More

    ಟಿ20 ವಿಶ್ವಕಪ್‌ನಲ್ಲಿ ಹೀರೋ ಆಗಿ ಮಿಂಚಿದ ರಗ್ಬಿ ಆಟಗಾರನ ಪುತ್ರ!

    ದುಬೈ: ಸತತ 3ನೇ ಐಸಿಸಿ ಟೂರ್ನಿಯಲ್ಲಿ (ಮೂರೂ ಭಿನ್ನ ಪ್ರಕಾರದವು ಎಂಬುದು ಇನ್ನಷ್ಟು ವಿಶೇಷ) ಮತ್ತು ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿ ಫೈನಲ್‌ಗೆ ಪ್ರವೇಶಿಸುವ ಮೂಲಕ ನ್ಯೂಜಿಲೆಂಡ್ ತಂಡ ಅಮೋಘ ಸಾಧನೆ ತೋರಿದೆ. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಕಿವೀಸ್ ತಂಡದ ಈ ಕನಸು ನನಸಾಗಿಸಿದವರು ಆಲ್ರೌಂಡರ್ ಡೆರಿಲ್ ಮಿಚೆಲ್. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜವಾಬ್ದಾರಿಯುತ ಆಟವಾಡುವ ಮೂಲಕ ಮಿಚೆಲ್ (72*ರನ್, 47 ಎಸೆತ, 4 ಬೌಂಡರಿ, 4 ಸಿಕ್ಸರ್) ಕಿವೀಸ್ ಗೆಲುವಿನ ಹೀರೋ ಎನಿಸಿದರು.

    ತಂದೆಯ ಇಚ್ಛೆಗೆ ವಿರುದ್ಧವಾಗಿ ತಾನು ಆಯ್ದುಕೊಂಡ ಕ್ರೀಡೆಯಲ್ಲಿ ಅವರು ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. 30 ವರ್ಷದ ಡೆರಿಲ್ ಮಿಚೆಲ್ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 21ನೇ ಟಿ20 ಪಂದ್ಯದಲ್ಲಿ ವಿಶ್ವದ ಗಮನ ಸೆಳೆದಿದ್ದಾರೆ.

    ಡೆರಿಲ್ ಮಿಚೆಲ್ ಅವರ ತಂದೆ ಜಾನ್ ಮಿಚೆಲ್ ನ್ಯೂಜಿಲೆಂಡ್‌ನ ಜನಪ್ರಿಯ ರಗ್ಬಿ ಆಟಗಾರ. ‘ಆಲ್ ಬ್ಲ್ಯಾಕ್ಸ್’ ಖ್ಯಾತಿಯ ಕಿವೀಸ್ ರಗ್ಬಿ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಜಾನ್ ಮಿಚೆಲ್ ಸದ್ಯ ಇಂಗ್ಲೆಂಡ್ ರಗ್ಬಿ ತಂಡದ ಡಿಫೆನ್ಸ್ ಕೋಚ್ ಆಗಿದ್ದಾರೆ. ಆದರೆ ಡೆರಿಲ್ ಮಿಚೆಲ್ ಶಾಲಾ ಮಟ್ಟದಲ್ಲಿ ರಗ್ಬಿ ಆಡಿದ್ದರೂ ಬಳಿಕ ಕ್ರಿಕೆಟ್‌ನತ್ತ ಆಕರ್ಷಿತರಾಗಿದ್ದರು.

    ಕಿವೀಸ್ ದೇಶೀಯ ಟಿ20 ಟೂರ್ನಿಗಳಲ್ಲಿ ಕಳೆದ 5 ವರ್ಷಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ ಡೆರಿಲ್ ಮಿಚೆಲ್. ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿದ್ದ ಡೆರಿಲ್, 2019ರಲ್ಲಿ ಕಾಲಿನ್ ಗ್ರಾಂಡ್‌ಹೋಮ್ ಗಾಯಗೊಂಡಾಗ ಕಿವೀಸ್ ತಂಡದಲ್ಲಿ ಹೆಚ್ಚಿನ ಅವಕಾಶ ಪಡೆಯಲಾರಂಭಿಸಿದರು. ಮಧ್ಯಮ ವೇಗಿಯಾಗಿಯೂ ತಂಡಕ್ಕೆ ನೆರವಾಗುತ್ತಿದ್ದರು. ಟಿ20 ವಿಶ್ವಕಪ್ ವೇಳೆಗೆ ಅವರು ಅನಿರೀಕ್ಷಿತವಾಗಿ ಆರಂಭಿಕರಾಗಿ ಬಡ್ತಿ ಪಡೆದರು. ವಿಶ್ವಕಪ್‌ಗೆ ಮುನ್ನ ಅವರೆಂದೂ ಆರಂಭಿಕರಾಗಿ ಆಡಿರಲಿಲ್ಲ. ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಆಡುವ ಅವರ ಸಾಮರ್ಥ್ಯ ಅವರ ಈ ಬಡ್ತಿಗೆ ಕಾರಣ. ಯುಎಇ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಹೊಸ ಚೆಂಡಿನಿಂದಲೇ ದಾಳಿಗಿಳಿಯಬಹುದು ಎಂಬ ಲೆಕ್ಕಾಚಾರದಲ್ಲಿ ಕಿವೀಸ್ ಈ ಕಾರ್ಯತಂತ್ರ ರೂಪಿಸಿತ್ತು. ಗುಪ್ಟಿಲ್‌ಗೆ ಮೊದಲ ಆಯ್ಕೆಯ ಆರಂಭಿಕ ಜತೆಗಾರರಾಗಿದ್ದ ಡೆವೊನ್ ಕಾನ್‌ವೇ ಸ್ಪಿನ್ ವಿರುದ್ಧ ದೌರ್ಬಲ್ಯ ಹೊಂದಿರುವುದರಿಂದ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದರು.

    ಕಿವೀಸ್ ಗೆದ್ದರೂ ಸಂಭ್ರಮಿಸಲಿಲ್ಲ ನೀಶಾಮ್, ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts