೆ, ಗುಳೆ ತಪ್ಪಿಸಲು ಹಾಗೂ ಎಲ್ಲ ಪ್ರದೇಶಗಳಲ್ಲೂ ಉದ್ಯೋಗ ಕಲ್ಪಿಸಲು ನರೇಗಾ ಕೂಲಿಯನ್ನು ಏರಿಸಿದೆ. ಹೀಗಾಗಿ ದಿನವೂ ರೈತರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕೆಲಸಗಾರರು ಇದೀಗ ರೈತರ ಮನೆಯತ್ತ ಸುಳಿಯುತ್ತಿಲ್ಲ.

    ವಾರಕ್ಕೊಮ್ಮೆ ವೇತನ ಜಮಾ: ಗ್ರಾಮೀಣ ಭಾಗದಲ್ಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಸರ್ಕಾರವು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಹಳ್ಳಿಗಳಲ್ಲಿ ಬದು ನಿರ್ಮಾಣ, ಸಮಗ್ರ ಕೆರೆ ನಿರ್ಮಾಣ, ಹೂಳೆತ್ತುವುದು, ಬಚ್ಚಲ ಗುಂಡಿ, ಆಟದ ಮೈದಾನ, ಬಾವಿಗಳ ಪುನಶ್ಚೇತನ, ಕೃಷಿ ಅರಣ್ಯೀಕರಣ ಹೀಗೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ಕಾರ್ಮಿಕರಿಗೆ ದಿನವೂ ಕೆಲಸ ಸಿಗುತ್ತಿದೆ. ಅಲ್ಲದೆ, ಪ್ರತಿ ವಾರಕ್ಕೊಮ್ಮೆ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಜಮಾ ಆಗುತ್ತಲಿದೆ.

    ಕೃಷಿ ಕೆಲಸದತ್ತ ನಿರಾಸಕ್ತಿ: ಹಿಂಗಾರು ಹಂಗಾಮಿನ ಬೆಳೆಗಳ ಒಕ್ಕಣೆ, ಕಬ್ಬು ಕಟಾವು ಸೇರಿದಂತೆ ಇನ್ನಿತರ ಕೃಷಿ ಕೆಲಸ ಮಾಡಿಸುವುದು ರೈತಾಪಿ ವರ್ಗಕ್ಕೆ ಇನ್ನೂ ಬಾಕಿ ಇದೆ. ಆದರೆ, ಈ ಕಾರ್ಯ ಮಾಡಿಸಲು ಸರಿಯಾಗಿ ಕೂಲಿ ಕೆಲಸಗಾರರು ಬರುತ್ತಿಲ್ಲ. ಅಲ್ಲದೆ, ರೈತರು ನೀಡುವ ಕೂಲಿ ದರ ಕಡಿಮೆಯಾಗಿದ್ದು, ಅದೂ ಸಹ ಸಮಯಕ್ಕೆ ಸರಿಯಾಗಿ ಕೈ ಸೇರುವುದಿಲ್ಲ ಎಂಬ ಕಾರಣಕ್ಕೆ ಬಹುತೇಕ ಕೂಲಿಕಾರರು ಕೃಷಿ ಕೆಲಸದತ್ತ ನಿರಾಸಕ್ತರಾಗಿದ್ದು, ‘‘ಖಾತ್ರಿ’ ಕೆಲಸದತ್ತ ಒಲವು ತೋರತೊಡಗಿದ್ದಾರೆ.

    ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು

    ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡುವ ಅನ್ನದಾತರು ಇದೀಗ ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ. ಸರ್ಕಾರವು ನರೇಗಾ ಕೂಲಿ ದರ ಹೆಚ್ಚಳ ಮಾಡಿದ್ದರಿಂದ ಕೃಷಿ ಕೆಲಸಕ್ಕೆ ಕೂಲಿಕಾರರು ಸಿಗುತ್ತಿಲ್ಲ. ಸದ್ಯ ಕಾರ್ಮಿಕರಿಗೆ ಕೆಲಸದ ಆಧಾರದ ಮೇಲೆ 150 ರಿಂದ 200 ರೂ. ವರೆಗೆ ಕೂಲಿ ನೀಡುತ್ತಿದ್ದೇವೆ. ಆದರೆ, ಮಹಿಳಾ ಮತ್ತು ಪುರುಷ ಕಾರ್ಮಿಕರು ನರೇಗಾ ಕೂಲಿ ಮಾದರಿಯಲ್ಲಿ ಕೃಷಿ ಕೆಲಸಕ್ಕೂ ದಿನಗೂಲಿ 300 ರೂ. ಕೊಡುವಂತೆ ಕೇಳುತ್ತಿದ್ದಾರೆ. ಒಬ್ಬ ಕಾರ್ಮಿಕನಿಗೆ ದಿನಕ್ಕೆ 300 ರೂ. ನೀಡುವುದು ನಮಗೆ ಕಷ್ಟವಾಗಲಿದೆ. ಕೃಷಿ ಕಾರ್ಯ ಮಾಡಿಸುವುದು ಹೇಗೆ ಎಂದು ದಿಕ್ಕು ತೋಚದಾಗಿದೆ ಎಂದು ರೈತರಾದ ವೆಂಕಪ್ಪ ಪಾಟೀಲ, ನಿಂಗಪ್ಪ ಹೊರಟ್ಟಿ, ಸಂಗಪ್ಪ ಬಡಕಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಹಳ್ಳಿಗಳಲ್ಲಿ ಉದ್ಯೋಗ ಇಲ್ಲವೆಂದು ಅಲೆದಾಡದಂತೆ ಹಾಗೂ ಗುಳೆ ಹೋಗಬಾರದೆಂಬ ಉದ್ದೇಶದಿಂದಲೇ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಅನೇಕ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಇದೀಗ ನರೇಗಾ ಕೂಲಿಯನ್ನು 275 ರಿಂದ 289 ರೂ.ಗೆ ಸರ್ಕಾರ ಏರಿಕೆ ಮಾಡಿದ್ದು, 2021ರ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು.
    | ಎಚ್.ವಿ. ದರ್ಶನ. ಸಿಇಒ, ಜಿಪಂ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts