More

    ಕೆರೆ, ಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ಹೆಚ್ಚಳ: ತಡಸ ಗ್ರಾ.ಪಂ. ಅಧ್ಯಕ್ಷೆ ರೂಪಾ ಸಣ್ಣಬಾರ್ಕಿ ಕಿವಿಮಾತು

    ಬ್ಯಾಡಗಿ: ರೈತರ ಜೀವನಾಡಿಯಾಗಿರುವ ಕೆರೆಕಟ್ಟೆಗಳನ್ನು ರಕ್ಷಿಸಿ ಜೋಪಾನ ಮಾಡಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಅಂತರ್ಜಲ ಸಮಸ್ಯೆ ಎದುರಿಸಬೇಕಿದೆ. ಈ ಕುರಿತು ರೈತರು ಹಾಗೂ ಸಾರ್ವಜನಿಕರಲ್ಲಿ ಮುಂಜಾಗೃತಿ ಅಗತ್ಯ ಎಂದು ತಡಸ ಗ್ರಾ.ಪಂ. ಅಧ್ಯಕ್ಷೆ ರೂಪಾ ಸಣ್ಣಬಾರ್ಕಿ ತಿಳಿಸಿದರು.

    ತಾಲೂಕಿನ ತಡಸ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮೂರು ಕೆರೆ ಅಭಿವೃದ್ಧಿ ಯೋಜನೆಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಾಡಿನ ಪರಿಸರ ಸೇರಿದಂತೆ ಜಲಸಂಪತ್ತು ಉಳಿಸಬೇಕೆಂಬ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಧ್ಯೇಯ ಉತ್ತಮವಾಗಿದೆ. ಸರ್ಕಾರ, ಸಂಘ, ಸಂಸ್ಥೆಗಳು ಮಹತ್ವದ ಕಾರ್ಯಕ್ರಮಗಳಿಗೆ ಕೈಜೋಡಿಸುವ ಮೂಲಕ ನಮ್ಮೂರ ಹೊಂಡ, ಕೆರೆ, ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿಕೊಂಡು, ನೀರು ಸಂಗ್ರಹ ಮಾಡಿಕೊಳ್ಳಬೇಕು. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಮಧ್ಯೆ ರೈತರು ನಲುಗಿ ಹೋಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಇನ್ಮುಂದೆ ಉದ್ಭವಿಸುವ ಸಾಧ್ಯತೆಯಿದ್ದು, ಮುಂಜಾಗೃತೆ ವಹಿಸದಿದ್ದಲ್ಲಿ ತೀವ್ರ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

    ಗ್ರಾಮಾಭಿವೃದ್ದಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಅತಿಹೆಚ್ಚು ಕೆರೆಕಟ್ಟೆಗಳಿರುವ ಕಾರಣದಿಂದ 207 ಕೆರೆಗಳನ್ನು ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿಯಲ್ಲಿ ಪುನಶ್ಚೇತನಗೊಳಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ 1.66 ಕೋ.ರೂ ಅನುದಾನ ಬಿಡುಗಡೆಯಾಗಿದ್ದು, ಸ್ಥಳೀಯರೂ ತಮ್ಮ ಪಾಲು ತೊಡಗಿಸಿರುವುದು ಜವಾಬ್ದಾರಿ ಹೆಚ್ಚಲು ಕಾರಣವಾಗಿದೆ ಎಂದರು.

    ಗ್ರಾ.ಪಂ. ಉಪಾಧ್ಯಕ್ಷ ದಾದಾಪೀರ ಹಳೇವೂರ, ಸದಸ್ಯರಾದ ದಿಲೀಪ ಮೇಗಳಮನಿ, ಪಿಡಿಒ ರಹಮತ್ ಬಿ., ವಲಯ ಯೋಜನಾಧಿಕಾರಿ ಎಸ್. ರಘುಪತಿ ಗೌಡ, ವ್ಯವಸ್ಥಾಪಕರಾದ ವಸಂತ್ ಸಾಲ್ಯಾನ್, ನಾಗರಾಜ್ ಶೆಟ್ಟಿ, ನಿಂಗರಾಜ ಹಾವೇರಿ, ಮೇಲ್ವಿಚಾರಕಿ ಉಮಾ ಸತೀಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts