More

    ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ; ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ಮೇಲೆ ದಾಳಿ ಮತ್ತು ಭಾರತ ಕೈಗೊಂಡ ಪ್ರತಿದಾಳಿಯಂಥ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ವರವಾಗಿದ್ದವು. ಮೋದಿ ಅವರು ನೀಡಿದ್ದ ಕಪ್ಪು ಹಣ ವಾಪಸ್ ತರುವುದು, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ರೂ. 15 ಲಕ್ಷ ಹಣ ಹಾಕುವುದು, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಯ ಅಚ್ಛೇ ದಿನ್ ಭರವಸೆಗಳು ಈಡೇರಿಲ್ಲ. ಆದರೆ, ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ ಎಂದರು.

    ಬಿಜೆಪಿಯಿಂದ ಬೆಲೆ ಏರಿಕೆ

    2013-18ರ ಅವಧಿಯಲ್ಲಿ ನಾವು ಕೈಗೊಂಡ ನೀರಾವರಿ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಾಗಿದ್ದು, ಇಂದು ರಾಜ್ಯಾದ್ಯಂತ ಭೀಕರ ಬರವಿದ್ದರೂ ಜಿಲ್ಲೆಯಲ್ಲಿ ಅಷ್ಟೊಂದು ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ತೈಲಬೆಲೆ ಕೇವಲ 10 ಪೈಸೆ ಹೆಚ್ಚಳವಾದರೂ ಬಿಜೆಪಿಯ ಸ್ಮತಿ ಇರಾನಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ನಾನಾ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಈಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ರೂ. 50 ಮತ್ತು ಅಡುಗೆ ಅನಿಲ ದರ ರೂ. 800 ರಷ್ಟು ಹೆಚ್ಚಾದರೂ ಅವರು ಮೌನ ವಹಿಸಿದ್ದಾರೆ. ಇವು ಬಿಜೆಪಿ ದೇಶದ ಜನರಿಗೆ ನೀಡಿರುವ ಅಚ್ಛೇ ದಿನ್ ಆಗಿವೆ ಎಂದರು.

    ಚುನಾವಣೆ ಬಾಂಡ್

    ಪ್ರಾಮಾಣಿಕರೆಂದು ಹೇಳುತ್ತಿದ್ದವರ ಮುಖವಾಡ ಚುನಾವಣೆ ಬಾಂಡ್ ಖರೀದಿಸಿದವರ ಹೆಸರು ಬಹಿರಂಗವಾದ ನಂತರ ಕಳಚಿ ಬಿದ್ದಿದೆ. ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದವರು ಚುನಾವಣೆ ಬಾಂಡ್ ಖರೀದಿ ಮಾಡಿರುವುದು ಈ ಸರ್ಕಾರ ಭ್ರಷ್ಟಾಚಾರಕ್ಕೆ ಹೊಸ ಭಾಷೆ ಬರೆದಿರುವುದಕ್ಕೆ ಸಾಕ್ಷಿಯಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಸ್ಥಾಪಿಸಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಈಗಿನ ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಇಬ್ಬರು ಮಾರಾಟಗಾರರು ಮತ್ತು ಇಬ್ಬರು ಖರೀದಿಗಾರರು ಈ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.

    ಗೆಲ್ಲುವುದು ಗ್ಯಾರಂಟಿ

    ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಗೆಲ್ಲಲಿವೆ. ಜಿಲ್ಲೆಯಲ್ಲಿ ಐದು ಲಕ್ಷ ಮಹಿಳೆಯರು ಗೃಹ ಲಕ್ಷ್ಮಿಯೋಜನೆ ಲಾಭ ಪಡೆದಿದ್ದಾರೆ. ಜನರ ಮನ ಗೆದ್ದಿರುವ ಈ ಯೋಜನೆಯಿಂದ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದರು.

    ರಮೇಶ ಜಿಗಜಿಣಗಿ ಕಳೆದ 30 ವರ್ಷಗಳಿಂದ ಸಂಸದರಾಗಿ ಜಿಲ್ಲೆ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಎಂದೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಒಂದೂ ಕಾಮಗಾರಿ ಮಾಡಿಲ್ಲ. ಜನರನ್ನು ಭೇಟಿ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿಲ್ಲ. ವಂದೇ ಭಾರತ ರೈಲು ಬಿಡಿಸಿಲ್ಲ. ನನಗೆ ಮತ ಹಾಕಿದರೆ ಲೋಕಸಭೆಯಲ್ಲಿ ವಿಜಯಪುರ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

    ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಇಂಥ ಬರದ ಸಮಯದಲ್ಲಿಯೂ ಮಮದಾಪುರ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದ್ದು, ರೈತರು ಈಗಲೂ ಕಬ್ಬು ಬೆಳೆಯಲು ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಕಾರಣವಾಗಿವೆ ಎಂದರು.

    ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಬಸವರಾಜ ದೇಸಾಯಿ, ಮುಖಂಡರಾದ ಮೌಲಾಸಾಬ ಜಹಾಗಿರದಾರ, ಎಂ.ಕೆ. ಕುಲಕರ್ಣಿ, ಕುಮಾರ ದೇಸಾಯಿ, ರಫೀಕ ಖಾನೆ, ಕೃಷ್ಣಾಜಿ ಕುಲಕರ್ಣಿ, ಕಲ್ಲನಗೌಡ ಪಾಟೀಲ, ವಿ.ಎಚ್. ಬಿದರಿ, ಈರಣ್ಣ ಕೊಪ್ಪದ, ಆಶಾ ಕಟ್ಟಿಮನಿ, ಸುಮಿತ್ರಾ ಶಿರಬೂರ, ರೇಶ್ಮಾ ಮಲ್ಲಿಕಾರ್ಜುನ ಗಂಗೂರ, ಸುಖದೇವ ಕಟ್ಟಿಮನಿ, ರಮೇಶ ಜೈನಾಪೂರ, ಬಸವನಗೌಡ ಪಾಟೀಲ, ಕೌಸರ ನಿಯಾಜ ಅತ್ತಾರ, ಶೇಖು ಪೂಜಾರಿ, ಎಸ್.ಕೆ. ನಿಡೋಣಿ, ಬಸವರಾಜ ಮಲಕಗೊಂಡ, ಮಹಾದೇವ ಕಂತಿ, ಎಂ. ಎಂ. ಬಾಗವಾನ ಮತ್ತಿತರರಿದ್ದರು. ಅಮರೇಶ ಹಾದಿಮನಿ ನಿರೂಪಿಸಿದರು.

    ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ಹಾಕಿದರೆ ಅದು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಎಸ್. ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ ಮತ್ತು ಎಂ.ಬಿ. ಪಾಟೀಲರಿಗೆ ಹಾಕಿದಂತೆ. ಅವರಿಗೆ ಮತ ಹಾಕಿ ನಮ್ಮ ಕೈ ಬಲಪಡಿಸಿ. ಆ ಮೂಲಕ ಭಾವೈಕ್ಯತೆ ಕೆಡಿಸಿ ಜನರ ಭಾವನೆ ಹಾಳು ಮಾಡುವವರಿಗೆ ಪಾಠ ಕಲಿಸಿ.
    -ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts