More

    ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ ಬೆಳವಣಿಗೆ; ಗ್ಯಾರಂಟಿ ಅನುಷ್ಠಾನಕ್ಕೆ ಶ್ಲಾಘನೆ

    ಬೆಂಗಳೂರು: ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ರಾಜ್ಯ ಸ್ವಂತ ತೆರಿಗೆ ಆದಾಯವು ಶೇಕಡ 15ರಷ್ಟು ಬೆಳವಣಿಗೆ ಕಂಡಿದೆ. ಆದಾಗ್ಯೂ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ನೋಂದಣಿಯೇತರ ಆದಾಯ, ತೆರಿಗೆಯೇತರ ರಾಜಸ್ವ ಸ್ವೀಕೃತಿಗಳ ಮೂಲಕ ಹೆಚ್ಚು ಸಂಪನ್ಮೂಲ ಕ್ರೋಡೀಕರಿಸಲು ಅವಕಾಶಗಳಿದ್ದು, ಅವುಗಳನ್ನು ಗಂಭೀರವಾಗಿ ಪರಿಶೀಲನೆ ಮಾಡುವಂತೆ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ವಿಧಾನಮಂಡಲದಲ್ಲಿ ಗುರುವಾರ ಮಂಡನೆಯಾದ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯಲ್ಲಿ ಈ ಅಂಶವನ್ನು ಒತ್ತಿ ಹೇಳಲಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಈ ವರದಿಯನ್ನು ಮಂಡಿಸಿದರು. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದಲ್ಲಿ ರಾಜ್ಯ ಸ್ವಂತ ತೆರಿಗೆ ಆದಾಯ ಶೇ.15 ರಷ್ಟು ಬೆಳವಣಿಗೆಯಾಗಿರುವುದನ್ನು ವರದಿ ಉಲ್ಲೇಖಿಸಿದೆ. ಜಿಎಸ್​ಟಿ ಸಂಗ್ರಹಣೆ ಶೇ.18 ರಷ್ಟು ಬೆಳವಣಿಗೆ ಸಾಧಿಸಿದೆ. ಕೇಂದ್ರ ಜಿಎಸ್​ಟಿ ಸಂಗ್ರಹಣೆ ಶೇ.8 ರಷ್ಟಿದ್ದರೆ, ರಾಜ್ಯ ಜಿಎಸ್​ಟಿ ಬೆಳವಣಿಗೆ ಉತ್ತಮವಾಗಿದೆ.

    ತೆರಿಗೆ ಮೂಲದ ರಾಜಸ್ವ ಸ್ವೀಕೃತಿಯ ಜತೆಗೆ ತೆರಿಗೆಯೇತರ ರಾಜಸ್ವ ಸ್ವೀಕೃತಿಗಳ ಬಗ್ಗೆಯೂ ವರದಿ ಕೆಲವು ಶಿಫಾರಸುಗಳನ್ನು ನೀಡಿದೆ. ಗಣಿಗಾರಿಕೆ ಗುತ್ತಿಗೆದಾರರಿಗೆ ಇ-ಹರಾಜು ನಂತರದ ಪ್ರಕ್ರಿಯೆ ಸುಗಮಗೊಳಿಸಬೇಕು, ಬಿಲ್ಡಿಂಗ್ ಸ್ಟೋನ್, ಗ್ರಾನೈಟ್ ಮುಂತಾದ ಉಪಖನಿಜಗಳ ಗಣಿಗಾರಿಕೆಯ ಮೌಲ್ಯಮಾಪನ ಮಾಡಲು ಡ್ರೋನ್/ಉಪಗ್ರಹ ದತ್ತಾಂಶಗಳನ್ನು ಉಪಯೋಸಬೇಕು, ಸಾಮ್ಯತೆ ಇರುವ ರಾಜ್ಯಗಳ ಮಾನದಂಡ ಅನುಸರಿಸಿ ಖನಿಜಗಳ ಮೇಲಿನ ರಾಜಧನ ಪರಿಷ್ಕರಿಸಬೇಕು, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಸಲು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದೆ.

    ರಾಜ್ಯದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಕ್ರೋಡೀಕರಿಸಲು ಅನುತ್ಪಾದಕ ವೆಚ್ಚ ಕಡಿಮೆ ಮಾಡಬೇಕು, ಅನಗತ್ಯ ಹುದ್ದೆ ಗುರುತಿಸುವುದು ಅವಶ್ಯವೆಂದು ಸಮಿತಿ ಹೇಳಿದೆ. ಅನರ್ಹ ಕುಟುಂಬಗಳನ್ನು ಬಿಪಿಎಲ್ ವ್ಯಾಪ್ತಿಯಿಂದ ಬೇರ್ಪಡಿಸಿ ಸಹಾಯಧನದ ಹೊರೆ ಕಡಿಮೆ ಮಾಡಿಕೊಳ್ಳಬೇಕು, ಹೆಚ್ಚಿದ ವಿದ್ಯುತ್ ಉತ್ಪಾದನಾ ವೆಚ್ಚದಿಂದ ವಿದ್ಯುತ್ ಕಂಪನಿಗಳ ಸ್ಥಿತಿಗತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು, ಆಸ್ತಿ ನಗದೀಕರಣದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುವುದರಿಂದ ಹಾಗೂ ರಾಜ್ಯದಲ್ಲಿ ಹೂಡಿಕೆ ಹೆಚ್ಚಾಗುವುದರಿಂದ ಆಸ್ತಿ ನಗದೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸಮಿತಿ ನಿರ್ದೇಶಿಸಿದೆ.

    ಗ್ಯಾರಂಟಿ ಅನುಷ್ಠಾನ ಶ್ಲಾಘನೆ: ಸರ್ಕಾರದ ಐದು ಮಹತ್ವಾಕಾಂಕ್ಷಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇರುವ ಸಂಕೀರ್ಣತೆಗಳನ್ನು ಅಲ್ಪಾವಧಿಯಲ್ಲೇ ನಿವಾರಿಸಿ ಹಾಗೂ ವಿತ್ತೀಯ ಕೊರತೆ ಶೇ.3 ರಷ್ಟು ಮಿತಿ ಉಲ್ಲಂಘಿಸದೆ ಗ್ಯಾರಂಟಿ ಯೋಜನೆಗಳ ಜಾರಿಗೆ ಅಗತ್ಯ ಸಂಪನ್ಮೂಲ ಕ್ರೋಡೀಕರಿಸಲು ಕೈಗೊಂಡ ಆರ್ಥಿಕ ಇಲಾಖೆಯ ಪ್ರಯತ್ನವನ್ನು ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆಯಲ್ಲಿ ಶ್ಲಾಘಿಸಲಾಗಿದೆ.

    ಯಾವುದೇ ಸಾಲ ಪಡೆದಿಲ್ಲ: ಪ್ರಸಕ್ತ ಹಣಕಾಸು ವರ್ಷದಲ್ಲಿ ಮುಕ್ತ ಮಾರುಕಟ್ಟೆಯಿಂದ 78,363 ಕೋಟಿ ರೂ. ಸಾಲ ಪಡೆಯುವುದಾಗಿ ಅಂದಾಜಿಸಲಾಗಿತ್ತು. ಪ್ರಥಮಾರ್ಧದಲ್ಲಿ ಯಾವುದೇ ಸಾಲ ಪಡೆದಿಲ್ಲ. ರಾಜ್ಯವು ಆರ್​ಬಿಐ ಸಲಹೆ ನೀಡಿರುವಂತೆ ಗ್ಯಾರಂಟೀ ರಿಡಂಪ್ಶನ್ ಫಂಡ್(ಜಿಆರ್​ಎಫ್) ರೂಪಿಸಿದೆ. ಮತ್ತು ಹೂಡಿಕೆಯನ್ನು ಮಾಡುವ ಮೂಲಕ ಈ ನಿಧಿಯ ಮೊತ್ತವನ್ನು ಹೆಚ್ಚಿಸಿ ಯಾವುದೇ ಅನಿಶ್ಚಿತ ಸಂದರ್ಭ ಬಂದಲ್ಲಿ ಅದನ್ನು ಬಳಸಿಕೊಳ್ಳಲಿದೆ.

    ಗ್ಯಾರಂಟಿಗಳಿಗೆ ವೆಚ್ಚ

    ಶಕ್ತಿ: ಆಯವ್ಯಯದಲ್ಲಿ 2800 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಸೆಪ್ಟಂಬರ್ ಅಂತ್ಯಕ್ಕೆ 785.48 ಕೋಟಿ ರೂ. ವೆಚ್ಚ ಮಾಡಲಾಗಿದೆ.

    ಗೃಹಜ್ಯೋತಿ: ಬಜೆಟ್​ನಲ್ಲಿ 9000 ಕೋಟಿ ರೂ. ಹಂಚಿಕೆ ಮಾಡಿದ್ದು, ಸೆಪ್ಟಂಬರ್ ಅಂತ್ಯಕ್ಕೆ 1401.55 ಕೋಟಿ ರೂ. ವೆಚ್ಚ ಮಾಡಲಾಗಿದೆ.

    ಅನ್ನಭಾಗ್ಯ: ಬಜೆಟ್​ನಲ್ಲಿ 7307 ಕೋಟಿ ರೂ. ನಿಗದಿಪಡಿಸಿದ್ದು, ಸೆಪ್ಟಂಬರ್ ಅಂತ್ಯಕ್ಕೆ 1802.58 ಕೋಟಿ ವ್ಯಯಿಸಲಾಗಿದೆ.

    ಗೃಹಲಕ್ಷ್ಮಿ: ಆಯವ್ಯಯದಲ್ಲಿ 17,500 ಕೋಟಿ ರೂ. ಹಂಚಿಕೆ ಮಾಡಿದ್ದು, ಸೆಪ್ಟಂಬರ್ ಅಂತ್ಯಕ್ಕೆ 1,897.28 ಕೋಟಿ ರೂ. ಖರ್ಚು ಮಾಡಲಾಗಿದೆ.

    ಪ್ರಮುಖ ಅಂಶಗಳು

    • ಐದು ಗ್ಯಾರಂಟಿ ಕಾರ್ಯಕ್ರಮ ಜಾರಿ ಮಾಡಿ ದೇಶದಲ್ಲಿಯೇ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸಿದ ರಾಜ್ಯ ಕರ್ನಾಟಕ.
    • ಅನಾವೃಷ್ಟಿಯಿಂದ ಜೋಳ, ಹೆಸರು, ಉದ್ದು, ಕಾಫಿ, ಕಬ್ಬು ಹಾಗೂ ಅಡಕೆ ಬೆಳೆಗಳು ಹಾನಿಯಾಗಿವೆ. ಮುಂಗಾರಿನಲ್ಲಿ 33,770.10 ಕೋಟಿ ರೂ. ನಷ್ಟವಾಗಿದೆ. ಬರಗಾಲವು ರಾಜ್ಯದ ಜಿಎಸ್​ಡಿಪಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts