More

    ಶೇಂಗಾ ಬಿತ್ತನೆಗೆ ತಂತ್ರಜ್ಞಾನ ಸ್ಪರ್ಶ

    ಕೋಟ: ಕೋಟ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಬಿತ್ತನೆ ಬಿರುಸಿನಿಂದ ಸಾಗುತ್ತಿದೆ. ಕೋಟ, ಸಾಲಿಗ್ರಾಮ ತೆಕ್ಕಟ್ಟೆ ವ್ಯಾಪ್ತಿಯಲ್ಲಿ ಟ್ರಾೃಕ್ಟರ್ ಹಾಗೂ ಟಿಲ್ಲರ್‌ಗಳ ಮೂಲಕ ಬಿತ್ತನೆ ನಡೆಯುತ್ತಿರುವುದು ವಿಶೇಷವಾಗಿದೆ.
    ಕೋಟತಟ್ಟು ಭಾಗದ ಆನಂದ ಪೂಜಾರಿ, ಶಿವಮೂರ್ತಿ ಉಪಾಧ್ಯ, ಮಣೂರು ಪಡುಕರೆ ಭಾಗದ ಶಿವ ಪೂಜಾರಿ, ಭಾಸ್ಕರ್ ಶೆಟ್ಟಿ, ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಆವಿಷ್ಕಾರಗಳ ಮೂಲಕ ರೈತ ಸಮುದಾಯಕ್ಕೆ ಸರಳ ಕೃಷಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಕೋಟತಟ್ಟು ಆನಂದ್ ಪೂಜಾರಿ ಹಾಗೂ ಮಣೂರು ಶಿವ ಪೂಜಾರಿ ಟಿಲ್ಲರ್‌ಗೆ ಶೇಂಗಾ ಬಿತ್ತನೆ ಯಂತ್ರ ಅಳವಡಿಸಿ ಕೂಲಿಯಾಳುಗಳಿಲ್ಲದೆ ಬಿತ್ತನೆ ನಡೆಸುತ್ತಿದ್ದಾರೆ. ಇದರಿಂದ ಕಡಿಮೆ ವೆಚ್ಚದಲ್ಲಿ ಬಿತ್ತನೆ ನಡೆದಿದೆ.

    ಹಲವೆಡೆ ನೇಗಿಲು ಸಿದ್ಧಪಡಿಸಿ ಕೊಳವೆ ಕುಣಿಲು ನಿರ್ಮಿಸಿ ಸೈಕಲ್ ಚೈನ್ ಅಳವಡಿಸಿ ಶೇಂಗಾ ಬಿತ್ತನೆ ಯಂತ್ರ ತಯಾರಿಸಿದ್ದಾರೆ. ಇದರಿಂದ ಕಳೆದ ಎರಡು ವರ್ಷಗಳಿಂದ ಈ ರೀತಿಯ ಬಿತ್ತನೆ ಕಾರ್ಯಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಅಲ್ಲದೆ ನೇಗಿಲು ಭೂಮಿಯ ಸ್ವಲ್ಪ ಮಟ್ಟಿನ ಆಳಕ್ಕಿಳಿಯುವುದರಿಂದ ತಳಭಾಗದ ಮಣ್ಣು ಮೇಲೆ ಬೀಳುವುದರಿಂದ ಕಳೆ ಕಡಿಮೆಗೊಳ್ಳುವುದಲ್ಲದೆ, ತೇವಾಂಶವೂ ಸಿಗಲಿದೆ.
    ಸಾಂಪ್ರದಾಯಿಕವಾಗಿ ಕೋಣಗಳ ಮೂಲಕ ದಿನಕ್ಕೆ 70ರಿಂದ 80 ಸೆಂಟ್ಸ್ ಭೂ ಪ್ರದೇಶದಲ್ಲಿ ಶೇಂಗಾ ಬಿತ್ತನೆ ನಡೆಸಬಹುದು. ಟಿಲ್ಲರ್‌ನಲ್ಲಿ ಸಿದ್ಧಪಡಿಸಿದ ಕೂರಿಗೆ ಯಂತ್ರದ ಮೂಲಕ ಒಂದು ದಿನಕ್ಕೆ ಎರಡು ಎಕರೆ ಭೂ ಪ್ರದೇಶದಲ್ಲಿ ಬಿತ್ತನೆ ನಡೆಸಬಹುದಾಗಿದೆ.

    ಕೃಷಿ ಕ್ಷೇತ್ರ ಎಂಬುವುದು ಸಂಪ್ರದಾಯಬದ್ಧವಾಗಿ ಅಳೆಯುವ ದಿಸೆಯಲ್ಲಿ ನೇಗಿಲು ಕೂರಿಗೆ ಯಂತ್ರ ಅಳವಡಿಸಿದ್ದೇವೆ. ತಂದೆಯ ನಿರ್ದೇಶನದೊಂದಿಗೆ ಕೂರಿಗೆ ಯಂತ್ರದ ತಂತ್ರಜ್ಞಾನಕ್ಕೆ ಕೈಜೋಡಿಸಿ ಯಶಸ್ವಿಯಾಗಿದ್ದೇವೆ. ಬಹಳಷ್ಟು ಕಡೆಗಳಿಂದ ಬೇಡಿಕೆ ವ್ಯಕ್ತವಾಗಿದೆ.
    ಗಣೇಶ್ ಪೂಜಾರಿ ಕೋಟತಟ್ಟು, ಯುವ ಕೃಷಿಕ

    ಪ್ರತಿ ಬಾರಿ ಕೋಣ ಹಾಗೂ ಟಿಲ್ಲರ್, ಟ್ರಾೃಕ್ಟರ್‌ಗಳ ಮೂಲಕ ಕೂಲಿಯಾಳುಗಳ ನೆರವಿನೊಂದಿಗೆ ಬಿತ್ತನೆ ಕಾರ್ಯ ನಡೆಸುತ್ತಿದ್ದೇವೆ. ಕೂಲಿಯಾಳುಗಳ ಸಮಸ್ಯೆ, ಅದರ ಅಧಿಕ ವೆಚ್ಚ ಗಮನಿಸಿ ಈ ಬಾರಿ ಟಿಲ್ಲರ್ ಕೂರಿಗೆ ಯಂತ್ರದ ಮೂಲಕ ಬಿತ್ತನೆ ಕಾರ್ಯ ನಡೆಸಿದ್ದೇವೆ. ಕಡಿಮೆ ವೆಚ್ಚದಲ್ಲಿ ಲಾಭದಾಯಕ ಕೃಷಿಯಾಗಿಸಲು ಇದು ಸಹಕಾರಿಯಾಗಿದೆ.
    ರಾಘವೇಂದ್ರ ಪೂಜಾರಿ ಕೋಟ, ಯುವ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts