More

    ಹಾವೇರಿಯಲ್ಲಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್

    ಹಾವೇರಿ: ಜಿಲ್ಲಾ ಕೇಂದ್ರವಾಗಿ 25 ವರ್ಷವಾದ ನಂತರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜ್ ಆರಂಭಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್​ಎಂಸಿ) ಅನುಮತಿ ನೀಡಿದೆ.

    2022-23ನೇ ಶೈಕ್ಷಣಿಕ ಸಾಲಿನಲ್ಲಿ ಹಾವೇರಿ ಮೆಡಿಕಲ್ ಕಾಲೇಜ್​ಗೆ(ಹಿಮ್್ಸ) 150 ಎಂಬಿಬಿಎಸ್ ಸೀಟುಗಳ ಪ್ರವೇಶಕ್ಕೆ ಅನುಮತಿ ದೊರೆತಿದೆ.

    ಕಳೆದ ವರ್ಷವೇ ಮೆಡಿಕಲ್ ಕಾಲೇಜ್ ತರಗತಿ ಆರಂಭವಾಗುವ ನಿರೀಕ್ಷೆಯಿತ್ತು. ಜನಪ್ರತಿನಿಧಿಗಳು ಭರವಸೆಗಳನ್ನು ನೀಡಿದ್ದರು. ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಕಟ್ಟಡದಲ್ಲಿಯೇ ತಾತ್ಕಾಲಿಕವಾಗಿ ಮೆಡಿಕಲ್ ಕಾಲೇಜ್ ತರಗತಿ ನಡೆಸಲು ಅಗತ್ಯ ಸಿದ್ಧತೆ ನಡೆಸಲಾಗಿತ್ತು. ಆದರೆ, ಮೂಲಸೌಕರ್ಯ ಕೊರತೆ ಕಾರಣಕ್ಕೆ ಎನ್​ಎಂಸಿ ಅನುಮತಿ ನೀಡಲಿಲ್ಲ. ಹೀಗಾಗಿ ಕಟ್ಟಡ ಕಾಮಗಾರಿಯನ್ನು ಚುರುಕುಗೊಳಿಸಲಾಗಿತ್ತು.

    ಇದೀಗ ದೇವಗಿರಿಯಲ್ಲಾಪುರ ಬಳಿ ನೂತನ ವೈದ್ಯಕೀಯ ಕಾಲೇಜ್ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿರುವುದರಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗವು 2022-23ನೇ ಸಾಲಿನಿಂದಲೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಪ್ರವೇಶ ಪರೀಕ್ಷೆ ಬರೆದು ಮೆಡಿಕಲ್ ಸೀಟಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಹಾವೇರಿಯಲ್ಲಿ ಆರಂಭವಾಗುವ ಕಾಲೇಜ್​ನಲ್ಲಿ ಸೀಟು ಪಡೆಯಲು ಸಾಧ್ಯವಾಗಲಿದೆ. 150 ಎಂಬಿಬಿಎಸ್ ಸೀಟು ಪ್ರವೇಶಕ್ಕೆ ಅವಕಾಶ ಲಭಿಸಲಿದೆ. ಇದರಿಂದ ಜಿಲ್ಲೆಯ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ.

    ಕಾಲೇಜ್ ಆರಂಭಿಸಲು ಬೊಮ್ಮಾಯಿ ಪಣ

    ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಹಲವು ಬಾರಿ ಸಭೆ ನಡೆಸಿ ವೈದ್ಯಕೀಯ ಕಾಲೇಜ್​ನ ಕಟ್ಟಡ ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಬರುವ ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಮುಖ್ಯ ಕಟ್ಟಡ, 70 ಹಾಸಿಗೆಗಳ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಸಂಕೀರ್ಣ, ತುರ್ತು ನಿಗಾ ಘಟಕ ಹಾಗೂ ಆಥೋ ಘಟಕಗಳ ಸಂರ್ಕೀಣ ನಿರ್ವಣವಾಗುತ್ತಿದೆ. ಐದು ಅಂತಸ್ತಿನ 375 ವಿದ್ಯಾರ್ಥಿಗಳು ವಾಸ ಮಾಡುವ ಬಾಲಕರ ವಿದ್ಯಾರ್ಥಿ ನಿಲಯ, ಐದು ಅಂತಸ್ತಿನ 375 ವಿದ್ಯಾರ್ಥಿನಿಯರ ಬಾಲಕಿಯರ ವಿದ್ಯಾರ್ಥಿ ನಿಲಯ, ನಾಲ್ಕು ಅಂತಸ್ತಿನ 32 ಬೋಧಕರ, ವೈದ್ಯರ ವಸತಿಗೃಹಗಳು, ಆರು ಅಂತಸ್ತಿನಲ್ಲಿ 48 ಬೋಧಕೇತರ ವಸತಿಗೃಹಗಳು, ಆರು ಅಂತಸ್ತಿನ ಶುಶ್ರೂಷಕಿಯರ 72 ವಸತಿ ಗೃಹಗಳು, ಡೀನ್ ಹಾಗೂ ಪ್ರಾಂಶುಪಾಲರಿಗಾಗಿ ತಲಾ ಒಂದು ವಸತಿ ಗೃಹಗಳ ನಿರ್ಮಾಣ ಪ್ರಗತಿಯಲ್ಲಿದೆ.

    ಸೆಪ್ಟೆಂಬರ್ ವೇಳೆಗೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಯಲಿದ್ದು, ಆರಂಭಿಕವಾಗಿ ಇಂಜಿನಿಯರಿಂಗ್ ಕಾಲೇಜ್​ನಲ್ಲೇ ತರಗತಿ ನಡೆಸಲು ಉದ್ದೇಶಿಸಲಾಗಿದೆ. ನವೆಂಬರ್ ವೇಳೆಗೆ ಸ್ವಂತ ಕಟ್ಟಡ ಪೂರ್ಣಗೊಳ್ಳಲಿದ್ದು, ಬಳಿಕ ಅಲ್ಲಿಯೇ ಎಂಬಿಬಿಎಸ್ ವಿದ್ಯಾರ್ಥಿಗಳ ತರಗತಿ ನಡೆಯಲಿವೆ. ಹಿಮ್ಸ್​ನ ನಿರ್ದೇಶಕರನ್ನಾಗಿ ಡಾ. ಉದಯ ಮುಳಗುಂದ ಅವರನ್ನು ಈಚೆಗೆ ಸರ್ಕಾರ ನೇಮಕ ಮಾಡಿದೆ. ಈಗಾಗಲೇ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆ ನೇಮಕ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ.

    5 ಪ್ರೊಫೆಸರ್, 17 ಅಸೋಸಿಯೇಟ್ ಪ್ರೊಫೆಸರ್, 31 ಅಸಿಸ್ಟಂಟ್ ಪ್ರೊಫೆಸರ್, 14 ಸೀನಿಯರ್ ರೆಸಿಡೆಂಟ್ ಹಾಗೂ 12 ಟ್ಯೂಟರ್ಸ್ ಸೇರಿದಂತೆ 79 ಹುದ್ದೆ ನೇಮಕಾತಿಗೆ ಈಗಾಗಲೇ ಸಂದರ್ಶನ ಪೂರ್ಣಗೊಂಡಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಇದರಲ್ಲಿ 53 ಕಾಯಂ ಹುದ್ದೆಗಳಿಗೆ ಮತ್ತು 26 ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅಂತಿಮ ಆಯ್ಕೆ ಪಟ್ಟಿ ಶೀಘ್ರದಲ್ಲಿ ಪ್ರಕಟಿಸಲಾಗುವುದು.

    | ಡಾ. ಉದಯ ಮುಳಗುಂದ, ನಿರ್ದೇಶಕ, ಹಿಮ್್ಸ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts